ಮಾನ್ಯ ಯಡ್ಯೂರಪ್ಪನವರಿಗೊಂದು ಕಿವಿಮಾತು!

13 ಜುಲೈ 10

ಇದ್ಯಾವ ಮೋಹದ ಮಾಯೆ ನಿಮ್ಮನ್ನಾವರಿಸಿದೆ ಯಡ್ಯೂರಪ್ಪನವರೇ?

ನಿಮ್ಮನ್ನು ನೀವೇ ಈ ರೀತಿ ಬಲಿಕೊಡುತ್ತಿರುವುದೇಕೆ ಹೇಳಲಾರಿರೇ?

 

ಮೂರ್ನಾಲ್ಕು ದಶಕಗಳ ಹೋರಾಟದ ಆ ನಿಮ್ಮ ರಾಜಕೀಯ ಜೀವನ

ಗಣಿಧೂಳಿನೊಂದಿಗೆ ಬೆರೆತು ಮರೆಯಾಗುವುದ ಕಾಣದೇ ನಿಮ್ಮ ಕಣ್ಮನ?

 

ಯುವ ಪ್ರೇಮಿಗಳು ಹೆತ್ತವರ ಪ್ರೀತಿಯ ಮಾತನ್ನು ಕಡೆಗಣಿಸಿ ನಡೆವಂತೆ

ನೀವೂ ನಾಡಿನ ಜನತೆಯ ಮರೆತಿರಿ ಅದ್ಯಾವುದೋ ಸೆಳೆತದಲ್ಲಿರುವಂತೆ

 

ನಿಮ್ಮನ್ನು ಈ ರೀತಿ ಬಲಹೀನನಾಗಿಸಿಹ ಅದೃಶ್ಯ ಶಕ್ತಿ ಯಾವುದದು ಹೇಳಿ

ಸತ್ಯ ನುಡಿದರೆ ಇಡೀ ನಾಡೇ ನಿಮ್ಮ ಜೊತೆಗಿಹುದು ಸ್ವಲ್ಪ ಧೈರ್ಯ ತಾಳಿ

 

ಕೆಂಗಲ್, ಅರಸು, ನಿಜಲಿಂಗಪ್ಪ, ಹೆಗಡೆಯಂಥವರು ಕೂತಿದ್ದ ಘನ ಕುರ್ಚಿಯದು

ಅದರ ಘನತೆ ಕೆಡಿಸಿದರೆ ನಿಮಗೆ ಇಹ ಪರ ಎರಡೂ ಕಡೆ ನೆಮ್ಮದಿಯೇ ಸಿಗದು

 

ಕುರ್ಚಿಯ ಘನತೆಯನು ನೀವು ಉಳಿಸಿದರೆ ನಿಮ್ಮ ಘನತೆಯೂ ಉಳಿದೀತು

ಅದಕ್ಕೇ ಬೆಲೆ ನೀಡದಿದ್ದರೆ ಸದ್ಯದಲೇ ನಿಮ್ಮ ಬದುಕೂ ಮೂರಾಬಟ್ಟೆಯಾದೀತು

 

ನಾಳೆ ನೀವೊಂಟಿಯಾಗಿ ಅಳುವಾಗ ಬರಲಾರರ್ಯಾರೂ ಸಾಂತ್ವನ ಹೇಳಲು

ರಾಜಕೀಯದಲ್ಲಿ ಎಲ್ಲರ ಜೀವನ ಬಾಳೆಲೆಯಂತೆ ಬರೀ ಹಾಸ್ಯುಂಡು ಎಸೆಯಲು

 

ಇನ್ನಾದರೂನಿಮ್ಮ ನಿದ್ದೆಗೆಡಿಸುವ ನಿಮ್ಮದೇ ಮನದ ಮಾತನ್ನು ಕೇಳಿ ನೋಡಿ

ಮೈಕೊಡವಿ ಎದ್ದು ನಿಂತು ತೋರಿಸಿದರೆ ನಾಡ ಜನತೆ ಹೊಗಳುವರು ಕೊಂಡಾಡಿ

 

ರಾಜಕೀಯವೆಂದರೆ ಭ್ರಷ್ಟರ ಕೂಟ ಎಂದು ಇಂದು ಜನ ಆಡಿಕೊಂಡಿಹರು ನಿತ್ಯ

ಕೆಸರಿನಲ್ಲಿ ಕಮಲವೂ ಅರಳುವುದೆಂದು ತೋರಿಸಿಕೊಟ್ಟರೆ ನಿಮಗೆ ಬೆಲೆ ಸತ್ಯ

*************************************


ಹಿಂದೀ ಪಕ್ಷಾಚರಣೆಯಿಂದ ಕನ್ನಡಕ್ಕಿಲ್ಲ ಅಪಾಯ!!!

18 ಸೆಪ್ಟೆಂ 09

ಹಿಂದೀ ಪಕ್ಷಾಚರಣೆಯಿಂದ ಕನ್ನಡಕ್ಕೆ ಆಗದು ಏನೂ ಅಪಾಯ

ಕನ್ನಡವನ್ನು ಇಲ್ಲಿ ಬೆಳೆಸುವುದಕ್ಕೆ ಬೇಕಾಗಿದೆ ಹೊಸ ಉಪಾಯ

 

ಅನ್ಯರನು ದ್ವೇಷಿಸಿದರೆ ನಮ್ಮವರಿಗೆ ಆಗದು ಹೆಚ್ಚೇನೂ ಲಾಭ

ಹೆಚ್ಚು ಭಾಷೆಗಳ ಕಲಿತರೆ ಆಗದೇ ಇರಲಾರದು ನಮಗೆ ಲಾಭ

 

ಕೇಂದ್ರ ಸರಕಾರ ಹಿಂದಿಯನ್ನು ಹೇರುತಿದೆ ಎನ್ನುತಿರುವಂತೆ

ರಾಜ್ಯ ಸರ್ಕಾರವೂ ಕನ್ನಡ ಭಾಷೆಯನಿಲ್ಲಿ ಹೇರಿದರೆ ಏನಂತೆ

 

ಹೇರಿಕೆಯಿಂದಲೇ ಭಾಷೆಯನು ಜನರು ಬಳಸುವರೆಂದಾದರೆ

ಕನ್ನಡ ಹೇರಿಕೆಯ ಆದೇಶ ಹೊರಡಿಸಿದರೆ ಏನಿದೆ ತೊಂದರೆ

 

ವಿಧಾನ ಸಭೆಯಲಿ ಇರುವಂತೆ ಸರ್ಕಾರದ ಆ ಮುಖ್ಯಮಂತ್ರಿ

ಕನ್ನಡ ಪ್ರಾಧಿಕಾರದಲೂ ನಮಗೆ ಇದ್ದಾರೆ ಈ ಮುಖ್ಯಮಂತ್ರಿ

 

ಇಬ್ಬರು ಮುಖ್ಯಮಂತ್ರಿಗಳಿದ್ದೂ ಆಗದೇ ಇದ್ದರೆ ಭಾಷೆಯ ಏಳಿಗೆ

ತಿಳಿಯಿರಿ ಭಾಷೆಯ ಹೆಸರಲ್ಲಿ ತುಂಬಿಸಿಕೊಳ್ಳುತ್ತಿದ್ದಾರೆ ಜೋಳಿಗೆ

 

ಮನಮಾಡಬೇಕಿಲ್ಲ ವೇದಿಕೆಗಳನೇರಿ ಭಾಷಷಣ ಬಿಗಿಯುವತ್ತ

ಮನೆಮನೆಯಲ್ಲೂ ಕನ್ನಡದ ದೀಪ ಹಚ್ಚಲು ಇರಲಿ ನಮ್ಮ ಚಿತ್ತ


ಕನ್ನಡ ಕಾಪಾಡುವ ಬದಲು ಹಿಂದಿಯ ಓಲೈಕೆಯಂತೆ!!!

20 ಜುಲೈ 09

ದಿಲ್ಲಿಗೆ ಹೋದ ಕನ್ನಡಿಗ ಹಿಂದಿ ಕಲಿಯಲೇ ಬೇಕು
ವ್ಯವಹಾರಕ್ಕಾಗಿ ಅಲ್ಲಿನ ಭಾಷೆ ಬಂದಿರಲೇ ಬೇಕು

ದಿಲ್ಲಿಯವನು ಇಲ್ಲಿಗೆ ಬಂದರಾತಗೆ ಕಷ್ಟ ಏನಿಲ್ಲ ಇಲ್ಲಿ
ಬೆಂಗಳೂರು ನಗರವನಾತ ಮಾಡಿಬಿಡುತ್ತಾನೆ ದಿಲ್ಲಿ

ನಮ್ಮ ಕನ್ನಡಿಗರೂ ಕಡಿಮೆ ಏನಿಲ್ಲ ಅತಿಥಿ ಸತ್ಕಾರದಲ್ಲಿ
ಅವರೊಂದಿಗೆ ಮಾತಾಡುತ್ತಾರೆ ಅವರದೇ ಭಾಷೆಗಳಲ್ಲಿ

ಕನ್ನಡವನು ಇಲ್ಲಿ ಯಾರೂ ಕಲಿಯಯಬೇಕೆಂದೇನಿಲ್ಲ
ಅನ್ಯ ಭಾಷೆಯ ಚಟ ನಮ್ಮಲ್ಲಿ ಎಲ್ಲರಿಗೂ ಇದೆಯಲ್ಲ

ಬಸ್ಸುಗಳಲ್ಲಿನ್ನು ಹಿಂದಿಯಲಿ ಘೋಷಣೆ ಮಾಡ್ತಾರಂತೆ
ಕನ್ನಡ ಕಾಪಾಡುವ ಬದಲು ಹಿಂದಿಯ ಓಲೈಕೆಯಂತೆ

ಅಂಗವಿಕಲರಿಗೆ ನಮ್ಮ ಬಸ್ಸಿನಲಿ ಬೇಕಾದ ವ್ಯವಸ್ಥೆಗಳಿಲ್ಲ
ಆದರೆ ಹಿಂದೀ ಭಾಷಿಗರಿಗೆ ಮರ್ಯಾದೆ ಭಾರೀ ಇದೆಯಲ್ಲ

ಮುಖ್ಯಮಂತ್ರಿ ಚಂದ್ರು ಕನ್ನಡಕ್ಕಾಗಿ ಭಾಷಣಗಳ ಬಿಗಿದರೆ
ನಮ್ಮ ಸರ್ಕಾರದ ಅಧಿಕಾರಿಗಳು ಕನ್ನಡವನು ಮರೆವವರೇ


ಹೃದಯವ ಕದ್ದವರ ಕಿವಿಗಳ ತಲುಪಬೇಕು ಮಾತು!!!

07 ಮೇ 09
ಉದ್ಯಾನ ನಗರಿಯ ಮರಗಳ ಉಳಿಸಲು ನಡೆದಿದೆ ಹೋರಾಟ
ಮತ್ತೆ ಮುಂದಿನ ಶನಿವಾರ ಜನ ಸೇರಲಿದ್ದಾರೆ ಬಿಡದಂತೆ ಹಟ

ಮರಗಳನು ಕಾಪಾಡಬೇಕೆಂಬುದಕೆ ತುಂಬುಮನದ ಬೆಂಬಲವಿದೆ
ಆದರೆ, ಕಿವುಡರಾಗಿರುವ ರಾಜಕಾರಣಿಗಳ ಮೇಲೆಲ್ಲಿ ನಂಬಿಕೆಯಿದೆ

ನಮ್ಮ ನಾಡಿನ ಮುಖ್ಯಮಂತ್ರಿಗಳ ಮನವೊಲಿಸುವುದೂ ಒಂದೇ
ಶ್ರವಣಬೆಳಗೊಳದ ಬಾಹುಬಲಿಯ ಮಾತನಾಡಿಸುವುದೂ ಒಂದೇ

ಮುಖ್ಯಮಂತ್ರಿಗಳ ಹೃದಯವನು ತಲುಪಬೇಕಿದ್ದರೆ ನಮ್ಮ ಮಾತು
ಅವರ ಹೃದಯವ ಕದ್ದವರ ಕಿವಿಗಳ ತಲುಪಬೇಕು ನಮ್ಮೀ ಮಾತು

ತಾನೇ ಸೋಲೊಪ್ಪಿಕೊಂಡವರ ಮಾತಿಗೆ ಕೊಡದಿರುತ್ತಾರೆಯೇ ಬೆಲೆ
ನಮ್ಮ ಕಾರ್ಯ ಸಿದ್ಧಿಯಾಗಬಹುದು ಅವರ ಮೂಲಕ ನೋಡಿ ಆಮೇಲೆ

ಬನ್ನಿ ನಮ್ಮ ಬೆಂಗಳೂರ ಶೋಭೆಯನು ಉಳಿಸಿ, ಶೋಭೆಯನು ಬೆಳಗಿ
ಬನ್ನಿ ನಮ್ಮ ಬೆಂಗಳೂರ ಶೋಭೆಯುಳಿಸಲು ಶೋಭೆಗೆ ಆರತಿಯ ಬೆಳಗಿ