ನಾನಿನ್ನೆಂದೂ ಕವಿತೆಗಳ ಬರೆಯುವುದಿಲ್ಲ!!!

28 ಮೇ 09
ಸಖೀ,

ಕೊನೆಯ ಬಾರಿಗೆ ನೀನು ಬಾ ಒಮ್ಮೆ ಇಲ್ಲಿ
ನಾ ಹೇಳುವುದನೆಲ್ಲಾ ಕಿವಿಗೊಟ್ಟು ಕೇಳಿಲ್ಲಿ

ನಾನಿನ್ನೆಂದೂ ಕವಿತೆಗಳ ಬರೆಯುವುದಿಲ್ಲ
ನಿನ್ನನೆಂದೂ ಬಾಯ್ಬಿಟ್ಟು ಕರೆಯುವುದಿಲ್ಲ

ನನಗೆ ಸಂತಸವಾದರೆ ನನಗೆ ನಾನೇ ನಗುತ್ತೇನೆ
ಅಳಬೇಕೆಂದಾಗ ಮನಸಾರೆ ಅತ್ತುಬಿಡುತ್ತೇನೆ

ದುಗುಡ ದುಮ್ಮಾನಗಳನ್ನೆಲ್ಲಾ ಬಚ್ಚಿಟ್ಟುಕೊಳ್ಳುತ್ತೇನೆ
ಎಲ್ಲಾ ಚಿತ್ರ ಹಿಂಸೆಗಳನೂ ಮೌನವಾಗಿ ಸಹಿಸುತ್ತೇನೆ

ನನ್ನ ಮೌನವನೂ ಅರ್ಥೈಸಿಕೊಂಬ ಜಾಣ್ಮೆಯಿರುವ ನೀನು
ನನ್ನ ಮನದ ಭಾವನೆಗಳನೆಲ್ಲಾ ಅರಿಯದಿರುವೆ ಏನು

ನಾನಿನ್ನು ಬರೆದು ಸಾಧಿಸುವುದಾದರೂ ಏನಿದೆ
ಓದಿದವರು ತಿರುಗಿ ನನಗೆ ಹೇಳಲಾದರೂ ಏನಿದೆ

ಕವಿತೆಗಳನೋದಿದವರು ಸೃಜನ ಶೀಲತೆಯ ಗುರುತಿಸಲಿಲ್ಲ
ನಾ ವ್ಯಕ್ತ ಪಡಿಸಲೆಳಸಿರುವ ಆಶಯಗಳ ಅರಿಯಲೇ ಇಲ್ಲ

ಆ ನನ್ನ ಕವಿತೆಗಳ ಭಾವಾರ್ಥ ಯಾರಿಗೆ ಬೇಕಂತೆ
ಎಲ್ಲರಿಗೂ ಕವಿತೆಯಲಿರುವ ಸಖಿ ನೀನಾರೆಂಬ ಚಿಂತೆ

ಕಾಲ್ಪನಿಕ ಸಖಿಯ ನಿಜ ಜೀವನದಲಿ ಹುಡುಕುತಿಹರೆಲ್ಲ
ನಾ ಮಾತಿಗಿಳಿದ ಹೆಣ್ಣುಗಳಲಿ ನಿನ್ನ ಕಾಣುತಿರುವರೆಲ್ಲಾ

ನಿನ್ನ ಯೋಗ್ಯತೆಯ ಅರಿತಿರುವ ನನಗಷ್ಟೇ ಗೊತ್ತು
ನಿನ್ನಷ್ಟು ಯೋಗ್ಯ ಹೆಣ್ಣು ಬೇರೊಂದು ಸಿಗದು ಈ ಹೊತ್ತು

ಸಿಕ್ಕವರಲ್ಲೆಲ್ಲಾ ಜನ ನಿನ್ನ ಹುಡುಕಿದರೆ ಅಸಹ್ಯವೆನಗೆ
ನನ್ನ ಮನ ಪಡದಿರದೆ ನಿಜಕ್ಕೂ ಬೇಸರ ಒಳಗೊಳಗೆ

ನಿನ್ನ ಪರಿಚಯ ಬರೇ ನನಗಾದದ್ದಷ್ಟೇ ಸಾಕು
ಅನ್ಯರಿಗೆ ನೀ ಹೇಳು ಸಖೀ ಅದೇಕಾಗಬೇಕು

ನೀನ್ಯಾವ ಮಟ್ಟದವಳೆಂದು ಜನ ಅರಿಯದಿದ್ದರೇನು
ಕಂಡ ಕಂಡವರ ಮಟ್ಟಕ್ಕೆ ಜನ ನಿನ್ನ ಇಳಿಸಬೇಕೇನು

ಅದಕೇ ಸಖೀ,
ನಾನಿನ್ನೆಂದೂ ಕವಿತೆಗಳ ಬರೆಯುವುದಿಲ್ಲ
ನಿನ್ನನೆಂದೂ ಬಾಯ್ಬಿಟ್ಟು ಕರೆಯುವುದಿಲ್ಲ!!!

*-*-*-*-*-*-*-*-*-*-*-*-*