ಭಾರತೀಯ ಜನತಾ ಪಕ್ಷಕ್ಕಾಗಿ ಚರಮ ಗೀತೆಯೇ?!

23 ಆಕ್ಟೋ 09

ಮೂರು ರಾಜ್ಯಗಳಲ್ಲಿ ಅತ್ಯಧಿಕ ಸ್ಥಾನಗಳನ್ನು

ಪಡೆದು ಇಂದಿರಾ ಕಾಂಗ್ರೇಸ್ ಗೆದ್ದಾಗ ಮತ್ತೆ

ಇಂದು ನಿಜವಾಗಿಯೂ ಹಾಡಿದಂತೆ ಆಗುತ್ತಿದೆ

ಭಾರತೀಯ ಜನತಾ ಪಕ್ಷಕ್ಕಾಗಿ ಚರಮ ಗೀತೆ

 

ಭಾಜಪ ಇನ್ನೊಮ್ಮೆ ಮೈ ಕೊಡವಿ ಎದ್ದು ನಿಂತು

ಕಾದಾಡಿ ಗೆಲ್ಲುವುದೇನಿದ್ದರೂ ಸ್ವಲ್ಪ ಕಷ್ಟ ಸಾಧ್ಯ

ತನ್ನ ಮನೆಯೊಳಗೆ ತುಂಬಿಕೊಂಡಿರುವ ಕೊಳಕ

ತೊಳೆಯಲು ಅದಕೆ ಆಗಿಲ್ಲವಲ್ಲಾ  ಇನ್ನೂ ಸಾಧ್ಯ

 

ಅಟಲ್ ಬಿಹಾರಿ ವಾಜಪೇಯಿ ದೀರ್ಘ ರಾಜಕೀಯ

ಜೀವನದಿಂದ ಆಗಲೇ ಸನ್ಯಾಸ ಸ್ವೀಕರಿಸಿ ಆಗಿದೆ

ಲಾಲ ಕೃಷ್ಣ ಆದ್ವಾನಿಯವರು ತನ್ನೆಲ್ಲಾ ಬೇಕಾಬಿಟ್ಟಿ

ಮಾತಿನಿಂದಾಗಿ ವರ್ಚಸ್ಸನ್ನೇ  ಕೆಡಿಸಿಕೊಂಡಾಗಿದೆ

 

ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಮರಳಿದರೂ

ಅದು ತನ್ನೊಳ್ಳೆಯ ಕೆಲಸಗಳಿಂದಂತೂ ಅಲ್ಲವೇ ಅಲ್ಲ

ಏಕೆಂದರೆ ವಿರೋಧ ಪಕ್ಷವಾಗಿ ಕೂತಿದ್ದು ಅದು ಇನ್ನು

ಏನೂ ಒಳ್ಳೆಯ ಕೆಲಸಗಳನ್ನು ಮಾಡಲಾಗುವುದೇ ಇಲ್ಲ

 

ಇಂದಿರಾ ಕಾಂಗ್ರೇಸು ಕುಲಗೆಟ್ಟು ಕೆಟ್ಟ ಆಡಳಿತ ನೀಡಿ

ಒಂದು ಪಕ್ಷ ಜನತೆಯ ಕೋಪದ ಉರಿಗೆ ಗುರಿ ಆದಲ್ಲಿ

ಆ ಪಕ್ಷದ ವಿರುದ್ಧವಾಗಿ ಬೀಳುವ ಮತಗಳನ್ನೆಲ್ಲಾ ತಾನು

ಬಾಚಿಕೊಂಡರೆ ಭಾಜಪದಿಂದ ದೂರವಾಗುಳಿಯದು ದಿಲ್ಲಿ

 

ರಾಜ ಠಾಕರೇ ಮರಿ ಸೇನೆಯ ಕಟ್ಟಿಕೊಂಡು ಹೋರಾಡಿ

ಗಳಿಸಿದ್ದು ನಗಣ್ಯ ಅನ್ನುವಷ್ಟು ಕಡಿಮೆಯಾಗಿ ಕಾಣುತ್ತಿದೆ

ಕರಾವಳಿ ಕರ್ನಾಟಕದೈದು ಕನ್ನಡಿಗರೇ ಮುಂಬಯಿಯ

ನಿವಾಸಿಗಳ ಮನಸ್ಸನ್ನು  ಅರಿತು ಗೆದ್ದುಕೊಂಡ ಹಾಗಿದೆ

 

ದೇಶದಲ್ಲಿ ಎರಡೇ ಪಕ್ಷಗಳು ಇರಬೇಕು ಎನ್ನುವ ವಾದಕ್ಕೆ

ಮತ್ತೆ ಸಿಕ್ಕಿದಂತೆ ಆಗಿದೆ ಇದೀಗ ಮತದಾರನ ಬೆಂಬಲ

ಅದು ಯಾವಾಗ ಕಾರ್ಯರೂಪಕ್ಕೆ ಬಂದು ನಮ್ಮ ದೇಶ

ಅಭಿವೃದ್ಧಿ ಹೊಂದೀತೆಂದು ಎದುರು ನೋಡುವ ಹಂಬಲ