ಹತೋಟಿ!

01 ಸೆಪ್ಟೆಂ 12

ಸಖೀ,
ಚಂದಿರ
ಈ ಭೂಮಿಯ
ಮೇಲೆಲ್ಲಾ
ಪಸರಿಸುವುದು
ಆ ರವಿಯ
ಬೆಳಕನ್ನೇ;

ಆದರೆ,
ಆ ಬೆಳಕಿನ
ಮೇಲಿನ
ಹತೋಟಿ
ಮಾತ್ರ
ಇರುವುದು
ಸದಾ
ಭೂಮಿಯ
ಕೈಯಲ್ಲೇ!


ಮಾನವ ದೇಹ ಮತ್ತು ಭೂಮಿ!

29 ಮೇ 10

 

ಮಾನವ ದೇಹವಿದು

ನಿಜದಿ ಭೂಮಿಯ ಚಿಕ್ಕದಾದ ರೂಪ

 

ಭೂಮಿಯಂತೆಯೇ ಇದೂ

ನಿಗೂಢ ಚಟುವಟಿಕೆಗಳ ಕೂಪ

 

ಕಾಡು ಮೇಡುಗಳಿವೆ

ಬುವಿಯ ಮೇಲ್ಮೈಯಲ್ಲಿರುವಂತೆ

 

ದಿಣ್ಣೆ ಕಣಿವೆಗಳೂ ಇವೆ

ಭೂಮಿಯುದ್ದಗಲಕೂ ಇರುವಂತೆ

 

ಇಲ್ಲಿ ಕ್ರಿಮಿ ಕೀಟಾಣುಗಳ ವಾಸ

ಅಲ್ಲಿ ಪ್ರಾಣಿ ಪಕ್ಷಿ ಸಂಕುಗಳಿರುವಂತೆ

 

ಇಲ್ಲಿ ಖಾಯಿಲೆ ಖಸಾಲೆಗಳು

ಅಲ್ಲಿನ ಅತಿವೃಷ್ಟಿ ಅನಾವೃಷ್ಟಿಗಳಂತೆ

 

ಮಾಂಸಖಂಡಗಳು ಆಡುವವು

ಅಲ್ಲಿ ಭೂಕಂಪನಗಳು ಆಗುವಂತೆ

 

ಇಲ್ಲಿ ವಾಂತಿ ಭೇದಿಗಳಿವೆ

ಅಲ್ಲಿರುವ ಜ್ವಾಲಾಮುಖಿಗಳಂತೆ

 

ಇಲ್ಲಿಯೂ ನಿರಂತರ ಚಲನೆ

ಭೂಮಿಯ ಆ ಪರಿಭ್ರಮಣದಂತೆ

 

ಮಾನಸಿಕ ಚಂಚಲತೆ ಇಲ್ಲಿ

ಅಲ್ಲಿನ ವಾತಾವರಣದಲ್ಲಿರುವಂತೆ

 

ಆದರೆ ಒಂದೇ ಅಂತರ

ಇಲ್ಲಿಗೂ ಅಲ್ಲಿಗೂ ಅರಿತಿರಾ?

 

ಇಲ್ಲಿ ಏರುಪೇರಿನಲ್ಲಿ

ಒಮ್ಮೊಮ್ಮೆ ವಿಪರೀತ ಉಷ್ಣತೆ

 

ಅಲ್ಲಿ ಉಷ್ಣತೆಯಲ್ಲಿ

ಒಮ್ಮೊಮ್ಮೆ ವಿಪರೀತ ಏರುಪೇರು!

***********************


ಆಕಾಶ – ಭೂಮಿ!

04 ಮೇ 10

 

ಸಖೀ,

ನೀ ನಿಜವನ್ನೇ ನುಡಿದೆ

ನೀ ಭೂಮಿಯಾದರೆ

ನಾ ಆಕಾಶವೆಂದೆ!

 

 

ಭೂಮಿ ಆಕಾಶವನ್ನು

ಮುಟ್ಟುತ್ತಿದೆಯೆಂದೂ

ಆಕಾಶ ಭೂಮಿಯನ್ನು

ಎಲ್ಲಾ ಕಡೆಯಿಂದಲೂ

ತಬ್ಬಿಕೊಳ್ಳುತ್ತಿದೆಯೆಂದೂ

ಎಲ್ಲರಿಗೂ ಅನ್ನಿಸುತ್ತಿರುವುದು

ಅದು ಬರೀ ಭ್ರಮೆಯಷ್ಟೆ!

 

 

ಭೂಮಿ ಆಕಾಶಗೆಳೆಂದೂ

ಒಂದಾಗುವುದೇ ಇಲ್ಲ

ಅಂತೆಯೇ ನಾವೂ ಕೂಡ

ಇದೂ ಸರಿಯಷ್ಟೆ?

 

 

ಆದರೂ ಸಖೀ,

ಆ ಆಕಾಶದೊಳಗೇ

ಈ ಭೂಮಿಗಿದೆ ನೆಲೆ

ಈ ಭೂಮಿಯಿದ್ದರಷ್ಟೇ

ಆ ಆಕಾಶಕ್ಕೂ ಬೆಲೆ!

*****


ಚಂದ್ರ ಅನ್ಯ ಗ್ರಹದ ತೆಕ್ಕೆಗೆ ಸೇರಿಕೊಂಡರೆ…?!

09 ಆಕ್ಟೋ 09

ಬಾಂಬುಗಳಿಂದ ಈ ಭೂಲೋಕದಲ್ಲಾದ

ನಷ್ಟ ಆಗಲೇ ಮಿತಿ ಮೀರಿ ಹೋಗಾಗಿದೆ

ಈಗ ನೋಡಿದರೆ ಬಾಂಬುಗಳ ಸವಾರಿ

ದೂರದ ಚಂದಮಾಮನತ್ತಲೂ ಸಾಗಿದೆ

 

ಆತನನು ಘಾಸಿಗೊಳಿಸಿ ಬಂದು ಇನ್ನಿಲ್ಲಿ

ಆನಂದಿಸಲಾದೀತೇ ಆ ಬೆಳದಿಂಗಳನು

ಇನ್ನು ಉಣಲೊಲ್ಲದ ಮಕ್ಕಳಿಗೆ ಇಲ್ಲಿಂದ

ತೋರಿಸಲಾದೀತೇ ಚಂದಮಾಮನನು

 

ವಾತಾವರಣದಲ್ಲಿನ ಏರುತಿರುವ ಉಷ್ಣಕ್ಕೆ

ಆತನ ಮೈಬೆವತು ಪಸೆ ಕಂಡಿರಬಹುದೇ

ಅದರ ರಹಸ್ಯವನು ಬೇಧಿಸಲು ಆತನನು

ಈ ಪರಿಯಾಗಿ ತಿವಿದು ಹಿಂಸಿಸಬಹುದೇ

 

ಶಾಂತನಾಗೇ ಬೆಳಕಿಂದ ಕಡಲ ಮತ್ತೇರಿಸಿ

ಉಕ್ಕುವ ತೆರೆಗಳನು ಸೃಷ್ಟಿಸಬಲ್ಲ ಚಂದಿರ

ಕೋಪಗೊಂಡನೆಂದರೆ ಇನ್ನು ಭೂಲೋಕದ

ಉದ್ದಗಲಕ್ಕೂ ಸುನಾಮಿ ಅಲೆಗಳದೇ ಅಬ್ಬರ

 

ಚಂದಿರ ಮುನಿಸಿನಿಂದ ಭೂಮಿಯ ಬಿಟ್ಟು

ಅನ್ಯ ಗ್ರಹದ ತೆಕ್ಕೆಗೆ ಸೇರಿಕೊಳ್ಳಬಹುದು

ತಿಂಗಳು ಪೂರ್ತಿ ಅಮವಾಸ್ಯೆ ಆಗಿ ಇಲ್ಲಿ

ರಾತ್ರಿ ಕಳ್ಳರ ಕಾಟ ಹೆಚ್ಚಾಗಲೂಬಹುದು


ಮರೆಯಬೇಕು ಕೆಟ್ಟ ಗಳಿಗೆಗಳ!!!

22 ಜುಲೈ 09
ಸಖೀ,

ನಗುವುದಕೇ
ನಕ್ಕು ನಗಿಸುವುದಕೇ
ಸಮಯ ಸಾಲದಿರುವಾಗ
ದುಡುಕು ಬಿಗುಮಾನಗಳಲೇಕೆ
ವ್ಯರ್ಥ ವ್ಯಯಿಸುವೆ ಜೀವನದ
ಈ ಅಮೂಲ್ಯ ಕ್ಷಣಗಳನು

ಮರೆತು ಬಿಡು ವ್ಯಥೆಯ
ನಿನ್ನೆಯ ಆ ಹಳೆ ಕತೆಯ

ಮರೆತಿಲ್ಲವೇ ಆ ಸೂರ್ಯ
ಗ್ರಹಣ ಹಿಡಿಸಿದ ಚಂದ್ರನನು

ಕ್ಷಮಿಸಿ ಬೆಳಗುತಿಲ್ಲವೇ ತನ್ನ
ಪ್ರಭೆಯಿಂದಲೇ ಆತನನು

ಮರೆತಿಲ್ಲವೇ ಆ ಶಶಿ
ಸೂರ್ಯನಿಗೆ ಅಡ್ಡ
ನಿಂತಿದ್ದ ಭೂಮಿಯನು

ಚೆಲ್ಲುತಿಲ್ಲವೇ ಸದಾ
ಭೂಮಿಯುದ್ದಗಲಕೂ
ಬೆಳದಿಂಗಳನು

ಮರೆಯಬೇಕು
ಕೆಟ್ಟ ಗಳಿಗೆಗಳ
ದುಃಖದ ಕತೆಗಳ

ಮನ್ನಿಸಬೇಕು
ಮನ್ನಿಸಿ ಬೆರೆಯಬೇಕು

ರಾತ್ರಿ ಕಳೆದ ಮೇಲೆ
ಬೆಳಕು ಹರಿಯುವಂತೆ
ದುಃಖವದು ಅಳಿದ ಮೇಲೆ
ಸುಖದ ಆಗಮನವಂತೆ
*-*-*-*-*-*-*-*