ಮಾನವೀಯತೆಯ ಮೆರೆದು ಪ್ರೀತಿಸುತ್ತಿದ್ದರೆ ನಾವೆಲ್ಲರೂ ಒಂದೇ!

23 ಸೆಪ್ಟೆಂ 10

ಅಯೋಧ್ಯೆ ಎಂಬ ಪುಣ್ಯಭೂಮಿ ಯಾರದ್ದಾಗಿತ್ತು ಎಂಬ ಜಟಿಲ ಪ್ರಶ್ನೆಗೆ
ಲಕ್ನೋ ನ್ಯಾಯಾಲಯ ತೀರ್ಪು ನೀಡಲಿದೆ ಶುಕ್ರವಾರ ಸಂಜೆಯ ಒಳಗೆ

ತೀರ್ಪು ಯಾವ ಪಕ್ಷಕ್ಕೇ ಖುಷಿ ನೀಡಿದರೂ ಸೋಲುವುದು ನಮ್ಮದೇ ನಾಡು
ನಾಯಕರ ಹೇಳಿಕೆಗಳಿಂದ ಕೆಡುತ್ತದೆ ನೋಡಿ ಇನ್ನು ನಾಡಿನ ಜನರ ಪಾಡು

ಮರ್ಯಾದ ಪುರುಷೋತ್ತಮನ ಭಕ್ತರು ಆತನ ಮರ್ಯಾದೆ ಕಾಪಾಡಬೇಕು
ಅಲ್ಲಾಹನಿಗೆ ಪ್ರಿಯವಾದ ನಡತೆ ಆತನನು ಪೂಜಿಸುವವರಲ್ಲಿ ಇದ್ದಿರಬೇಕು

ಪರಿಸ್ಥಿತಿಯು ವಿಕೋಪಕ್ಕೆ ಹೋಗದಂತೆ ಮನಗಳೊಳಗೆ ಅಂಕುಶವಿರಲಿ
ಜನರೇನೇ ಅಂದರೂ ಮನ ಮನಗಳ ನಡುವೆ ಸಾಮರಸ್ಯ ಉಳಿದಿರಲಿ

ನಾಯಕರುಗಳೆಲ್ಲಾ ಇರುತ್ತಾರೆ ಸದಾ ಸುರಕ್ಷಾ ಸಿಬ್ಬಂದಿಯ ರಕ್ಷಣೆಯಲ್ಲಿ
ಬೀದಿಗಿಳಿಯುವ ಜನರ ಪ್ರಾಣವನು ರಕ್ಷಿಸಲು ಬರುವವರಾರೂ ಇಲ್ಲ ಅಲ್ಲಿ

ಯಾರೇ ಗಾಯಗೊಂಡರೂ ಅಲ್ಲಿ ಹರಿಯುವುದು ಭಾರತೀಯನದೇ ನೆತ್ತರು
ಭಾರತಮಾತೆ ಅಳುತ್ತಾಳೆ ಪುತ್ರಶೋಕದಲ್ಲಿ ಅಲ್ಲಿ ಯಾರೇ ಮೃತನಾದರೂ

ನಮ್ಮ ದೇವರನು ಮನದ ಮಂದಿರದಲ್ಲಿ ಸ್ಥಾಪಿಸಿಕೊಂಡು ಪೂಜಿಸುತ್ತಿರೋಣ
ಸಾಧ್ಯವಾದರೆ ಮಾಡುತ್ತಲಿರೋಣ ಭಗವದ್ಗೀತ ಖುರಾನ್ ಬೈಬಲಿನ ಪಠಣ

ಗೀತೆ, ಗುರುಗ್ರಂಥ, ಬೈಬಲ್, ಖುರಾನ್ ಎಲ್ಲವೂ ಸಾರಿ ಹೇಳಿರುವುದೊಂದೇ
ಮಾನವೀಯತೆಯ ಮೆರೆದು ಪರಸ್ಪರರ ಪ್ರೀತಿಸುತ್ತಿದ್ದರೆ ನಾವೆಲ್ಲರೂ ಒಂದೇ!

*********