ಬಾರದವರಿಗಾಗಿ ಕೊರಗಬೇಕೇ…ಬರುವವರಿಗಾಗಿ ಮರುಗಬೇಕೇ?

10 ಜುಲೈ 10

ಸಖೀ,

ಸತ್ತು ಅಗಲಿದ ನನ್ನ ಅಪ್ಪಯ್ಯನವರನ್ನು

ನಾನು ನೆನೆನೆನೆದು ಮರುಗಿದರೆ, ನನ್ನ

ಒಳಗೊಳಗೆ ಕೊರಗಿದರೆ, ಈ ಸಮಾಜ

“ಯಾಕ್ರೀ ಸತ್ತವರಿಗಾಗಿ ಅಳ್ತೀರಿ?

ಬಾರದವರಿಗಾಗಿ ಮರುಗಿ ಫಲವಿಲ್ಲ…”

ಎಂಬ ಉಪದೇಶ ನೀಡುವುದು ನನಗೆ,

 

ನನ್ನಾಕೆ ತವರಿಗೆ ತೆರಳಿದಾಗ ನನ್ನನ್ನು

“ಏನ್ರೀ ಹೆಂಡತಿ ಇಲ್ಲದೇ ಬೇಸರಾನಾ…?”

ಎಂದು ವಿಚಾರಿಸುವವರಿಗೆ “ಇಲ್ಲಪ್ಪಾ…

ನನಗೆ ಕಿಂಚಿತ್ತೂ ಬೇಸರ ಇಲ್ಲ…

ನಾಲ್ಕು ದಿನ ಬಿಟ್ಟು ಬರುವವಳನು

ನಾ ನೆನೆದು ಮರುಗಲೇಕೆ ಹೇಳಿ…”

ಅಂತ ನಾನನ್ನಲು ಅದೇ ಸಮಾಜ

“ಯಾಕ್ರೀ ಜಗಳ ಮಾಡಿ ಹೋಗಿದಾರಾ…

ನೀವು ಯಾವ ತರಹ ಗಂಡಸೂ ರೀ…

ಹೆಂಡತಿ ಇಲ್ಲಾಂದ್ರೆ ಬೇಸರ ಆಗೋಲ್ವಾ..?”

ಎಂದು ಹುಬ್ಬೇರಿಸಿ ಕುಹಕ ನಗೆಬೀರಿ ಕೇಳುವ

ಪ್ರಶ್ನೆಗಳಿಂದ ಬಿಡುಗಡೆ ಇಲ್ಲವೆನಗೆ;

 

ನೀನೇ ಹೇಳು ಸಖೀ,

ನಾನು, ಬಾರದವರಿಗಾಗಿ ಕೊರಗಬೇಕೇ?

ಇಲ್ಲಾ, ಬರುವವರಿಗಾಗಿ ಮರುಗಬೇಕೇ?

********************


ನಿತ್ಯ ರೋದನ!

21 ಏಪ್ರಿಲ್ 10

 

ಸತ್ತು ಅಗಲಿದವರಿಗಾಗಿ

ನಾವು ಮರುಗಿ

ಕಣ್ಣೀರಿಡುವುದು

ಬರೀ ಒಂದೆರಡು ದಿನ,

 

ಆದರೆ,

ಎಲ್ಲಾ ಸಂಬಂಧಗಳ

ಮುರಿದುಕೊಂಡು

ನಮ್ಮ ನಡುವೆ ಇದ್ದೂ

ಸತ್ತಂತೆ ಇರುವ ನಮ್ಮ 

ಕೆಲವು ಬಂಧುಗಳಿಗಾಗಿ

ಅದ್ಯಾಕೋ ನಿತ್ಯ ರೋದನ! 

*****