ಕೆಲಸ ಮಾಡುವ ಮನಸಿದ್ದರೆ!

27 ಸೆಪ್ಟೆಂ 12

ಕೆಲಸ ಮಾಡುವ ಮನಸಿದ್ದರೆ
ಮತ ನೀಡಿದವರ ನೆನಪಿದ್ದರೆ
ಯಾವ ಪಕ್ಷದಲ್ಲಿದ್ದರೂ ಒಂದೇ
ಧನ್ಯವಾದಗಳನ್ನರ್ಪಿಸಬೇಕು,

ಕೆಲಸ ಮಾಡುವ ಇಚ್ಛೆಯಿಲ್ಲದಿರೆ
ಮತ ನೀಡಿದವರನ್ನು ಮರೆತರೆ
ಯಾವ ಪಕ್ಷದಲ್ಲಿದ್ದರೂ ಒಂದೇ
ಮುಖಕ್ಕುಗಿದು ದೂರತಳ್ಳಬೇಕು;

ಶ್ರೀ ಜಯಪ್ರಕಾಶ ಹೆಗ್ಡೆಯವರು ಆ
ಮೊದಲ ವರ್ಗಕ್ಕೆ ಸೇರಿದವರೆಂದು
ಕೆಲಸ ಮಾಡಿ ತೋರಿಸಿದ್ದಾರಿಂದು
ಹಾಗಾಗಿ ಅವರಿಗೇ ಜಯ ಮುಂದೂ,

ಎರಡನೇ ವರ್ಗದಲ್ಲಿರುವವರ ಪಟ್ಟಿ
ಬಹಳಷ್ಟು ಉದ್ದವಾಗಿಹುದು ಗೊತ್ತು
ಅಂಥವರು ಮತ ಕೇಳಲು ಬಂದರೆ
ಸೋಲಿಸೋಣ ಬಾರದಂತೆ ಎಂದೂ!
*****************


ರಾಜ್ಯದ ಅರಾಜಕತೆ ಕೊನೆಗೊಳಿಸಲು ಇಲ್ಲಿದೆ ಸೂತ್ರ!!!

17 ನವೆಂ 09

ನಮ್ಮ ನಾಡಿನೀ ಅರಾಜಕತೆಗೆ ಇಲ್ಲಿದೆ ಒಂದು ಸೂತ್ರ

ಇದನೊಪ್ಪಿ ನಡೆದರೆ ಚುನಾವಣೆವರೆಗೆ ಎಲ್ಲಾ ಸುಸೂತ್ರ

 

ಕರುಣಾಕರ ರೆಡ್ಡಿಯ ಮಾಡಿರೀ ರಾಜ್ಯದ ಮುಖ್ಯಮಂತ್ರಿ

ಅವರ ಒಬ್ಬೊಬ್ಬ ಬೆಂಬಲಿಗನೂ ಆಗಿ ಬಿಡಲಯ್ಯ ಮಂತ್ರಿ

 

ಅಭಿವೃದ್ದಿಯ ಮಾತ ಬಿಡಿ ಈಗಲೂ ಇಲ್ಲ ಏನೂ ಅಭಿವೃದ್ಧಿ

ಅವರೆಲ್ಲ ನೆಮ್ಮದಿಯಿಂದ ಇದ್ದರೆ ರಾಜ್ಯದಲ್ಲೆಲ್ಲೂ ನೆಮ್ಮದಿ

 

ತಾನು ಸಾಚಾ ಎಂದು ಕೊಳ್ಳುವವರಿಗೆಲ್ಲ ಇದ್ದಾರೆ ಕಳ್ಳ ಮಕ್ಕಳು

ಹೊರತಲ್ಲ ಇದಕೆ ಸಾಚಾ ಎನಿಸಿದ್ದ ಎಂಪಿ ಪ್ರಕಾಶರ ಮಕ್ಕಳೂ

 

ನಮಗೆ ಗೌಡರೇನು, ಯಡ್ಡಿಯೇನು ಅಲ್ಲಾ ಆ ರೆಡ್ಡಿಗಳಾದರೇನು

ಈ ಕರುನಾಡಿನ ಉದ್ಧಾರ ಯಾರು ಬಂದರೂ ಆಗಲಿಕ್ಕುಂಟೇನು

 

ಒಮ್ಮೆ ಎಲ್ಲ ಲೂಟಿ ಹೊಡೆದು ಖಾಲಿ ಮಾಡಿ ಬಿಡಲಿ ಖಜಾನೆ

ಆಮೇಲೆ ರಾಜ್ಯಭಾರ ನಡೆಸಲು ಬೇಕು ಒಬ್ಬ ನಿಷ್ಠಾವಂತನೇ

 

ಮುಂದಿನ ಚುನಾವಣೆಯಲ್ಲಿ ನಿಷ್ಠಾವಂತನಿಗೆ ಹಾಕೋಣ ಮತ

ಯಾರು ನಿಸ್ವಾರ್ಥನಾಗಿ ಕಾಪಾಡುತ್ತಾನೋ ಈ ನಾಡಿನ ಹಿತ

****************************************