ಪತ್ನಿಗೇ ಮೋಸ ಮಾಡಿದವನು ನಾಡಿಗೆ ಮೋಸ ಮಾಡನೇ?

11 ಆಕ್ಟೋ 10

 

ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದ ವಿದ್ಯಾವಂತೆ ಧರ್ಮಪತ್ನಿಗೇ ಮೋಸ ಮಾಡಿದವನು
ಸಿನಿಮಾ ತಾರೆಯ ಮೈಮಾಟಕ್ಕೆ ಸೋತು, ರಮಿಸಿ, ತಾಯಿಯನ್ನಾಗಿಸಿದ ನಾಯಕನು

ಕರ್ನಾಟಕದ ಜನತೆಯ ಪರವಾಗಿ ತಾನೀ ಮಹತ್ಕಾರ್ಯ ಮಾಡುತ್ತಿದ್ದೇನೆ ಎನ್ನುವನಲ್ಲಾ
ಜನರು ಆರಿಸಿ ಸ್ಥಾಪಿಸಿರುವ ಸರಕಾರವನ್ನು ಕೆಡವಲು ಷಡ್ಯಂತ್ರ ರಚಿಸಿ ಕಾಡುತಿಹನಲ್ಲಾ

ಕರ್ನಾಟಕದ ಎಷ್ಟು ಮಂದಿ ಅವನಲ್ಲಿಗೆ ಹೋಗಿ ಕಾಪಾಡು ಎಂದು ಗೋಗರೆದಿರಬಹುದು?
ಹತ್ತು ಮೂವತ್ತು ಶಾಸಕರ ಬಲದಿಂದ ಹೇಗೆ ನಮ್ಮೀ ನಾಡನ್ನೇ ಗೆದ್ದವನಂತೆ ಆಡಬಹುದು?

ಮನೆಯಲ್ಲಿ ತನ್ನ ಹೆಂಡತಿ ಮಕ್ಕಳ ಪಾಲಿಗೇ ನಿಷ್ಟಾವಂತನಾಗಿ ಉಳಿದು ಬಾಳಲಾಗದವನು
ಇಡೀ ನಾಡಿನ ಜನತೆಗೆ ನಿಷ್ಟಾವಂತನಾಗಿರುತ್ತೇನೆ ಎಂದರೆ ಹೇಗೆ ನಂಬಬಹುದು ಆತನನು?

ನಾಚಿಕೆ ಮಾನ ಮರ್ಯಾದೆ ಮೂರನ್ನೂ ಬಿಟ್ಟು ಸಾರ್ವಜನಿಕವಾಗಿಂತು ನಗ್ನರಾಗುವವರು
ಮೈತುಂಬಾ ಬಟ್ಟೆಯಿಲ್ಲದವರ ಮತ್ತು ಉಣ್ಣಲು ಕೂಳಿಲ್ಲದವರ ಕೂಗನದೆಂತು ಆಲಿಸುವರು?

ಅವರನ್ನು ಇವರು, ಇವರನ್ನು ಅವರು, ಸೋಲಿಸಿ ಪ್ರಜಾಸತ್ತೆಗೆ ಮಾಡದೇ ಇದ್ದು ಅವಮಾನ
ಹೊಸದಾಗಿ ಚುನಾವಣೆ ಘೋಷಣೆಯಾದರೆ ಉಳಿಯಬಹುದೇನೊ ನಮ್ಮ ರಾಜ್ಯದ ಮಾನ!!
*************


ಬೀದಿಯಲ್ಲಿ ಆಡುವವರು ಸದನದೊಳಗೆ ಯಾಕೆ ಆಡರಯ್ಯಾ?

05 ಆಕ್ಟೋ 10

ಸಂಸದ ಕುಮಾರ ಯಾವುದೋ ಧೂಳು ಹಿಡಿದ ಕಡತ ಹಿಡಿದು
ಅಲ್ಲಲ್ಲಿ ಸರಕಾರದ ಮಾನ ಹಾಕುತ್ತಾನೆ ಬಹಿರಂಗ ಹರಾಜು

“ಎಸ್” “ವೈ” ಎಂದು ದತ್ತ ತನ್ನೆಲ್ಲಾ ಹಲ್ಲುಗಳ ಕಚ್ಚಿಕೊಂಡು
ವಾಹಿನಿಯಲಿ ಚರ್ಚೆ ಮಾಡಿ ಹೆಚ್ಚಿಸುತ್ತಾನೆ ಅದರ ಮೋಜು

ಕಾಂಗ್ರೇಸಿಗರು ಕೂಡಲೇ ಕಡತಗಳ ನಕಲುಗಳನ್ನು ತೆಗೆದು
ನಡೆಯುತ್ತಾರೆ ರಾಜಭವನದಾ ಏಜಂಟನಿಗೆ ದೂರು ಕೊಡಲು

ದೂರದ ಮಂಗಳೂರಲ್ಲಿ ನಿದ್ದೆಯಿಂದೆದ್ದ ಜನಾರ್ದನ ಪೂಜಾರಿ
ಮತ್ತು ಇತ್ತ ಈ ಬಂಗಾರಪ್ಪ ಶುರುಮಾಡುತ್ತಾರೆ ತೊದಲಲು

ತಾನೇ ರಾಜೀನಾಮೆ ಕೊಟ್ಟಿದ್ದ ಸಿದ್ದರಾಮಯ್ಯ ಸೋನಿಯಾಳ
ಮುಂದೆ ಯಡ್ಡಿಯ ಹುಳುಕನ್ನು ಬಿಚ್ಚಿಡಲು ದೌಡಾಯಿಸುತ್ತಾನೆ

ಸೋನಿಯಾಳ ಭೇಟಿಯ ನಂತರ ಹೇಗೆ ತನಗಲ್ಲಿ ಮಂಗಳಾರತಿ
ಆಯಿತೆಂಬ ಸುದ್ದಿಯನೇ ಮಾಧ್ಯಮದವರಿಂದ ಮರೆಮಾಚುತ್ತಾನೆ

ಈಶ್ವರಪ್ಪ ಆ ವಕೀಲ ಚಂದ್ರೇಗೌಡನನ್ನು ಛೂ… ಬಿಡುತ್ತಾನೆ
ಮಾಧ್ಯಮಗಳವರನ್ನು ಕಾನೂನು ರೀತ್ಯ ಮರಳು ಮಾಡಲು

ಯಡ್ಡಿ ಒಂಟಿ ಸಲಗದಂತೆ ತನ್ನ ಶೋಭೆಗೆ ಧಕ್ಕೆ ಬರುವುದನ್ನು
ಅರಿತು ಸದನಕ್ಕೆ ಬನ್ನಿ ಅಂತಾನೆ ಎಲ್ಲರನು ಮಾತನಾಡಲು

ಸದನದ ಹೆಸರು ತೆಗೆದರೆ ಸಾಕು ಎಲ್ಲಾ ಅಲರ್ಜಿ ಆದವರಂತೆ
ತಮ್ಮ ಮಾತು ಬದಲಿಸಿ ರಾಜೀನಾಮೆಗೆ ಹಿಡಿಯುತ್ತಾರೆ ಪಟ್ಟು

ಯಾಕೆ ಹೀಗೆ ಅಂತೀರಾ ಬೀದಿಯಲ್ಲಿ ಆಡಿದ್ದನ್ನೆಲ್ಲಾ ಸದನದಲ್ಲೂ
ಆಡಿದರೆ ದಾಖಲೆ ಆಗಿ ಮುಂದೆ ಎಲ್ಲಾ ತಿನ್ನಬೇಕಾದೀತು ಪೆಟ್ಟು
*********


“ಸಿಲ್ಲೀ” ದೀಕ್ಷಿತ್!

29 ಸೆಪ್ಟೆಂ 10

ಯಾವ ಗಂಭೀರ ಸಮಸ್ಯೆಯನ್ನೂ ನೀವು ಗಂಭೀರವೆಂದೆನಲಾರಿರಿ,
ಎನೇ ಆದರೂ ಅದು ದಿಲ್ಲಿಯಲಿ ಸಾಮಾನ್ಯ ಎಂದು ತಳ್ಳಿ ಹಾಕುವಿರಿ;

ಕೋಟಿ ರೂಪಾಯಿ ಹೊತ್ತ ಲಾರಿ ನಡುರಸ್ತೆಯಲಿ ಹೋಗಿದ್ದರೂ ಹೂತು,
ಹಾವಿಗೂ, ಮುರಿದ ಮಂಚಕೂ, ಕುಸಿದ ಸೇತುವೆಗೂ, ಒಂದೇ ಮಾತು;

ದೇಶದ ಮಾನವೆಲ್ಲಾ ಬೇಕಾಬಿಟ್ಟಿ ಆಗುತ್ತಿದ್ದರೂ ಹರಾಜು ನಡುಬೀದಿಯಲ್ಲಿ,
ಅತೃಪ್ತ ಅತಿಥಿಗಳನೇ ದೂಷಿಸಿ, ನಿಮ್ಮೆಲ್ಲಾ ತಪ್ಪುಗಳ ಮುಚ್ಚಿಡುತಿದ್ದೀರಿಲ್ಲಿ;

ಯಾರೇನೇ ಅಂದರೂ ಎಲ್ಲದಕೂ ಉತ್ತರಿಸುತ್ತೀರಲ್ಲ ಒಂದೇ ದನಿಯಲೇ,
ಇದನ್ನು ಅಸಡ್ದೆಯ ಪರಾಕಾಷ್ಟೆ ಎನ್ನಲೇ, ತಾಳ್ಮೆಯ ಮೂರ್ತಿ ಎನ್ನಲೇ;

ಶೀಲಾ ದೀಕ್ಷಿತ್, ನಿಮಗೆ ಈಗ ಕಾಣುತ್ತಿದೆಯಲ್ಲಾ ಎಲ್ಲವೂ “ಸಿಲ್ಲಿ”ಯಾಗಿ,
ನಿಮ್ಮನ್ನೀಗ ಮರು ನಾಮಕರಣ ಮಾಡುತ್ತಿದ್ದೇನೆ, “ಸಿಲ್ಲಿ” ದೀಕ್ಷಿತ್ ಆಗಿ!
********