ಕೊಡುವಾತ ಸೋಲುವುದಿಲ್ಲ…!

27 ಆಗಸ್ಟ್ 10

ಬಾವಿಗೇ
ಬಾಯಾರಿಕೆಯಾದಾಗ
ಎಂಬ ಆಸುಮನದ
ಕಲ್ಪನೆಯ ಮಾತುಗಳ
ಓದಿ ಮೆಚ್ಚಿದ, ಓದುಗ
ಮಹಾಶಯಯರು,

“ಮೋಡಗಳಿಗೇ
ಬಾಯಾರಿಕೆಯಾದರೆ?”
ಎಂಬ ಪ್ರಶ್ನೆಯನ್ನು ಈ
ಆಸುಮನದಲ್ಲಿ ಬಿತ್ತಿ
ಹೋಗಿರುವರು;

ಬಾವಿ
ಕಾವೇರಿದಾಗ
ಬತ್ತಿ ಬಾಯಾರಿದಾಗ
ನೀರ ಬೇಡಿಕೆ ಸಲ್ಲಿಸಿ
ಕಾಯುವುದು ದಿನವೆಲ್ಲಾ,

ಮೋಡಗಳರಾಶಿಗೆ
ಕಾವೇರಿದಾಗ,
ರಾಶಿ ರಾಶಿಯಾಗಿ
ಸಾಲು ಸಾಲಾಗಿ
ಇನ್ನೂ ಹಗುರಾಗಿ
ಮೇಲೇರುತ್ತವೆ,
ಅವುಗಳಿಗೆಂದೂ
ನೀರಡಿಕೆಯೇ ಇಲ್ಲ;

ಮನುಜನೀ
ಮರ್ತ್ಯಲೋಕದಲಿ
ತನ್ನ ಬೇಡಿಕೆಗಳ
ಪಟ್ಟಿಯನ್ನು
ಬೆಳೆಸುತ್ತಲೇ
ಇರುವನು,
ಹಗಲಿರುಳೂ
ಬೇಡೀಕೆಗಳ
ಸಲ್ಲಿಸುತ್ತಲೇ
ಇರುವನು,

ಮೇಲಿರುವ
ಕೊಡುವಾತ,
ಎಂದಿಗೂ
ಕೈಸೋಲದೇ
ನೀಡುತ್ತಲೇ
ಇರುವನು,
ಆತ ಸೋಲುವುದಿಲ್ಲ
ಸೋತು ನಿಲ್ಲುವುದಿಲ್ಲ
ಆತನೆಂದಿಗೂ ಅನ್ಯರಿಂದ
ಬೇಡದೇ ತೃಪ್ತನಾಗೇ
ಇರುವನು;

ಬೇಡುವವರು
ಸದಾ ಅತೃಪ್ತರಾಗಿ
ಬೇಡುತ್ತಲೇ
ಇರುವರು,

ನೀಡುವವರು
ತೃಪ್ತಮನದಿ
ಸದಾ ನೀಡುತ್ತಲೇ
ಇರುವರು!
*****


ಗಾಳಿ ತಂಗಾಳಿಯಾದೀತು!!!

21 ಮೇ 09

ಸಖೀ,
ಇಂದು ನಿನ್ನ
ದರುಶನವಾಗಿಲ್ಲವೆಂಬ
ಮುನಿಸು ನನಗಿದ್ದಷ್ಟೇ
ಆ ಸೂರ್ಯನಿಗೂ
ಇದೆ ನೋಡು,
ಅದಕ್ಕೇ ಮರೆಯಾಗಿ
ಕೂತಿದ್ದಾನೆ
ಕೋಪಿಸಿಕೊಂಡು;

ನೀನಿಂದು ಎರಡು
ಸವಿಮಾತ ಆಡಿಲ್ಲವೆಂಬ
ಬೇಸರ ನನಗಿದ್ದಷ್ಟೇ
ಬೀಸುತ್ತಿರುವ ಗಾಳಿಗೂ ಇದೆ,
ನ್ನುಸಿರು ಬಿಸಿಯಾಗಿರುವಂತೆ
ಆ ಗಾಳಿಯಲೂ ಇಂದು
ಎಂದಿಲ್ಲದ ರೋಷವಿದೆ
ಕಂಡಿಲ್ಲದ ಬಿಸಿ ಇದೆ;

ಸಖೀ,
ಬಂದು ಬಿಡು
ಸೂರಿನಡಿಯಿಂದಾಚೆಗೆ,
ನಿನ್ನ ಕಂಡ ನಾನು
ತೃಪ್ತಿ ಪಡುವಂತೆ,
ಬಂದಾನು ಮುನಿಸ ಮರೆತು
ಸೂರ್ಯನೂ ಮೋಡಗಳ
ಮರೆಯಿಂದಾಚೆಗೆ;

ನೀ ನುಡಿದರೆ ನನ್ನ
ಕಿವಿಗಳಲಿ ಒಂದೆರಡು
ಸವಿಮಾತನಿಂದು,
ಈ ನನ್ನ ಮನವೂ ತಣಿದೀತು,
ಮಾತ ಕೇಳಿಸಿಕೊಂಡ
ಆ ಗಾಳಿಯೂ ತಣಿದು
ತಂಗಾಳಿಯಾದೀತು!
*-*-*-*-*-*-*-*


ಇರಬೇಕಲ್ಲವೇ ನಾನಾಗ?

20 ಮೇ 09
ಸಖೀ,
ಹೀಗಾಗಬೇಕಿತ್ತು, ಆಗಿದೆ ಅಷ್ಟೆ,
ಆಗಬಾರದ್ದೇನೂ ಆಗಿಲ್ಲವಷ್ಟೆ?
ಮೇಲಕ್ಕೇರಿದವರು ಕೆಳಗಿಳಿಯಲೇ ಬೇಕು,
ಇದು ಲೋಕ ನಿಯಮ;
ಆದರೇನು ಮಾಡೋಣ, ಇದ ಅರಿಯುವಷ್ಟು
ನಮಗಿಲ್ಲ ಸಂಯಮ.
ಅಂದು ನನ್ನ ಪ್ರತಿಯೊಂದು ಮಾತಿಗೂ
ಹೊಸ ಹೊಸ ಅರ್ಥವ ನೀಡಿ,
ನನ್ನನ್ನೇ ನಿನ್ನ ಪಾಲಿನ ದೇವರೆಂದು
ಮೇಲಕ್ಕೇರಿಸಿದೆ ನೀನು,
ಇಂದು ನನ್ನ ಮಾತುಗಳ ಹಿಂದಡಗಿರುವ
ನನ್ನ ಭಾವನೆಗಳ, ಆಶಯಗಳ
ನಿನ್ನಿಂದ ಅರಿಯಲಾಗದೆ,
ಆ ಮಾತುಗಳೆಲ್ಲಾ ಅಪಾರ್ಥಗೊಂಡಾಗ,
ಒಮ್ಮೆಲೇ ನಿನ್ನ ದೃಷ್ಟಿಯಿಂದ ನನ್ನ
ಕೆಳಗಿಳಿಸಿದೆ ನೀನು.
ಅಂದು ನಾನೇ ನೀನಾಗಿ, ನೀನೇ ನಾನಾಗಿದ್ದಾಗ,
ದಿನವೂ ಬರೇ ನನ್ನ ಜೊತೆಗಿನ ಆ ಮಧುರ
ಕ್ಷಣಗಳಿಗಾಗಿ ನನ್ನ ದಾರಿ ಕಾಯುತ್ತಿದ್ದವಳು ನೀನು,
ಇಂದು ನನ್ನ ನಿಜರೂಪದ ಹಿಂದೆ
ಇನ್ನೊಂದು ರೂಪ ಅಡಗಿದೆ ಎಂಬ
ಭ್ರಮೆಯಿಂದ ಅಸಹ್ಯಗೊಂಡು,
ನನ್ನಿಂದ ಆದಷ್ಟು ದೂರವಿರಲು
ಬಯಸುತಿರುವೆ ನೀನು.
ನನ್ನಲ್ಲಿ ಯಾವ ಸಬೂಬುಗಳೂ ಇಲ್ಲ ಸಖೀ,
ನನ್ನ ಒಳಗು ಹೊರಗುಗಳನ್ನೆಲ್ಲಾ ಸಂಪೂರ್ಣ
ಅರಿತಿರುವ ನಿನಗೆ ಇನ್ನು ಹೇಳಲೇನೂ ಉಳಿದಿಲ್ಲ.
ನಿಜ ಹೇಳಲೇ ಸಖೀ,
ಇನ್ನು ನನ್ನ ಬಾಳಲೇನೂ ಉಳಿದೇ ಇಲ್ಲ.
ಆದರೂ ಕಳೆಯಲಾಗದು ಈ ಜೀವವನು,
ಹೋಗಲಾರದು ದೂರ ತೊರೆದು ನಿನ್ನನು.
ನಿನ್ನ ಮನವ ಮುಸುಕಿರುವ ಈ ಭ್ರಮೆಯ ಮೋಡ
ಮರೆಯಾದಾಗ, ನಾಳೆ ನನಗಾಗಿ ಹುಡುಕಾಡಿ,
ಎಲ್ಲಿರುವೆ, ಓ ಗೆಳೆಯಾ ಎಂದು, ನೊಂದು
ನೀ ಕರೆವಾಗ, ಓ ಗೊಡಲು, ಇರಬೇಕಲ್ಲವೇ
ನಿನ್ನ ಇದಿರಲ್ಲೇ ನಾನಾಗ?!
*-*-*-*-*-*-*-*-*-*