ಇಂದು ಮತ್ತೇರಿ ಓಲಾಡುತಿದೆ!

27 ಸೆಪ್ಟೆಂ 12

||ಇಂದು ಮತ್ತೇರಿ ಓಲಾಡುತಿದೆ,
ನನ್ನ ಮನಸು ನನ್ನ ಮನಸು ನನ್ನ ಮನಸೂ
ಕಾರಣ ಇಲ್ಲದೆಯೇ ನಗುತಲಿದೆ,
ನನ್ನ ಮನಸು ನನ್ನ ಮನಸು ನನ್ನ ಮನಸೂ||

ಹೂವುಗಳೇ ಪಾಲಕಿ ಶೃಂಗರಿಸಿ,
ಅಲೆಗಳೇ ಕಾಲ್ಗೆಜ್ಜೆ ತೊಡಿಸಿ
ನದಿ ನೀನು ಕನ್ನಡಿಯಾಗು,
ಕಿರಣವೇ ನೀ ಸೆರಗನು ಹೊದಿಸು

ಇಂದೀ ಜೋಗಿಣಿ ಆಗಿಹಳು ಮದುಮಗಳು,
ಎಲ್ಲಾದರೂ ಹಾರಿಹೋಗುವೆ ಅನುತಿಹಳು

||ಇಂದು ಮತ್ತೇರಿ ಓಲಾಡುತಿದೆ,
ನನ್ನ ಮನಸು ನನ್ನ ಮನಸು ನನ್ನ ಮನಸೂ
ಚೆಲ್ಲಾಟ ಆಡಲು ಹಾತೊರೆಯುತಿದೆ,
ನನ್ನ ಮನಸು ನನ್ನ ಮನಸು ನನ್ನ ಮನಸೂ||

ನಮ್ಮನ್ನಿಲ್ಲಿ ಜನ ನೋಡುತ್ತಾರೆ,
ಮರೆಯಲ್ಲಿ ಕೂರೋಣ ಬಾರೇ
ಮತ್ತೇರಿಸುವ ದಿನ ಇದೆ ಹೀಗೆ,
ಹೇಗಿರಲಿ ನಾನು ದಾಹ ತೀರಿಸದೇ 
ನಿನ್ನವನು ನಾನು, ನೀನು ನನ್ನವಳು ನಿನ್ನಾಣೆಗೂ, 
ನಿನ್ನವಳು ನಾನು, ನೀನು ನನ್ನವನು ನನ್ನಾಣೆಗೂ

||ಇಂದು ಮತ್ತೇರಿ ಓಲಾಡುತಿದೆ, 
ನನ್ನ ಮನಸು ನನ್ನ ಮನಸು ನನ್ನ ಮನಸೂ
ಚೆಲ್ಲಾಟ ಆಡಲು ಹಾತೊರೆಯುತಿದೆ, 
ನನ್ನ ಮನಸು ನನ್ನ ಮನಸು ನನ್ನ ಮನಸೂ||

ರೋಮ ರೋಮ ಹಾಡುತಿದೆ ಗೀತೆ, 
ಅಂಗಾಂಗದಲೂ ವಾದ್ಯ ಸಂಗೀತ
ಬಾಳಿನಾ ಸುಖ ಕ್ಷಣದಲ್ಲೇ ಪಡೆದೆ, 
ಎಂತೋ ಏನೋ ಬಂತು ಈ ಗಳಿಗೆ
ಇಂದು ಮುಗಿಲ ಮುಟ್ಟಿಹೆ ನಾನು, 
ಕುಣಿಯುತಿಹೆ ಮನದ ಜೊತೆ ನಾನೂ

|ಇಂದು ಮತ್ತೇರಿ ಓಲಾಡುತಿದೆ,
ನನ್ನ ಮನಸು ನನ್ನ ಮನಸು ನನ್ನ ಮನಸೂ
ಚೆಲ್ಲಾಟ ಆಡಲು ಹಾತೊರೆಯುತಿದೆ,
ನನ್ನ ಮನಸು ನನ್ನ ಮನಸು ನನ್ನ ಮನಸೂ||

ಕವಿ ನೀರಜ್ ರಚಿಸಿರುವ, ಸಚಿನ್ ದೇವ್ ಬರ್ಮನ್ ಸಂಗೀತ ನೀಡಿ, ಕಿಶೋರ್ ಕುಮಾರ್ ಹಾಗೂ ಲತಾ ಮಂಗೇಶ್ಕರ್ ಹಾಡಿರುವ, ಶಶಿ ಕಪೂರ್ ಹಾಗೂ ರಾಖಿ ಅಭಿನಯದ ಶರ್ಮಿಲೀ ಚಿತ್ರದ, ನನ್ನ ಮೆಚ್ಚಿನ ಹಾಡೊಂದರ ಭಾವಾನುವಾದದ ಯತ್ನ ಇಲ್ಲಿದೆ.


ಕಾಡದಿರಲಿ ಭೂತ ಭವಿಷ್ಯದ ಚಿಂತೆ!

16 ಏಪ್ರಿಲ್ 10

 
ಆ ಸೂರ್ಯ ಮರೆಯಾದ ಪಡುವಣದ ಕಡಲಲ್ಲಿ

 ನಾನಿಲ್ಲಿ ಸೆರೆಯಾದೆ ನಿನ್ನೀ ಬಾಹು ಬಂಧನದಲ್ಲಿ

 

ನಮ್ಮದೇ ಲೋಕದಲ್ಲಿ ಒಂದಾಗಿ ವಿಹರಿಸೋಣ ಬಾ

ದಿನದ ನೋವುಗಳನ್ನೆಲ್ಲಾ ನಾವು ಮರೆಯೋಣ ಬಾ

 

ಕೊಂಡೊಯ್ಯಲಿ ನಮ್ಮನ್ನುಂತ್ತುಂಗಕ್ಕೆ ಸುಖದ ಮತ್ತೇರಿ

ನೋಡುತ್ತಿರು ಬೀಳದಂತೆ ನಿನ್ನ ತೆಕ್ಕೆಯಿಂದ ನಾ ಜಾರಿ

 

ಹುಣ್ಣಿಮೆಯ ಚಂದಿರನು ನಗುವಂತೆ ಆ ಬಾನಂಗಳದಲ್ಲಿ

ತುಂಬಿ ತುಳುಕುತ್ತಿರಲಿ ನಲಿವು ನಮ್ಮೀ ಮನದಂಗಣದಲ್ಲಿ

 

ಮೂಡಣದಿ ನಾಳೆ ಮತ್ತೆ ಮೇಲೇರಿ ಬಂದಾಗ ಆ ನೇಸರ

ಕಾಯಕದ ಮೇಲೆ ನಾ ಹೊರಟರೆ ಪಡಬೇಡ ನೀ ಬೇಸರ

 

ಎಂದಿಗೂ ಸಾಗುತ್ತಿರಲಿ ನಮ್ಮ ಜೀವನ ಚಕ್ರ ಇಂತೆಯೇ

ನಮ್ಮನೆಂದಿಗೂ ಕಾಡದಿರಲಿ  ಭೂತ ಭವಿಷ್ಯದ ಚಿಂತೆಯೇ

*****