ಮಣ್ಣಿನ ಪ್ರೇಮ ಚುನಾವಣೆಯಲಿ ಗೆಲುವ ತನಕ!!!

07 ಜುಲೈ 09
ಮಮತಾಳ ರೈಲು ಕರ್ನಾಟಕದಿಂದ ಕೇರಳದ ಕಡೆಗೆ
ಓಡುವುದೇಕೆ ಅನ್ನುವುದಕೇ ಅಲ್ಲ ನಮಗೀಗ ಚಿಂತೆ
ಬೆಂಗಳೂರು ಮಂಗಳೂರು ರೈಲು ಉತ್ತರಕ್ಕೆ ತಿರುಗಿ
ಕರ್ನಾಟಕದ ಕರಾವಳಿಯಲೇ ಮುಂದೆ ಸಾಗಬೇಕಿತ್ತಂತೆ

ಕರಾವಳಿಯ ಮತದಾರ ಕಾಂಗ್ರೇಸಿಗೆ ಮತ ನೀಡಿಲ್ಲ
ಎನ್ನುವುದರಿಂದ ಕಾಂಗ್ರೇಸಿಗರಿಗೆ ಮುನಿಸೇನೋ
ಹೀಗೆ ತಾರತಮ್ಯ ತೋರಿದರೆ ಮತದಾರ ಅವರಿಂದ
ಇನ್ನೂ ದೂರವಾಗುತ್ತಾನೆಂದವರು ಅರಿಯರೇನೋ

ಬೆಂಗಳೂರಿನಿಂದ ಹೊರಡುವ ರೈಲು ಇನೂ ಕಡಿಮೆ
ಸಮಯದಲಿ ಸಾಗಿ ಮಂಗಳೂರು ಸೇರಬೇಕಿತ್ತು
ಮೈಸೂರಿನ ದಾರಿ ಮರೆತು ಬೆಂಗಳೂರಿನಿಂದ
ಸೀದಾ ಸಕಲೇಶಪುರದ ಮೂಲಕ ಸಾಗಬೇಕಿತ್ತು

ಮೊಯ್ಲಿ, ಕೃಷ್ಣ, ಮುನಿಯಪ್ಪ, ಖರ್ಗೆ, ಇವರನ್ನೆಲ್ಲಾ
ನಮ್ಮವರೆಂದು ಕರೆದು ಸನ್ಮಾನ ಮಾಡಿಯಾಯ್ತು
ಸನ್ಮಾನ ಮುಗಿಸಿ ಹೋದವರು ಅಲ್ಲಿ ಮಮತಾಳ
ಆಯವ್ಯಯ ಪತ್ರಕ್ಕೆ ಖುಷಿಯಿಂದ ಮೇಜು ಕುಟ್ಟಿದ್ದಾಯ್ತು

ರಾಜಕೀಯವೇ ಹೀಗೆ ಇಲ್ಲಿ ನಮ್ಮವರೆಂಬವರೇ ಇಲ್ಲ
ಇದ್ದರೂ ಅವರು ನಮ್ಮವರಾಗಿಯೇ ಉಳಿಯುವುದಿಲ್ಲ
ಕನ್ನಡಿಗರ ನಾಡಿನಿಂದ ಕನ್ನಡಿಗರೇ ಚುನಾಯಿತರಾಗಿ
ಹೋದರೂ ಇಂದು ನಮಗೇನೂ ಲಾಭ ಆಗುತ್ತಲೇ ಇಲ್ಲ

ನಾಯಕರುಗಳ ಹೋರಾಟ ಭಾಷಾಭಿಮಾನ ಮಣ್ಣಿನ
ಮೇಲಿನ ಪ್ರೇಮ ಇವೆಲ್ಲಾ ಚುನಾವಣೆಯಲಿ ಗೆಲುವ ತನಕ
ಗೆದ್ದು ಹೊದ ಮೇಲೆ ಮರೆಯುತ್ತಾರೆ ಇತ್ತ ತಲೆ ಹಾಕದೇ
ಮುಖ ಕಾಣಿಸದೇ ಮುಂದಿನ ಮತದಾನದ ಬರುವನಕ


ಒಬಾಮಾ ತಂದ ಬದಲಾವಣೆ ನಮ್ಮಲ್ಲಿ ಅಸಾಧ್ಯ!!!

15 ಮೇ 09
ಮತ್ತೆ ಬೇಡಿಕೆಯಲ್ಲಿದ್ದಾರೆ ಮಾಯಾ ಜಯಾ ಮತ್ತು ಮಮತಾ
ಇದೀಗ ನೆನಪಿಗೆ ಬರುತಿಹುದೆನಗೆ ನಮ್ಮ ಜಾರ್ಜರ ಸಮತಾ
 
ಚರಿತ್ರೆ ಪುನರಾವರ್ತನೆಯಾಗುವುದೆಂಬ ಮಾತು ಎಷ್ಟು ಸತ್ಯ
ಈ ನಾರೀಮಣಿಗಳು ತಯಾರಿಸೋ ಕಿಚಡಿಯೇ ಎಲ್ಲರಿಗೂ ಪಥ್ಯ
 
ನೂರು ಕೋಟಿ ಜನರಿಗೆ ನೂರಾರು ಪಕ್ಷಗಳು ನಮ್ಮ ದೇಶದಲ್ಲಿ
ಯಾರೆತ್ತ ವಾಲಿದರೂ ಬಹುಮತ ದೊರೆಯದು ಚುನಾವಣೆಯಲ್ಲಿ
 
ಚುನಾವಣೆಗೆ ಮೊದಲು ಬೀದಿ ನಾಯಿಗಳಂತೆ ಕಾದಾಡುವವರು
ಚುನಾವಣೆಯ ನಂತರ ಒಂದೇ ನಾಯಿಯ ಮರಿಗಳಂತೆ ಇವರು
 
ದೇಶದ ಸಿಪಾಯಿಯಾಗಲು ಇಲ್ಲಿ ನೂರಾರು ಅರ್ಹತೆಗಳ ಪಟ್ಟಿ
ಆದರೆ ಇರಬೇಕಾಗಿಲ್ಲ ಮಹಾದಂಡನಾಯಕನ ಆರೋಗ್ಯ ಗಟ್ಟಿ
 
ಸರಕಾರೀ ಅಧಿಕಾರಿಯಾಗುವುದಕೆ ಪಡಬೇಕಾದ ಶ್ರಮ ಅಷ್ಟಿಷ್ಟಲ್ಲ
ಅಧಿಕಾರಿಳ ಮೇಲೆ ಅವಿದ್ಯಾವಂತ ಗೂಬೆ ಬಂದು ಕೂರುತಾನಲ್ಲಾ
 
ಅಮೇರಿಕಾದಲ್ಲಿ ಒಬಾಮಾ ತಂದ ಬದಲಾವಣೆ ನಮ್ಮಲ್ಲಿ ಅಸಾಧ್ಯ
ಅಲ್ಲಿ ಎರಡೇ ಪಕ್ಷಗಳು ಇಲ್ಲಿ ಹಾಗಾಗುವ ಸೂಚನೇಯೇ ಇಲ್ಲ ಸದ್ಯ
 
ಅಲ್ಲಿ ಒಂದು ಪಕ್ಷದೊಳಗಣ ಅಭ್ಯರ್ಥಿಯನೂ ಜನರೇ ಆರಿಸುತ್ತಾರೆ
ಇಲ್ಲಿ ಹಾಗಲ್ಲ ಇರುವ ಮೂರ್ಖರಲಿ ಶತಮೂರ್ಖನನು ಹೇರುತ್ತಾರೆ
 
ಯಾವ ಸರ್ಕಾರ ಬಂದರೂ ಇಲ್ಲಿ ಬದಲಾವಣೆ ಆಗಲು ಸಾಧ್ಯವಿಲ್ಲ
ನಾಡಿಗೆ ಎರಡೇ ಪಕ್ಷಗಳು ಒಂದೇ ನಾಗರಿಕ ಸಂಹಿತೆ ಆಗಬೇಕಲ್ಲ