ನಮಗೆ ಮತ್ತಿನ್ನೇನು ಬೇಕು?

17 ಸೆಪ್ಟೆಂ 12

ಪ್ರತಿಯೊಬ್ಬ ಓದುಗರೂ ವಿಮರ್ಶಕರು ಹೇಗಾಗುವರು
ಸಾವಿರಾರು ಓದುಗರಲ್ಲಿಹರು ಒಂದಿಬ್ಬರೇ ವಿಮರ್ಶಕರು

ಬರಹಗಾರರೆಲ್ಲರೂ ಇಲ್ಲಿ ವಿಮರ್ಶಕರೇ ಎಂದೇನೂ ಅಲ್ಲ
ಪ್ರತಿಕ್ರಿಯೆಗಳು ವಿಮರ್ಶೆಯೂ ಆಗಿರಬೇಕೆಂದೇನೂ ಇಲ್ಲ

ಪ್ರಕಟವಾದ ಒಂದು ಪುಸ್ತಕಕ್ಕೆಷ್ಟು ಬರುತ್ತವೆ ವಿಮರ್ಶೆಗಳು
ಆದರೂ ಎಲ್ಲಿ ಕಡಿಮೆ ಆಗಿದ್ದಾರೆ ಹೇಳಿ ಓದುಗ ಬಂಧುಗಳು

ಓದುಗರೆಲ್ಲರಿಂದಲೂ ವಿಮರ್ಶೆಗಳನ್ನಿಲ್ಲಿ ನಿರೀಕ್ಷಿಸಲಾಗದು
ಪ್ರತಿಕ್ರಿಯಿಸದೇ ಇರುವ ಓದುಗರನ್ನೂ ನಾ ತೆಗಳಲಾಗದು

ಬರೆದವನ ಮಾತು ತಟ್ಟಿದ ಹೃದಯಗಳ ಸಂಖ್ಯೆಯು ಮುಖ್ಯ
ವಿಮರ್ಶೆಯ ನೆಪದಲ್ಲಿ ಜನ್ಮ ಜಾಲಾಡುವುದಕ್ಕಲ್ಲ ಪ್ರಾಮುಖ್ಯ

ಈ ಮನದ ಭಾವನೆ ಓದುಗನ ಹೃದಯವನು ಹೊಕ್ಕರೆ ಸಾಕು
ಇನ್ನೊಂದು ಬರಹಕ್ಕೆ ಕಾಯುವವರಿರಲು ಮತ್ತಿನ್ನೇನು ಬೇಕು?

*****