ಆತನ ಅಧಿಕಾರದ ಮುಂದೆ ನಡೆಯದು ಏನೊಂದೂ!

28 ಸೆಪ್ಟೆಂ 10

ಸಖೀ,
ಕಿಟಕಿಯಿಂದ ಇಣುಕುತಿಹ ಚಂದಿರನು ಅರಿತಿಹನೆ
ಮನೆಯೊಳಗೆ ನನ್ನ ಸಖಿ ನೀನು ಇಲ್ಲವೆಂದು

ದಿನವೂ ನಡೆದಿರಬಹುದೀ ಕಣ್ಣು ಮುಚ್ಚಾಲೆಯಾಟ
ಸಿಕ್ಕಿಬಿದ್ದಿಹನಿಂದಾತ ಸಖೀ ನೀನು ಇಲ್ಲದಂದು

ನಾನು ಒಳಗೊಳಗೆ ಬರಿದೆ ಸಂತಸ ಪಡುತಲಿದ್ದೆ
ನನ್ನ ಜೊತೆಗಿರುವ ನೀನು ಬರೀ ನನ್ನವಳೆಂದು

ನಿನ್ನ ಮೇಲಧಿಕಾರ ನನಗಷ್ಟೇ ಎಂದು ನಾನು ತಿಳಿದಿದ್ದೆ
ಅರಿತೆ ನಿನ್ನ ಸೌಂದರ್ಯೋಪಾಸಕ ರಜನೀಶನಿರುವನೆಂದು

ಎಷ್ಟೇ ಮುಚ್ಚಿಟ್ಟು ಕೊಂಡರೂ, ಎಲ್ಲೇ ಅಡಗಿ ಕೂತಿದ್ದರೂ
ಆತನ ಕಣ್ಣುಗಳಿಂದ ಮರೆಯಾಗಿ ಇರಲಾರೆವೆಂದೂ

ಎಲ್ಲರದು ಅಧಿಕಾರ, ಎಲ್ಲರ ಮೇಲಿದ್ದರೂ ಏನಾದೀತಿಲ್ಲಿ
ಆತನ ಅಧಿಕಾರದ ಮುಂದೆ ನಡೆಯದು ಏನೊಂದೂ
************