ನೋಬೆಲ್ ಪ್ರಶಸ್ತಿ ಒಬಾಮಾನಿಗೋ ಒಸಾಮಾನಿಗೋ…?!

12 ಆಕ್ಟೋ 09

ಪ್ರತಿಷ್ಠಿತ ನೋಬೆಲ್ ಪ್ರಶಸ್ತಿ ಅದೇಕೋ ಇಂದೀಗ

ತನ್ನ ಪ್ರತಿಷ್ಠೆಯನ್ನೆಲ್ಲಾ ಕಳೆದುಕೊಂಡ ಹಾಗಾಯ್ತು

ಒಬಾಮಾನ ಮುಡಿಯೇರಿದ ಈ ನೋಬೆಲ್ ಪ್ರಶಸ್ತಿ

ಪರೋಕ್ಷವಾಗಿ ಒಸಾಮಾನನ್ನು ಸೇರಿದ ಹಾಗಾಯ್ತು

 

ಒಸಾಮಾ ಮುಂದೆ ಮುಂದೆ ಸಾಗಿದ ಎಡೆಯೆಲ್ಲಾ

ಅಮೇರಿಕಾದ ಸೇನಾಪಡೆಗಳು ಸಾಗುತ್ತಲೇ ಇವೆ

ಶಾಂತಿ ಕೆಡಿಸಲಾತ ನಡೆಸಿದ ಹಿಂಸೆಯ ವಿರುದ್ಧ

ಇವರಿಂದಲೂ ಹಿಂಸಾಚಾರಗಳು ನಡೆಯುತ್ತಲಿವೆ

 

ಉಗ್ರರ ನಿಗ್ರಹಕ್ಕೆ ಪಾಕಿಗೆ ಒಬಾಮಾ ನೀಡುತಿರುವ

ನೆರವೆಲ್ಲಾ ನಮ್ಮ ನಾಡಿನ ಶಾಂತಿ ಕೆಡಿಸುತ್ತಲಿಹುದು

ಅದನಾತ ಅರಿತಿದ್ದರೂ ಪಾಕಿಗೆ ಆತನ ರಾಶಿ ರಾಶಿ

ಧನ ಸಹಾಯ ಸರಾಗವಾಗಿ ಮುಂದುವರಿದಿಹುದು

 

ಶಾಂತಿದೂತ ಮಹಾತ್ಮನ ನಾಮ ಸ್ಮರಣೆಯೊಂದೇ

ಪ್ರಶಸ್ತಿಗೆ ಕಾರಣವಾದಂತೆ ಕಂಡು ಬರುತಿಹುದಲ್ಲಾ

ಶಾಂತಿ ಸ್ಥಾಪನೆಯ ಹೆಸರಲ್ಲಿ ನಡೆದ ಎಲ್ಲಾ ಕೊಲೆ

ಅನಾಚಾರಗಳು ನಗಣ್ಯವಾದಂತೆಯೇ ಇಹುದಲ್ಲಾ

 

ಪರೀಕ್ಷೆ ಬರೆಯಬೇಕು ಎಂದೆಣಿಸಿಕೊಂಡಿದ್ದವನಿಗೆ

ಕರೆದು ಪದವಿ ಪ್ರದಾನ ಮಾಡಿದ ಹಾಗಿದೆ ಇದು

ಭರ್ಜರಿಯಾಗಿ ಭಾಷಣ ಮಾಡುತ್ತಾ ಇದ್ದವನನ್ನು

ಸಭಿಕರು ಚಪ್ಪಾಳೆ ತಟ್ಟಿ ನಿಲ್ಲಿಸಿ ಬಿಟ್ಟಂತಿದೆ ಇದು

 

ಏನಾದರೂ ಸಾಧಿಸಿ ತೋರಿಸುವ ಮೊದಲೇ ಹೀಗೆ

ಬಹು ಪರಾಕ್ ಘೋಷಣೆಯ ಅಗತ್ಯ ಏನಿತ್ತು ಹೇಳಿ

ಇನ್ನು ಸಾಧಿಸಲು ಏನೂ ಉಳಿದಿಲ್ಲದಿರಲು ಆತನ

ಒಳಗೆ ಇನ್ನು ಸಾಧಿಸುವ ಕಿಚ್ಚು ಉಳಿದೀತೇ ಹೇಳಿ

 

ಮನುಜನಿಗೆ ಬಾಳಿನಲ್ಲಿ ಅತೀ ಬೇಗ ಅತೀ ಹೆಚ್ಚು

ದೊರಯಬಾರದು ಎನ್ನುತ್ತಿದ್ದರಂದು ನಮ್ಮಜ್ಜಂದಿರು

ಒಂದೊಂದೇ ಮೆಟ್ಟಲೇರುವ ಶ್ರಮ ಅರಿತವನಿಗಷ್ಟೇ

ಅನ್ಯರ ಪರಿಶ್ರಮದ ಅರಿವೂ ಆಗಬಹುದೆಂದೆಂದರು


ಪ್ರತಿಮೆಯ ಸ್ಥಾಪಿಸುವುದೇಕೆ ಪರಭಾಷಿಗರ ನೆಲದಿ!!!

28 ಜುಲೈ 09
ನಮ್ಮವ್ವನ ಮೂರ್ತಿಯನು ನೆರೆಮನೆಯಂಗಳದಿ ಸ್ಥಾಪಿಸಿಲೇ
ನಮ್ಮವ್ವನ ನೆರೆಮನೆಯವರು ಗೌರವಿಸಲೆಂದು ನಾ ಆಶಿಸಲೇ

ನಾನೇ ನನ್ನವ್ವಗೆ ಕೊಡಲಾಗದಿದ್ದೊಡೆ ಕೈಯಾರೆ ಮರ್ಯಾದೆ
ನೆರೆಮನೆಯವರು ಅಗೌರವ ತೋರೆ ಮಾಡಬಹುದೇ ತಗಾದೆ

ಸರ್ವಜ್ಞನ ವಚನಗಳ ನೆನಪು ಕನ್ನಡಿಗರಿಗೇ ಸಾಕಷ್ಟಿಲ್ಲ ನಿಜದಿ
ಆತನ ಪ್ರತಿಮೆಯನು ಸ್ಥಾಪಿಸುವುದೇಕೆ ಪರ ಭಾಷಿಗರ ನೆಲದಿ

ಅನ್ಯ ಭಾಷೆಯಲಿ ಬರೆದು ಹೆಸರುವಾಸಿಯಾದರೆ ನಮಗೇನು
ಅವರ ಮೂರ್ತಿಗಳನು ನಾವಿಲ್ಲಿ ಸ್ಥಾಪಿಸಿ ಮೆರೆಸಲೇ ಬೇಕೇನು

ಕಾವೇರಿ ಹರಿಯದಿದ್ದಾಗ ಅಲ್ಲಿ ಸರ್ವಜ್ಞನ ಕಾಪಾಡುವರು ಯಾರು
ಹೊಗನೇಕಲ್ ಹೊಗೆ ಕಾರಿದರೆ ತಿರುವಳ್ಳುವರ‍್ರಿಗೆ ಇಲ್ಲಿ ಯಾರು

ವ್ಯಕ್ತಿ ನೀಡಿದ ಉಪದೇಶಗಳನು ಮರೆತು ಬಾಳುವವರೇ ನಾವೆಲ್ಲ
ಆದರೆ ವ್ಯಕ್ತಿಯನೇ ಹಗಲೆಲ್ಲಾ ಪೂಜಿಸುವ ಹುಚ್ಚು ನಮಗಿದೆಯಲ್ಲ

ಮಹಾತ್ಮನ ತತ್ವಗಳನು ದೂರಿ ಆತನನೇ ಅಲ್ಲ ಎಂಬರು ಸಾಧಕ
ಆದರೆ ಮಹಾತ್ಮಾಗಾಂಧೀ ರಸ್ತೆಗಳ ಸಂಖ್ಯೆ ಇಲ್ಲಿ ನೂರಕ್ಕೂ ಅಧಿಕ

ಶ್ರೀರಾಮನನು ದೇವರೆಂದು ಕೊಂಡಾಡುವ ನಮ್ಮ ಈ ನಾಡಿನಲ್ಲಿ
ಅಪ್ಪನನು ಕೊಲ್ಲುವ ಮಕ್ಕಳು ಸಿಗುತ್ತಾರೆ ಪ್ರತಿಯೊಂದು ಊರಿನಲ್ಲಿ

ಏನು ಹೇಳಿ ಹೋದರು ಎಂಬುವುದು ಮುಖ್ಯ ಆಗಿರಬೇಕು ನಿಜದಿ
ಆದರೆ ಯಾರು ಹೇಳಿದರು ಎನ್ನುವುದೇ ಮುಖ್ಯ ಆಗಿದೆ ಈ ಜಗದಿ
************************************