ಮಕ್ಕಳು ದಾನವರಾದರೆ ಹೆತ್ತಬ್ಬೆಯದೇನಿಲ್ಲ ತಪ್ಪು!

03 ಆಗಸ್ಟ್ 10

ತಮ್ಮೆಲ್ಲಾ ಮಕ್ಕಳೂ ಒಂದೇ ತೆರನಾಗಿಲ್ಲ ಎಂಬ ಚಿಂತೆ ಏಕೆ

ನಿಮಗೆ ರಾವಣ ವಿಭೀಷಣರಿಗಿಂತ ಬೇರೆ ಉದಾಹರಣೆ ಬೇಕೆ


ರಾವಣನನು ದಾನವೇಶ್ವರ ಎಂದು ಕೊಂಡಾಡುವರೆಲ್ಲಾ ಜನರು

ಆದರೀ ವಿಭೀಷಣನನು ರಾಕ್ಷಸನೆಂದು ಯಾರು ಜರೆಯುತಿಹರು


ಮಾನವನೇ ದಾನವನಾಗುವ ಆತನ ನಡೆನುಡಿಗಳಿಂದಾಗಿ ಇಲ್ಲಿ

ದಾನವರಿಗೆ ಭಯಂಕರ ರೂಪ ಕೊಟ್ಟು ಚಿತ್ರಿಸಿದ್ದಾರೆ ಕತೆಗಳಲ್ಲಿ


ಇಂದೂ ಇದ್ದಾರೆ ಮಾನವರ ನಡುವೆ ದಾನವರು ಪ್ರತೀ ಮನೆಯಲ್ಲಿ

ರಾಕ್ಷಸೀ ಗುಣಗಳ ತುಂಬಿಕೊಂಡಿರುತ್ತಾರವರು ತಮ್ಮ ಮನಗಳಲ್ಲಿ


ಸದ್ಗುಣೀ ಬೀಜಗಳ ಬಿತ್ತಿ ಬೆಳೆಸಿದವನುಳಿವ ಸದಾಕಾಲ ಮಾನವನಾಗಿ

ದುರ್ಗುಣಗಳಿಗೇ ಗೊಬ್ಬರ ನೀಡಿದವ ಮೆರೆಯುತ್ತಲಿರುವ ದಾನವನಾಗಿ


ಮಕ್ಕಳು ಮಾನವರಾಗದೆ ದಾನವರಾದರೆ ಹೆತ್ತಬ್ಬೆಯದೇನಿಲ್ಲ ತಪ್ಪು

ಎಲ್ಲರ ಜೀವನವೂ ಅವರವರ ಕರ್ಮದ ಫಲ ಎನ್ನುವುದೇ ನನಗೊಪ್ಪು
********


ಮಾನವ ದೇಹ ಮತ್ತು ಭೂಮಿ!

29 ಮೇ 10

 

ಮಾನವ ದೇಹವಿದು

ನಿಜದಿ ಭೂಮಿಯ ಚಿಕ್ಕದಾದ ರೂಪ

 

ಭೂಮಿಯಂತೆಯೇ ಇದೂ

ನಿಗೂಢ ಚಟುವಟಿಕೆಗಳ ಕೂಪ

 

ಕಾಡು ಮೇಡುಗಳಿವೆ

ಬುವಿಯ ಮೇಲ್ಮೈಯಲ್ಲಿರುವಂತೆ

 

ದಿಣ್ಣೆ ಕಣಿವೆಗಳೂ ಇವೆ

ಭೂಮಿಯುದ್ದಗಲಕೂ ಇರುವಂತೆ

 

ಇಲ್ಲಿ ಕ್ರಿಮಿ ಕೀಟಾಣುಗಳ ವಾಸ

ಅಲ್ಲಿ ಪ್ರಾಣಿ ಪಕ್ಷಿ ಸಂಕುಗಳಿರುವಂತೆ

 

ಇಲ್ಲಿ ಖಾಯಿಲೆ ಖಸಾಲೆಗಳು

ಅಲ್ಲಿನ ಅತಿವೃಷ್ಟಿ ಅನಾವೃಷ್ಟಿಗಳಂತೆ

 

ಮಾಂಸಖಂಡಗಳು ಆಡುವವು

ಅಲ್ಲಿ ಭೂಕಂಪನಗಳು ಆಗುವಂತೆ

 

ಇಲ್ಲಿ ವಾಂತಿ ಭೇದಿಗಳಿವೆ

ಅಲ್ಲಿರುವ ಜ್ವಾಲಾಮುಖಿಗಳಂತೆ

 

ಇಲ್ಲಿಯೂ ನಿರಂತರ ಚಲನೆ

ಭೂಮಿಯ ಆ ಪರಿಭ್ರಮಣದಂತೆ

 

ಮಾನಸಿಕ ಚಂಚಲತೆ ಇಲ್ಲಿ

ಅಲ್ಲಿನ ವಾತಾವರಣದಲ್ಲಿರುವಂತೆ

 

ಆದರೆ ಒಂದೇ ಅಂತರ

ಇಲ್ಲಿಗೂ ಅಲ್ಲಿಗೂ ಅರಿತಿರಾ?

 

ಇಲ್ಲಿ ಏರುಪೇರಿನಲ್ಲಿ

ಒಮ್ಮೊಮ್ಮೆ ವಿಪರೀತ ಉಷ್ಣತೆ

 

ಅಲ್ಲಿ ಉಷ್ಣತೆಯಲ್ಲಿ

ಒಮ್ಮೊಮ್ಮೆ ವಿಪರೀತ ಏರುಪೇರು!

***********************