ಇಂದು ಮತ್ತೇರಿ ಓಲಾಡುತಿದೆ!

27 ಸೆಪ್ಟೆಂ 12

||ಇಂದು ಮತ್ತೇರಿ ಓಲಾಡುತಿದೆ,
ನನ್ನ ಮನಸು ನನ್ನ ಮನಸು ನನ್ನ ಮನಸೂ
ಕಾರಣ ಇಲ್ಲದೆಯೇ ನಗುತಲಿದೆ,
ನನ್ನ ಮನಸು ನನ್ನ ಮನಸು ನನ್ನ ಮನಸೂ||

ಹೂವುಗಳೇ ಪಾಲಕಿ ಶೃಂಗರಿಸಿ,
ಅಲೆಗಳೇ ಕಾಲ್ಗೆಜ್ಜೆ ತೊಡಿಸಿ
ನದಿ ನೀನು ಕನ್ನಡಿಯಾಗು,
ಕಿರಣವೇ ನೀ ಸೆರಗನು ಹೊದಿಸು

ಇಂದೀ ಜೋಗಿಣಿ ಆಗಿಹಳು ಮದುಮಗಳು,
ಎಲ್ಲಾದರೂ ಹಾರಿಹೋಗುವೆ ಅನುತಿಹಳು

||ಇಂದು ಮತ್ತೇರಿ ಓಲಾಡುತಿದೆ,
ನನ್ನ ಮನಸು ನನ್ನ ಮನಸು ನನ್ನ ಮನಸೂ
ಚೆಲ್ಲಾಟ ಆಡಲು ಹಾತೊರೆಯುತಿದೆ,
ನನ್ನ ಮನಸು ನನ್ನ ಮನಸು ನನ್ನ ಮನಸೂ||

ನಮ್ಮನ್ನಿಲ್ಲಿ ಜನ ನೋಡುತ್ತಾರೆ,
ಮರೆಯಲ್ಲಿ ಕೂರೋಣ ಬಾರೇ
ಮತ್ತೇರಿಸುವ ದಿನ ಇದೆ ಹೀಗೆ,
ಹೇಗಿರಲಿ ನಾನು ದಾಹ ತೀರಿಸದೇ 
ನಿನ್ನವನು ನಾನು, ನೀನು ನನ್ನವಳು ನಿನ್ನಾಣೆಗೂ, 
ನಿನ್ನವಳು ನಾನು, ನೀನು ನನ್ನವನು ನನ್ನಾಣೆಗೂ

||ಇಂದು ಮತ್ತೇರಿ ಓಲಾಡುತಿದೆ, 
ನನ್ನ ಮನಸು ನನ್ನ ಮನಸು ನನ್ನ ಮನಸೂ
ಚೆಲ್ಲಾಟ ಆಡಲು ಹಾತೊರೆಯುತಿದೆ, 
ನನ್ನ ಮನಸು ನನ್ನ ಮನಸು ನನ್ನ ಮನಸೂ||

ರೋಮ ರೋಮ ಹಾಡುತಿದೆ ಗೀತೆ, 
ಅಂಗಾಂಗದಲೂ ವಾದ್ಯ ಸಂಗೀತ
ಬಾಳಿನಾ ಸುಖ ಕ್ಷಣದಲ್ಲೇ ಪಡೆದೆ, 
ಎಂತೋ ಏನೋ ಬಂತು ಈ ಗಳಿಗೆ
ಇಂದು ಮುಗಿಲ ಮುಟ್ಟಿಹೆ ನಾನು, 
ಕುಣಿಯುತಿಹೆ ಮನದ ಜೊತೆ ನಾನೂ

|ಇಂದು ಮತ್ತೇರಿ ಓಲಾಡುತಿದೆ,
ನನ್ನ ಮನಸು ನನ್ನ ಮನಸು ನನ್ನ ಮನಸೂ
ಚೆಲ್ಲಾಟ ಆಡಲು ಹಾತೊರೆಯುತಿದೆ,
ನನ್ನ ಮನಸು ನನ್ನ ಮನಸು ನನ್ನ ಮನಸೂ||

ಕವಿ ನೀರಜ್ ರಚಿಸಿರುವ, ಸಚಿನ್ ದೇವ್ ಬರ್ಮನ್ ಸಂಗೀತ ನೀಡಿ, ಕಿಶೋರ್ ಕುಮಾರ್ ಹಾಗೂ ಲತಾ ಮಂಗೇಶ್ಕರ್ ಹಾಡಿರುವ, ಶಶಿ ಕಪೂರ್ ಹಾಗೂ ರಾಖಿ ಅಭಿನಯದ ಶರ್ಮಿಲೀ ಚಿತ್ರದ, ನನ್ನ ಮೆಚ್ಚಿನ ಹಾಡೊಂದರ ಭಾವಾನುವಾದದ ಯತ್ನ ಇಲ್ಲಿದೆ.


ಸರ್ಕಾರಗಳ ಒಳ್ಳೆಯ ಮತ್ತು ಕೆಟ್ಟ ಕೆಲಸಗಳು!

06 ಆಕ್ಟೋ 10

 

ನಮ್ಮ ಸರಕಾರಗಳು ಮಾಡಿದ
ಬಹುಮೂಲ್ಯ ಕೆಲಸವೆಂದರೆ
ಮಹಾತ್ಮ ಗಾಂಧಿಗೆ
ಭಾರತ ರತ್ನ ಪ್ರಶಸ್ತಿ
ಪ್ರದಾನ ಮಾಡದೇ ಇದ್ದುದು,
ಇಲ್ಲವಾಗಿದ್ದಲ್ಲಿ, ನೆಹರೂ,
ಇಂದಿರಾ, ಮಂಡೇಲಾ,
ಎಂಜಿಆರ್, ರಾಜೀವ ಗಾಂಧಿ,
ಲತಾರಿಗೆ, ಸರಿಸಮಾನರಾಗಿಯೇ,
ಮಹಾತ್ಮರು ಉಳಿದುಬಿಡುತ್ತಿದ್ದರು;

ನಮ್ಮ ಸರ್ಕಾರಗಳು ಮಾಡಿದ
ಅತೀ ಕೆಟ್ಟ ಕೆಲಸವೆಂದರೆ
ಹೆಚ್ಚಿನೆಲ್ಲಾ ನಗರಗಳಲ್ಲೂ
ರಸ್ತೆಗಳಿಗೆ ಮಹಾತ್ಮ ಗಾಂಧಿ ರಸ್ತೆ
ಎಂಬ ನಾಮಕರಣ ಮಾಡಿದುದು,
ಗಾಂಧಿ ತೋರಿದ ಹಾದಿಯಲ್ಲಿ
ನಡೆಯಬೇಕಾದ ಮಂದಿ ಈ
ರಸ್ತೆಗಳಲ್ಲೇ ಬೇಕಾದುದನ್ನೆಲ್ಲಾ
ಮಾಡಿ ಅದರಿಂದಲೇ ಒಳಗೊಳಗೇ
ತೃಪ್ತರಾಗಿ ಉಳಿಯುತಿಹರು!
**************