ದೇವರೇ ರಜೆ ಹಾಕಿದರೇ?

26 ಮೇ 10

 

ನಡೆಯಲು

ಅಪ್ಪಣೆಕೊಟ್ಟು

ಕಾಲುಗಳನ್ನು

ನೀಡಿದವನ

ಮಾತನ್ನೇ ಮೀರಿ

ರೆಕ್ಕೆ ಕಟ್ಟಿಕೊಂಡು

ಬಾನಿನಲ್ಲಿ ಹಾರುವ

ಹಾರಾಟ ಇಲ್ಲಿ

 

ಎಲ್ಲವೂ ನಿನ್ನದೇ

ಹಾಗಾದರೆ

ನನ್ನದೇನಿಲ್ಲವೇ

ಎಂದ ಆ ದೇವರು

ಮುನಿಸಿಕೊಂಡು

ನೀನೇ ನೋಡಿಕೋ

ಎಂದು ಒಮ್ಮೊಮ್ಮೆ

ತೆರಳುತ್ತಾನೆ

ರಜೆಯಲ್ಲಿ

 

ಆಗ ನೋಡಿ

ಹಾರಾಡುವ

ಬಾನಾಡಿಗಳು

ಕಾರಣವೇನೂ

ಇಲ್ಲದೆಯೇ

ರೆಕ್ಕೆಮುರಿದು

ನೆಲಕ್ಕಪ್ಪಳಿಸುತ್ತವೆ

 

ಅಮಾಯಕ

ಜೀವಗಳು

ದೇವರ ಮನೆಯನ್ನು

ಸೇರಿ ಆತನನ್ನು

ಬೇಡಿ ರಜೆಯಿಂದ

ಮರಳಿ ಕೆಲಸಕ್ಕೆ

ಹಾಜರಾಗಿಸುತ್ತವೆ!

***************


ಇಂದು ಜಾರಿಗೊಳಿಸಿದಂತಿದೆ ನನಗೆ ಸಜೆ!!!

04 ಜನ 10

 

 

ಸಖೀ,

ಬಾನ ಚಂದಿರನೀ ಬುವಿಯ ಮೇಲೆ ಚೆಲ್ಲುವಂತೆ ಬೆಳದಿಂಗಳು

ಆಕೆ ಬಂದಾಗಲೆಲ್ಲಾ ನಮ್ಮ ಮನ-ಮನೆಯನು ಬೆಳಗಿಸುವಳು

 

ಹುಣ್ಣಿಮೆಗಾಗಿ ನೀವೆಲ್ಲಾ ಕಾಯುವಿರಿ ಒಂದೇ ಒಂದು ತಿಂಗಳು

ಆದರೆ ನಾವು ನಮ್ಮ ಮಗಳಿಗಾಗಿ ಕಾಯಬೇಕಾರು ತಿಂಗಳು

 

ಕಚೇರಿಯಿಂದ ದೊರೆತ ಹತ್ತು ದಿನಗಳ ವರ್ಷಾಂತ್ಯದಾ ರಜೆ

ಕಳೆದಾದ ಮೇಲೆ ಇಂದು ಜಾರಿಗೊಳಿಸಿದಂತಿದೆ ನನಗೆ ಸಜೆ

 

ಹತ್ತು ದಿನಗಳನ್ನು ಕಳೆದೆವು ಹತ್ತು ಕ್ಷಣಗಳಂತೆ ಮಗಳೊಂದಿಗೆ

ನಡುವೆ ಅಗಲಿದರು ನಮ್ಮೆಲ್ಲರ ಮನ ಗೆದ್ದಿದ್ದಿಬ್ಬರು ದೇವರೂರಿಗೆ

 

ಮತ್ತೀಗ ಭಾರವಾದ ಹೃದಯವ ಹೊತ್ತು ಬಂದಿಹೆನು ಕಚೇರಿಗೆ

ಬಾರದಿರಲು ಆಗದು ತಿಂಗಳ ಸಂಬಳ ಬೇಕೇ ಬೇಕಲ್ಲ ಖರ್ಚಿಗೆ

 

ಈ ಯಾಂತ್ರಿಕ ಬಾಳಿನ ಸೂತ್ರ ಇಹುದು ಯಾರದೋ ಕೈಯಲ್ಲಿ

ಆತನು ಆಡಿಸಿದಂತೆ ಏಳು ಬೀಳಿನ ನಡೆ ನಮ್ಮದೀ ಭೂಮಿಯಲ್ಲಿ!!!

******************************************


ಸೂತಕ ಕಳೆದು ಕ್ರಿಯೆ ಮುಗಿಸಿ ಆಗುವ ಮೊದಲೇ ಶುದ್ಧ!!!

16 ಸೆಪ್ಟೆಂ 09

ರಾಜಕಾರಣಿಗಳು ಸತ್ತಾಗ ಈ ಸರಕಾರ ರಜೆ ಸಾರುವುದೇಕೆ

ರಜೆ ಬೇಜಾರು ಎಂದು ಜನರು ಸಿನೇಮಾ ನೋಡುವುದೇಕೆ

 

ಗೌರವ ಸೂಚಿಸಲು ಆ ದಿನ ಮುಚ್ಚುವುದಾದರೆ ಎಲ್ಲವನೂ

ಮುಚ್ಚಬೇಕಾಗಿದೆ ನಿಜಕ್ಕೂ ಮನರಂಜನೆಯ ಕೇಂದ್ರಗಳನು

 

ಶೋಕಾಚರಣೆಯಲಿ ಜನರು ಮನೆಯೊಳಗೇ ಇದ್ದು ಬಿಡಬೇಕು

ಮನೆಗಳನು ಬಿಟ್ಟು ಹೊರಗೆ ಯಾರೂ ಬಾರದಂತೆ ಇರಬೇಕು

 

ಸತ್ತವನ ನೆನೆದು ಕಂಬನಿ ಮಿಡಿಯುವವರು ಯಾರೂ ಇಲ್ಲಿಲ್ಲ

ಮುಂದೆ ಸಾಯುವ ಮುದಿಯ ಯಾರೆಂದು ನೋಡುವವರೆಲ್ಲಾ

 

ಜೀವಂತ ಇದ್ದಾಗ ಹಾವು ಮುಂಗುಸಿಯಂತೆ ಕಾದಾಡುವವರು

ಸತ್ತಾಗ ಶವದ ಮೇಲೆ ಹೂಗಳನರ್ಪಿಸಿ ಕಣ್ಣೀರ ಸುರಿಸುವವರು

 

ಚುನಾವಣೆಯಲಿ ಸೋಲಿಸಲಾಗದವಗೆ ಬಂದರೆ  ಸಾವು ಸಹಜ

ವಿರೋಧ ಪಕ್ಷದವರು ಒಳಗೊಳಗೇ ಖುಷಿಪಡುವುದಂತೂ ನಿಜ

 

ಸ್ವಪಕ್ಷ ಬಾಂಧವರಿಗೆ ಒಂದು ಕುರ್ಚಿ ಖಾಲಿಯಾದುದಕೆ ಹರುಷ

ತನಗೆ ದೊರಕ ಬಹುದೇ ಆ ಕುರ್ಚಿ ಎಂಬ ಕಾತರ ಪ್ರತಿ ನಿಮಿಷ

 

ಸತ್ತವರ ಸೂತಕ ಕಳೆದು ಕ್ರಿಯೆ ಮುಗಿಸಿ ಆಗುವ ಮೊದಲೇ ಶುದ್ಧ

ಗದ್ದುಗೆ ಏರಿ ಕೂರಲು ಮನೆಯೊಳಗಿನ ಗಂಡಸು ಹೆಂಗಸರೆಲ್ಲ ಸಿದ್ಧ


ಕುಮಾರ ಕನ್ನಡಿ ನೋಡಿದ್ದರೆ ತಿಳಿಯುತ್ತಿತ್ತು ಗುಟ್ಟು!!!

14 ಸೆಪ್ಟೆಂ 09

 

ಆತ್ಮಹತ್ಯೆ ಮಾಡ್ಕೋಬೇಕು ಅನ್ಸುತ್ತೆ ಅಂದ ಅಪ್ಪ

ಇನ್ನೂ ಇಹಲೋಕ ತ್ಯಜಿಸಿಲ್ಲ ಇದ್ದಾರೆ ಗಟ್ಟಿಮುಟ್ಟು

ಇಂತಹ ದರಿದ್ರ ಮುಖ್ಯಮಂತ್ರಿಯ ಕಂಡಿಲ್ಲ ಎಂದ

ಕುಮಾರ ಕನ್ನಡಿ ನೋಡಿದ್ದರೆ ತಿಳಿಯುತ್ತಿತ್ತು ಗುಟ್ಟು

 

ಶೋಕಾಚರಣೆಗೆ ರಜೆ ಘೋಷಣೆ ಆದೀತೆಂದು ಕಾದು

ಕುಳಿತ ಸರಕಾರಿ ನೌಕರರಿಗೆಲ್ಲಾ ಮಾಡಿದರು ನಿರಾಶೆ

ತನಗೇ ಉಪನಾಗಿದ್ದವನಿಂದು ಮೆರೆಯುತಿರುವುದನು

ಕಂಡು ಗ್ರಾಮ ವಾಸ್ತವ್ಯದ ಕುಮಾರನಿಗೇಕೋ ಹತಾಶೆ

 

ಅವರೆಲ್ಲಾ ಗದ್ದುಗೆ ಏರಿ ಕುಳಿತು ಮಾಡಿದ್ದ ಸಾಧನೆಗೆ

ಚುನಾವಣೆಗಳಲಿ ಅವರಿಗೆ ದೊರೆತಿದೆ ತಕ್ಕ ಉತ್ತರ

ಗೆದ್ದವರನ್ನು ಐದು ವರ್ಷ ನಿರಾತಂಕವಾಗಿರಲು ಬಿಟ್ಟು

ಹೇಗಿತ್ತೆಂದು ಕೇಳಬೇಕು ಹೋಗಿ ಮತದಾರರ ಹತ್ತಿರ

 

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭದ್ರ ಬುನಾದಿಯೆಂದರೆ

ಚುನಾವಣೆಗಳಲ್ಲಿ ಆಗಾಗ ಮತದಾರ ನೀಡುವ ಮತ

ಮತದಾರನ ಮನದ ಮರ್ಮವನರಿತು ಆತ ನೀಡಿದ

ಮತಕ್ಕೆ ಬೆಲೆಕೊಟ್ಟು ಸುಮ್ಮನಿದ್ದರೆ ಈ ನಾಡಿಗೆ ಹಿತ