ಆಕೆ ಅಮ್ಮಳಾಗಿಹಳು!

19 ಆಕ್ಟೋ 10

ನನ್ನ ಕಣ್ಮುಂದೆ ನುಡಿ ನಡೆಯ ಕಲಿತಿದ್ದವಳು,
ಚಿತ್ರ ಬಿಡಿಸಿ ತಂದು ನನಗೆ ಒಪ್ಪಿಸುತ್ತಿದ್ದವಳು,
ನನ್ನಿಂದ ಕೈಹಿಡಿಸಿಕೊಂಡು ಬರೆಯ ಕಲಿತ್ತಿದ್ದವಳು,
ತನ್ನ ನೃತ್ಯಕ್ಕೆ ನನ್ನನ್ನು ಸಾಕ್ಷಿಯಾಗಿಸುತ್ತಿದ್ದವಳು,
ಅಕ್ಕರೆಯಿಂದ ತೊಡೆಗಳನೇರಿ ಕೂರುತ್ತಿದ್ದವಳು,
ನನ್ನೆಲ್ಲಾ ಕತೆಗಳಿಗೆ ಕಿವಿಯಾಗಿ ಆಲಿಸುತ್ತಿದ್ದವಳು,
ಇಂದು ತನ್ನದೇ ಕಂದಮ್ಮನಿಗೆ ತಾಯಿಯಾಗಿ,
ಅಲ್ಲಿ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿಹಳು;

ಅಬ್ಬಬ್ಬಾ ಕಾಲದ ಮಹಿಮೆಯೇ!
ಅಬ್ಬಬ್ಬಾ ಈ ಕಾಲದ ವೇಗವೇ!


ವಾಯುಸೇನೆಯಲ್ಲಿ ನನ್ನ ಜೊತೆಗಿದ್ದ,
ನಮ್ಮ ಆತ್ಮೀಯ ಸ್ನೇಹಿತರಾದ
ನಾಣಯ್ಯ-ಹೇಮಕ್ಕನವರ ಮಗಳು,
ನಮ್ಮ ಪಾಲಿಗೂ ಆಕೆ ಮಗಳೇ ಆಗಿರುವವಳು,
ಕಣ್ಮುಂದೆ ಬೆಳೆದು ಆಯುರ್ವೇದ ವೈದ್ಯೆಯಾಗಿ,
ವರುಷದ ಹಿಂದೆ ಸುಂದರನೋರ್ವನ ಪತ್ನಿಯಾಗಿ,
ಈ ಭಾನುವಾರ ಪುಟ್ಟಮ್ಮನಿಗೆ ಅಮ್ಮನಾಗಿಹಳು;

ನಾನು ನಿಂತಲ್ಲೇ ಇದ್ದೇನೆ,
ಇದ್ದ ಹಾಗೆಯೇ ಇದ್ದೇನೆ,
ಎಂಬುದು ಬರಿಯ ಭ್ರಮೆ ನನ್ನೊಳಗೆ,
ಬದಲಾಗಿದೆ ಕಾಲ,
ಬದಲಾಗಿಹರು ನನ್ನವರು,
ಎನ್ನುವುದಷ್ಟೇ ವಾಸ್ತವದರಿವಿನ ಹಾಗೆ!
******************