ನುಡಿಸಿರಿಯಲ್ಲಿ ಭಾಗಿಯಾಗದ ಕನ್ನಡಿಗ ದುರ್ದೈವಿ!

02 ನವೆಂ 10

ಆಳು ಕಾಳುಗಳಿದ್ದೂ, ಇನ್ನಾವ ಆಳುವವರೂ, ಮಾಡಿರದ ಮಹತ್ಕಾರ್ಯ
ಡಾ. ಮೋಹನ ಆಳ್ವರು ಮಾಡಿ ತೋರಿಸುತ್ತಿದ್ದಾರಲ್ಲಿ ಕನ್ನಡದ ಕೈಂಕರ್ಯ

ಆಳ್ವಾಸ್ ನುಡಿಸಿರಿಯಲ್ಲಿ ಕನ್ನಡದ ಸಿರಿಯೆಮ್ಮ ಮೈಮನ ತುಂಬುವುದು
ರೋಮಾಂಚನಗೊಳಿಸುವ ಹೊಸ ಹೊಸ ಅನುಭವ ನಮಗಾಗುವುದು

ಮೂಡಬಿದರೆಯ ವಿದ್ಯಾಗಿರಿಗೆ ಕಾಲಿಟ್ಟ ಕ್ಷಣದಿಂದ ಭಾವನಾ ಲೋಕದಲ್ಲಿ
ತಂತಾನೇ ಸಾಗಿ ಭಾವ ಬಂಧನದಲ್ಲಿ ಬಂಧಿಯಾಗುವರು ಎಲ್ಲರೂ ಅಲ್ಲಿ

ಮೂರು ದಿನಗಳಲ್ಲಿ ಹತ್ತಿಪ್ಪತ್ತು ಗ್ರಂಥಗಳ ಓದಿದಂತಹ ಅನುಭವ ನಮಗೆ
ಯಾವುದೋ ಸೆಳೆತಕ್ಕೊಳಗಾಗಿ ಎತ್ತಲೋ ಸಾಗುತ್ತಿರುವನುಭವ ನಮಗೆ

ಕರಾವಳಿಯ ಕಲೆಗಳಾದ ಯಕ್ಷಗಾನ, ಭೂತಾರಾಧನೆ, ಡೋಲು ವಾದನ
ಇವೆಲ್ಲದರ ನಡುವಿನ ಸಾಹಿತ್ಯ ಲೋಕದಲ್ಲಿ ಅರಳುವುದು ಅಲ್ಲಿ ಎಲ್ಲರ ಮನ

ಯಾವುದೂ ಅತಿಯಲ್ಲ ಯಾವುದಕ್ಕೂ ಮಿತಿಯಿಲ್ಲ ಅನ್ನುವ ವಿಶಿಷ್ಟ ಶೈಲಿಯಲಿ
ಸಂಯೋಜನೆಗೊಂಡ ಈ ಹಬ್ಬ ಬೇರೆ ಎಲ್ಲೂ ನಡೆದಿರಲಾರದು ಈ ನಾಡಿನಲಿ

ಅಚ್ಚುಕಟ್ಟಿನ ನಿರ್ವಹಣೆಯೇ ಎಲ್ಲಾ  ಕಾರ್ಯಕ್ರಮಗಳಲ್ಲೂ ಪ್ರಮುಖಾಕರ್ಷಣೆ
ಎಲ್ಲೂ ಯಾರ ಮನದಲ್ಲೂ ಬೇಸರ ಮೂಡಿಸದ ತೆರದಿ, ಇದೆ ಸಂಯೋಜನೆ

ನೂರು ರೂಪಾಯಿಗಳಿಗೆ ಮೂರು ದಿನವೂ ವಾಹನ ವಸತಿ ಊಟೋಪಚಾರ
ಆ ಮೂರು ದಿನಗಳಲ್ಲೂ ಅಲ್ಲಿ ಯಾರೂ ತೋರಿದ್ದೇ ಇಲ್ಲ ಕಿಂಚಿತ್ತೂ ತಿರಸ್ಕಾರ

ಜೋಗವ ಮರೆತರೂ ಪರವಾಗಿಲ್ಲ, ಆಳ್ವಾಸ್ ನುಡಿಸಿರಿಯಲಿ ಭಾಗಿಯಾಗಿ ಬನ್ನಿ
ಆಳ್ವಾಸ್ ನುಡಿಸಿರಿಯಲ್ಲಿ ಭಾಗಿಯಾಗದ ಕನ್ನಡಿಗ ನಿಜಕ್ಕೂ ದುರ್ದೈವಿಯೇ ಅನ್ನಿ
********