ಒಂದೆರಡು ದಿನಗಳ ಕವಿ ನಾನು!

06 ಜುಲೈ 12

||ಒಂದೆರಡು ದಿನಗಳ ಕವಿ ನಾನು ಒಂದೆರಡು ದಿನಗಳೆ ಬರೆಯುವೆನು
ಒಂದೆರಡು ದಿನಗಳ ಹುಮ್ಮಸ್ಸು ಒಂದೆರಡು ದಿನಗಳ ಈ ಆಯುಸ್ಸು||

ನನಗಿಂತಲು ಮೊದಲೂ ಎಷ್ಟೊಂದು ಕವಿಗಳು ಬಂದು ಹೋಗಿಹರು
ಗೀತೆಗಳನು ಹಾಡಿ ಹೋಗಿಹರು ಮನಗಳ ಮುದಗೊಳಿಸಿ ತೆರಳಿಹರು
ಅವರೂ ಅರೆಗಳಿಗೆಯ ಕತೆಯಂತೆ, ನಾನೂ ಈ ಗಳಿಗೆಯ ಕತೆಯಂತೆ
ನಾಳೆ ನಿಮ್ಮನೇ ನಾನು ಅಗಲುವೆನು, ಆದರಿಂದು ನಿಮ್ಮವನೇ ನಾನು!

||ಒಂದೆರಡು ದಿನಗಳ ಕವಿ ನಾನು ಒಂದೆರಡು ದಿನಗಳೆ ಬರೆಯುವೆನು
ಒಂದೆರಡು ದಿನಗಳ ಹುಮ್ಮಸ್ಸು ಒಂದೆರಡು ದಿನಗಳ ಈ ಆಯುಸ್ಸು||

ನಾಳೆ ಇನ್ನಾರೋ ಬರಬಹುದು ಕವಿತಾ ಸುಮಗಳನ್ನಾರಿಸುವವರು
ನನಗಿಂತಲೂ ಚೆನ್ನ ನುಡಿವವರು ನಿಮಗಿಂತಲೂ ಚೆನ್ನಾಲಿಸುವವರು
ನಾಳೆ ಯಾರೆನ್ನಾ ನೆನೆಯುವರು ಯಾರೇಕೆ ನನ್ನಾ ನೆನೆಯುವರು
ಬಿಡುವಿಲ್ಲದ ಮಂದಿ ನನಗಾಗಿ ತಮ್ಮ ಸಮಯವ ವ್ಯರ್ಥ ವ್ಯಯಿಸುವರು?

||ಒಂದೆರಡು ದಿನಗಳ ಕವಿ ನಾನು ಒಂದೆರಡು ದಿನಗಳೆ ಬರೆಯುವೆನು
ಒಂದೆರಡು ದಿನಗಳ ಹುಮ್ಮಸ್ಸು ಒಂದೆರಡು ದಿನಗಳ ಈ ಆಯುಸ್ಸು||

ಕಿವಿಗಳಿಗೆ ಸಂಗೀತದಂತೆ!!!

25 ಸೆಪ್ಟೆಂ 09

ಸಖೀ,

ನಾ ನಿನ್ನ ಮೊಗವ

ನೆನಸಿಕೊಂಡಾಗ

ಮೈ ಮನದೊಳಗೆ

ಉಕ್ಕುತ್ತದೆ ಪ್ರೀತಿ

ನಾ ನಿನ್ನ ಮೊಗವ

ಕಣ್ಣಾರೆ ಕಂಡಾಗ

ಮುದ ನೀಡುವುದು

ನಿನ್ನ ನೋಟದ ರೀತಿ

ನನಗೆ ನೀನು

ಕಣ್ಣ ನೋಟದಲೇ

ಓದಿಕೋ ಅಂದೆ

ನೀ ನುಡಿಯುವ

ಮೊದಲೇ ಅದೆಲ್ಲವ

ನಾ ಅರಿತುಕೊಂಡೆ

ನೀನು ನಕ್ಕರೆ

ಮನದಂಗಳದಲ್ಲಿ

ಬೆಳದಿಂಗಳು

ನೀನು ಅತ್ತರೆ

ತುಂಬಿಕೊಳ್ಳುತ್ತವೆ

ನನ್ನೀ ಕಂಗಳು

ನೀನು ನುಡಿವ

ನಲ್ನುಡಿ ನನ್ನ

ಕಿವಿಗಳಿಗೆ ಸದಾ

ಸಂಗೀತದಂತೆ

ನೀನು ಸಿಡುಕಿನಿಂದ

ನಾಲ್ಕು ನುಡಿದರೆ

ಕಿವಿಗಳಿಗೆ ಕಾದ

ಎಣ್ಣೆ ಸುರಿದಂತೆ!!!