ಜೀವಂತ ಇರುವುದಕ್ಕೆ ಕುರುಹಾಗಿ ಏನಾದರೂ ಮಾಡುತ್ತಿದ್ದರೆ ಸರಿ!!!

02 ಫೆಬ್ರ 10

  

ಅದೇಕೋ ನಾನೀಗ ಗಂಟಲು ನೋವಿನಿಂದ ಮಾತು ಬಾರದವನಂತೆ

ಭಾವನೆಗಳು ಸಾವಿರ ಇದ್ದರೂ ವ್ಯಕ್ತಪಡಿಸಲಾರದ ಅಸಹಾಯಕನಂತೆ

 

ನೂರಾರು ವಿಷಯಗಳು ಜೊತೆ ಜೊತೆಗೆ ಈ ತಲೆಯಲ್ಲಿ ಸುತ್ತುತ್ತಿರುತ್ತವೆ

ಬರೆಯಲೆಂದು ಕೂತಾಗ ನನ್ನ ಆ ಲೇಖನಿಗೆ ಸರಬರಾಜೇ ಆಗದಂತಿವೆ

 

ಗಣಕಯಂತ್ರದ ಮುಂದೆ ಕೂತು ಲೋಹಿತಂತ್ರಾಂಶದ ಸಹಾಯ ಕೇಳಲು

ಒತ್ತಿದ ಕೀಲಿಗಳೇ ಮತ್ತೆ ಮತ್ತೆ ಒತ್ತಲ್ಪಟ್ಟು ಬೇಸರ ತಂದಿದೆ ಮತ್ತೆ ಒತ್ತಲು

 

ಕೆಲವು ದಿನಗಳೇ ಹೀಗೆ ನಮ್ಮನ್ನು ನಮ್ಮಿಂದಲೇ ಮಾಡಿ ಬಿಡುತ್ತವೆ ದೂರ

ನಾವು ನಾವಾಗಿರದೇ ಇರಲು ನಮ್ಮವರು ಯಾರೂ ಬಾರರು ನಮ್ಮ ಹತ್ತಿರ

 

ಜನರಿಗೆ ವ್ಯಕ್ತಿ ಮುಖ್ಯ ಅಲ್ಲ ಅನ್ನುವ ಮಾತಿನ ಅರಿವಾಗುವುದೇ ನಮಗಾಗ

ವ್ಯಕ್ತಿಗಿಂತಲೂ ಆತನ ಸಾಧನೆಗಳಷ್ಟೇ ನೆನಪಾಗುವುದು ಎಲ್ಲರಿಗೂ ಆಗಾಗ

 

ನೇಪಥ್ಯಕ್ಕೆ ಸರಿದ ಮೇಲೆ ಯಾರೂ ಬಂದು ವಿಚಾರಿಸುವುದಿಲ್ಲ ಕುಶಲೋಪರಿ

ಜೀವಂತ ಇರುವುದಕ್ಕೆ ಕುರುಹಾಗಿ ನಾವು ಏನಾದರೂ ಮಾಡುತ್ತಿದ್ದರಷ್ಟೇ ಸರಿ!!!

 

 

 


ಸಖೀ, ನನ್ನೀ ತಲೆಯೊಳಗೆ ಸಮಸ್ಯೆಗಳ ಸಂತೆ!!!

09 ಡಿಸೆ 09

“ಸಖೀ,

ನನ್ನೀ ತಲೆಯಲ್ಲೀಗ ನೂರೆಂಟು ಸಮಸ್ಯೆಗಳ ಸಂತೆ

ನನಗೋ ವಾರದಿಂದ ಏನೂ ಬರೆದಿಲ್ಲವೆಂಬ ಚಿಂತೆ”

 

“ಹೀಗೆಯೇ ಬರೆದು ಬಿಡು ನೂರೆಂಟು ಸಮಸ್ಯೆಗಳ ಸಂತೆ

ಅದರಿಂದಾಗಿ ನಿನಗೀಗ ಏನೂ ಬರೆದಿಲ್ಲ ಎಂಬಾ ಚಿಂತೆ”

 

“ನೋಡೀಗ ತಯಾರಾಗುತ್ತದೆ ಕವನ ಓದಿ ಹೇಳುವಿಯಂತೆ”

“ನೀನು ಬರೆದರೆ ಓದಲು ತಯಾರಾಗಿ ನಾ ಕೂತಿರುವೆನಂತೆ”

 

“ನೀನೆನ್ನ ಜೊತೆಗಿದ್ದು ನನ್ನ ಮೆದುಳ ಹೀಗೆ ಚಿವುಟುತಿರಲು

ಹರಿದು ಬರಬಹುದು ಸರಾಗವಾಗಿ ಇಲ್ಲಿ ಪದಪುಂಜಗಳು”

 

“ಗೊತ್ತಾಯಿತು ಗೊತ್ತಾಯಿತೆಂದೀ ಸಖಿಯು ಹೇಳುತಿಹಳು

ನಿನ್ನೀ  ಹೊಸ ಕವನದ ನಿರೀಕ್ಷೆಯಲಿಲ್ಲಿ ಕಾದು ಕೂತಿಹಳು”

 

“ದಿನವೂ ಒಂದೆರಡು ಮಾತ ನೀ ಆಡಿದರೆ ಎನ್ನೊಡನೆ ಸಖಿ

ನಂಬು ನನ್ನ ನಿಜಕೂ ನನಗಿಂತ ಜಗದಲ್ಲಿ ಇನ್ನಾರಿಲ್ಲ ಸುಖಿ”

 

🙂

 

“ನಕ್ಕು ಚಂದಿರನಂತೆ ಸುಮ್ಮನಿರಬೇಡ ಆಡು ಎರಡು ಮಾತ

ಚಂದಿರ ಮಾತಾಡ ಏಕೆಂದರೆ ಮಾತು ಬರದ ಮೂಕನಾತ”

 

🙂

 

“ಈ ಸಾಲುಗಳನ್ನೇ ಎತ್ತಿ ಹಾಕಿ ಬಿಡ್ತೇನೆ ನಾನೆನ್ನ ಬ್ಲಾಗಿನಲ್ಲಿ”

“ಜನರೆಲ್ಲಾ ಓದಿ ಪ್ರತಿಕ್ರಿಯಿಸಲಿ ಖುಷಿಪಡುತ್ತಿರೋಣ ನಾವಿಲ್ಲಿ!!!”

*****************************************


ಅನಿರೀಕ್ಷಿತ!!!

28 ಮೇ 09
ಸಖೀ,
ಕಲ್ಪನಾ ಲೋಕದಲಿ
ಅದೆಷ್ಟೋ ಬಾರಿ
ನಿನ್ನಂದವನು
ಕಣ್ತುಂಬ ಕಂಡು
ಮನತುಂಬಾ ಸವಿದು
ನಿನ್ನೊಡನೆ
ನಕ್ಕು ನಲಿದಿದ್ದೆ ನಾನು
ಇಂದೀಗ
ನೀನು ಹಠಾತ್ತನೇ
ನನ್ನ ಕಣ್ಮುಂದೆ ನಿಂದು
ಕೈನೀಡಿ ಕರೆವಾಗ
ನನ್ನ ಕಣ್ಣುಗಳನ್ನೇ
ನಂಬಲಾಗದೇ
ನಿನ್ನ ಕರೆಗೆ
ಓಗೊಡಲಾಗದೇ
ಕಣ್ಣಿದ್ದೂ ಕುರುಡನಾಗಿ
ಬಾಯಿಯಿದ್ದೂ ಮೂಕನಾಗಿ
ಕೈಕಾಲುಗಳಿದ್ದೂ ಹೆಳವನಾಗಿ
ಜೀವವಿದ್ದೂ ನಿರ್ಜೀವಿಯಾಗುತ್ತಿದ್ದೇನೆ
ಇದೇನೀ ಅವಸ್ಥೆ?
ಸಖೀ, ಇದೇಕೆ ಹೀಗೆ?!
***********