ಅಂತರಂಗ!

01 ಸೆಪ್ಟೆಂ 12

ಸಖೀ,
ಮೌನಿಯಾಗಿ
ಇರಬಹುದು
ಬಾಹ್ಯ
ಪ್ರಪಂಚದ
ಜೊತೆಗೆ,
ನಮ್ಮಂತರಂಗದ
ಜೊತೆಗಲ್ಲ;
ನಾವೆಷ್ಟೇ
ಮೌನಿಯಾಗಿ
ಇಹೆವೆಂದರೂ,
ನಮ್ಮಂತರಂಗದ
ಜೊತೆಗಲ್ಲವೇ ಅಲ್ಲ!


ಏನಾಗಿರಬಹುದು?

21 ಮಾರ್ಚ್ 12


ನನ್ನನ್ನು ಕರೆ ಕರೆದು
ಮಾತನಾಡಿಸುತ್ತಿದ್ದವರು
ಒಮ್ಮೆಗೇ ಮೌನಿಯಾದಾಗ,

ಅತ್ತಲಿಂದ ದಿನ ಪ್ರತಿದಿನ
ಬರುತ್ತಿದ್ದ ಕರೆಗಳು
ತಿಂಗಳಾದರೂ ಬಾರದಿದ್ದಾಗ,

ಏನ ತಿಳಿಯಲಿ ನಾನು?

ಅವರು ಕಂಡಿರಬಹುದು ನನ್ನಲ್ಲಿ
ಏನೋ ಬದಲಾವಣೆಯನೆಂದೇ?

ಅಲ್ಲಾ… ಅವರೇ
ನಿಜದಿ ಈಗ ಬದಲಾಗಿಹರೆಂದೇ?

ಅಲ್ಲಾ…ಅವರೀಗ ತಮ್ಮ 
ನಿಜ ರೂಪವ ತೋರುತಿಹರೆಂದೇ? 
*********


ಸಖೀ, ನಾನು ಮೌನಿಯಾಗಿರುವೆ!

13 ಆಗಸ್ಟ್ 10

ಸಖೀ,

ನೀನು,

ನಾನಾಡುವ

ಮಾತುಗಳನ್ನು

ಅರಿಯಳಾದೆಯಾದರೆ,

ನಾನು

ಮೌನಿಯಾಗಿರುವೆ;

 

ನಾನು

ಮಾತನಾಡದೇ,

ನನ್ನ ಮನದ

ಭಾವನೆಗಳನ್ನು,

ನೀನು

ಅರಿವೆಯಾದರೂ,

ನಾನು

ಮೌನಿಯಾಗಿರುವೆ!

***********

 


ಇಂತವರಿಗಿಂತ ಅಂತವರು ಬೇಕು!

04 ಜೂನ್ 10


ನನಗನ್ನಿಸುತ್ತೆ,


ನಮ್ಮನ್ನು ಅಪಾರ್ಥ

ಮಾಡಿಕೊಂಡು, ನುಡಿದರೆ

ಎಲ್ಲಿ ನೋವಾದೀತೋ

ಎಂದು ಮೌನಿಯಾಗಿಯೇ

ಇರುವವರಿಗಿಂತ,


ಮಾತುಗಳೊಂದಿಗೆ

ನಮ್ಮೊಡನೆ ಜಗ್ಗಾಡಿದರೂ

ನಮ್ಮನ್ನು ನಿಜವಾಗಿಯೂ

ಅರ್ಥಮಾಡಿಕೊಳ್ಳುವವರು

ಬೇಕಾಗಿದ್ದಾರಂತ!

***********


ನಡೆಯಬಹುದೇ ಈಸಾರಿ ಯುದ್ಧ?

19 ಮೇ 10

 

ಸಖೀ

ದಿನಪತ್ರಿಕೆ ಓದುತ್ತಿದ್ದ

ನನ್ನಾಕೆ ಕರೆದು ಕೇಳಿದಳು

ರೀ .. ನೀವೇನಂತೀರಿ

ನಡೆದುಬಿಡಬಹುದೇ

ಈಸಾರಿ ಯುದ್ಧ?

ನಾನೆಂದೆ

ಜಾಸ್ತಿ ಮಾತನಾಡದೇ ನಾನು

ಮೌನದ ಮೊರೆಹೋದರೆ

ನಡೆಯದೇ ಇರಬಹುದು

ಕಣೇ ಯುದ್ಧ!

******


ಮೌನವೇ ನುಡಿಯುತ್ತದೆ!

13 ಏಪ್ರಿಲ್ 10

ನನಗೆ

ನಿನ್ನೊಡನೆ

ಮಾಮೂಲಿಗಿಂತಲೂ

ಹೆಚ್ಚು ಮಾತನಾಡುವ

ಬಯಕೆ ಆದಾಗಲೂ

ಕೆಲವೊಮ್ಮೆ

ಒಂದೇ ಒಂದು

ಮಾತನ್ನೂ

ಆಡಲಾಗದೇ

ನಾನುಳಿದು ಬಿಟ್ಟಾಗ

 ನನ್ನ ಮೌನವೇ

ನುಡಿಯುತ್ತದೆ:

“ನನಗೆ ನಿನ್ನೊಡನೆ

ಬಹಳಷ್ಟು ಮಾತಾನಾಡುವುದಿದೆ”!

*****

 


ಅದು ಪ್ರೀತಿಯ ಕುರುಹು!

12 ಏಪ್ರಿಲ್ 10

ನಿಂತಲ್ಲಿ ಕೂತಲ್ಲಿ

ಹಗಲಲ್ಲಿ ಇರುಳಲ್ಲಿ

ನಿನ್ನ ದಿನಚರಿಯ

ಪ್ರತಿ ಗಳಿಗೆಯಲ್ಲೂ

ನನ್ನ ನೆನಪೇ ನಿನ್ನನ್ನು

ಕಾಡತೊಡಗಿದಾಗ

ಅಲ್ಲಿ ನಡೆಯುವ ಚಿಕ್ಕಪುಟ್ಟ

ವಿಷಯವನ್ನೂ ನನ್ನೊಡನೆ

ಹಂಚಿಕೊಳ್ಳಬೇಕೆಂದು

ನಿನಗಿಚ್ಚೆ ಆಗತೊಡಗಿದಾಗ

ನೀ ಮೌನವಾಗಿದ್ದಾಗಲೂ

ನನ್ನೊಡನೆ ಸಂಭಾಷಣೆಯಲಿ

ಸದಾ ನಿರತಳಾಗಿರುವೆಯೇನೋ

ಎಂದು ನಿನಗನಿಸತೊಡಗಿದಾಗ

ಅರಿತುಕೋ ಸಖೀ ನಿನ್ನೊಡಲ

ಕೊಡದಲ್ಲಿ ನನಗಾಗಿ ಪ್ರೀತಿಯ

ಅಮೃತ ತುಂಬಿಕೊಂಡಿಹುದೆಂದು!

*****


ಮೂರು ಹನಿಗವನಗಳು!!!

04 ಡಿಸೆ 09

ಮೌನ – ಪ್ರಾಣ

ಸಖೀ,
ನಿನ್ನೀ
ಸುದೀರ್ಘ
ಮೌನ,
ತೆಗೆಯುತಿಹುದು
ನನ್ನೀ
ಪ್ರಾಣ!!!

********

 

 

ಸ್ಪೂರ್ತಿ – ಜಾಸ್ತಿ!!!

ಸಖೀ,
ನನ್ನ
ಸೃಜನಶೀಲತೆಯ
ಕೊಂಡಾಡಿ,
ಹುರಿದುಂಬಿಸಿ
ನೀಡುತಿರಲು
ಸ್ಪೂರ್ತಿ,
ನಿಜದಿ
ನಾನು
ಬರೆಯಬಹುದಿನ್ನೂ
ಜಾಸ್ತಿ
ಜಾಸ್ತಿ
ಜಾಸ್ತಿ!!!

********

 

 

ಧ್ಯಾನ – ಅಧ್ವಾನ!!!

ಸಖೀ,
ನನಗೀಗ
ಹಗಲಿರುಳು
ನಿನ್ನದೇ
ಧ್ಯಾನ,
ಅದರಿಂದಾಗಿ
ನಮ್ಮ
ಮನೆಯಲ್ಲಿ
ಆಗಿದೆ
ಅಧ್ವಾನ!!!

********


ಕವಿತೆಗೆ ಮೊದಲ ಪ್ರತಿಕ್ರಿಯೆ ಗಂಭೀರ ಮೌನ!!!

06 ನವೆಂ 09

 

 

ಕವಿತೆ ಗರ್ಭ ಧಾರಣೆಗೆ ಯಾವುದೇ ಸಾಮಾಜಿಕ ಕಟ್ಟಳೆಗಳಿಲ್ಲ

ಬೆಳಕು ಮರೆಯಾಗಿ ಬರುವ ಕತ್ತಲಿಗಾಗಿ ಕವಿತೆ ಕಾಯುವುದಿಲ್ಲ

 

ಕವಿ ನನಸಿನಲ್ಲಿದ್ದಾನೋ, ಕನಸಲ್ಲಿದ್ದಾನೋ, ಕವಿ ಪ್ರೇಮಿಯೋ,

ಭಗ್ನ ಪ್ರೇಮಿಯೋ, ಎಂದರಿತ ನಂತರವಷ್ಟೇ ಹೊರ ಬರುವುದಲ್ಲ

 

ಪ್ರೀತಿಯನ್ನು ಹುಡುಕುತ್ತಿದ್ದಾನೋ, ಇಲ್ಲ ಪ್ರೀತಿಯ ಮುಂಗಾರಿನಲ್ಲಿ

ಕವಿ ತೊಯ್ದಿರುತ್ತಾನೋ ಎಂದು ತಿಳಿದು ಕವಿತೆ ಹೊರ ಬರುವುದಿಲ್ಲ

 

ಕವಿಯ ಆಂತರಿಕ ಹೊಯ್ದಾಟಗಳು ಪದಗಳ ರೂಪ ತಳೆವಾಗಲೆಲ್ಲಾ

ಬಾಹ್ಯದ ಆಗುಹೋಗುಗಳಿಗೆ ಕವಿ ಭಾವ ಸ್ಪಂದನ ಆಗುವಾಗಲೆಲ್ಲಾ

ನವಮಾಸ ತುಂಬಿದ ಗರ್ಭಿಣಿಯ ಗರ್ಭವನು ಬಿಟ್ಟು ಹೊರ ಜಗತ್ತಿಗೆ

ಕಾಲಿಡುವ ಶಿಶುವಿನಂತೆ ಮನದಿಂದ ಹೊರ ಹೊಮ್ಮುವುದೇ ಕವಿತೆ

 

ಒಂದು ಮನದಿಂದ ಹೊರ ಹೊಮ್ಮಿ ಇನ್ನೊಂದು ಮನವನ್ನು ಸ್ಪರ್ಶಿಸಿ

ಅಲ್ಲೂ ಭಾವ ಸ್ಪಂದನಕ್ಕೆ ಆಸ್ಪದ ಮಾಡಿಬಿಡುವ ಸಾಧನವೇ ಕವಿತೆ

 

ಕವಿತೆ ಮನವ ಮುಟ್ಟಲು ಮನ ಮುದಗೊಂಡರಲ್ಲಿ ಆನಂದದನುಭಾವ

ಭಾವನೆಗಳನ್ನು ಅರಿಯಲು ಓದುಗನಿಗಿರಬೇಕು ವಿಶಾಲ ಮನೋಭಾವ   

 

ಕವಿತೆ ಓದುವಾಗ ಕವಿ ಯಾರು ಎಂಬುದು ಯಾವಾಗಲೂ ಅಲ್ಲಿ ಗೌಣ

ಯಾವುದೇ ಕವಿತೆಗಾದರೂ ಮೊದಲ ಪ್ರತಿಕ್ರಿಯೆ ಗಂಭೀರ ಮೌನ !!!

 

ಇದು ಆನಂದರಕವಿತೆಗೆ ನನ್ನ ಪ್ರತಿಕ್ರಿಯೆ


ಒಲವೇ ನಮ್ಮ ಜೀವನ ಆಗಿದೆ!!!

08 ಸೆಪ್ಟೆಂ 09

 

ಮೌನವೇ ಮಾತಾಗಿದೆ
ಆ ಮಾತೇ ಒಲವಾಗಿದೆ
ಒಲವೇ ನಮ್ಮ ಜೀವನ ಆಗಿದೆ
 
ಮನಸು ಮನಸಾ ಅರಿತಾದ ಮೇಲೆ 
ಮಾತೇಕೆ ಬೇಕು ಹೇಳು
ಕಣ್ಣಲ್ಲೇ ಹೃದಯ ಮಾತಾಡುವಾಗ 
ಮಾತೇಕೆ ಬೇಕು ಹೇಳು
 
ಈ ನಿನ್ನ ಮೊಗವು ನಗುವಿಂದ ಅರಳಿ 
ಚೆಲ್ಲಿರಲು ಸುತ್ತ ಬೆಳಕು
ಆ ಬೆಳಕಿನಲ್ಲೆ ನಾ ಬಾಳ ಬಲ್ಲೆ  
ಬೇಡೆನಗೆ ರವಿಯ ಬೆಳಕು
 
ಮೌನವೇ ಮಾತಾಗಿದೆ
ಆ ಮಾತೇ ಒಲವಾಗಿದೆ
ಒಲವೇ ನಮ್ಮ ಜೀವನ ಆಗಿದೆ

 

ಕನಸೋ ನನಸೋ ಅರಿಯದೇ ನಾನು 
ನಿನ್ನಲ್ಲೇ ಕಳೆದು ಹೋದೆ
ನಿನ್ನಿಂದ ನಾನು ಹೊಸ ಹರುಷ ಕಂಡೆ  
ಹರುಷದಲೇ ಮುಳುಗಿ ಹೋದೆ
 
ನೀ ನನ್ನ ಕನಸು ನಾ ನಿನ್ನ ಕನಸು 
ನನಸಾಯಿತೆಲ್ಲಾ ಕನಸು
ದಿನ ರಾತ್ರಿಯೆಲ್ಲಾ ಕೇಳೋದೇ ಇಲ್ಲಾ 
ಬೇರೇನನಿನ್ನೀ ಮನಸು
 
ಮೌನವೇ ಮಾತಾಗಿದೆ
ಆ ಮಾತೇ ಒಲವಾಗಿದೆ
ಒಲವೇ ನಮ್ಮ ಜೀವನ ಆಗಿದೆ