ಮಾತುಗಳು ಕೇಳುಗರ ನೆನಪಲ್ಲಿ ಸದಾ ಉಳಿಯುವಂತಿರಬೇಕು!

05 ಮೇ 12

ನಾವು ಅನ್ಯರಿಗೆ ಇಷ್ಟವಾಗುವುದು ನಮ್ಮ ಮಾತುಗಳಿಂದ. ನಾವು ಬರಹಗಾರರಾಗಿದ್ದರೆ ನಮ್ಮ ಬರಹಗಳಲ್ಲಿ ನಾವು ವ್ಯಕ್ತಪಡಿಸುವ ಭಾವಗಳಿಂದಾಗಿ, ನಾವು ಆರಿಸುವ ವಿಷಯಗಳಿಂದಾಗಿ ಹಾಗೂ ನಮ್ಮ ಮಾತು ಅಥವಾ ಬರಹಗಳಲ್ಲಿ ನಾವು ಪದಗಳನ್ನು  ಬಳಸುವ ಶೈಲಿಯಿಂದಾಗಿ. ಕೇಳುಗರಿಗೆ ಅಥವಾ  ಓದುಗರ ಮನಕ್ಕೊಪ್ಪುವಂತೆ,   ಹೆಚ್ಚು ಹೆಚ್ಚು  ಆಪ್ತವಾಗಿ ಒಪ್ಪಿಸುವ ನಮ್ಮೊಳಗಿನ ಕಲೆಯಿಂದಾಗಿ.

ಇಲ್ಲೋರ್ವನ ಉದಾಹರಣೆ ಇದೆ. ಆತ  ತನ್ನ ವೃತ್ತಿಯಲ್ಲಿ  ಒಳ್ಳೆಯ ಸಾಧನೆ ಮಾಡಿ ಪ್ರಖ್ಯಾತನಾಗಿರುವುದರ ಜೊತೆಗೇ, ಹವ್ಯಾಸಿ ಭಾಷಣಕಾರನಾಗಿಯೂ ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸಿರುತ್ತಾನೆ. ವಿವಿಧ ಸಮಾರಂಭಗಳಿಗೆ ಕರೆಸಿ ಆತನಿಂದ ಭಾಷಣ ಏರ್ಪಡಿಸುವವರೂ ಇದ್ದಾರೆ. ಆತನ  ಮಗ ವಿದ್ಯಾಭ್ಯಾಸ ಮಾಡುತ್ತಿರುವ ಶಾಲೆಯಲ್ಲಿ, ಗಣತಂತ್ರ ದಿವಸದಂದು ಧ್ವಜಾರೋಹಣ ಮಾಡಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಲು ಆತನನ್ನು ಕರೆಸಿದ್ದರು. ಭಾಷಣ ಮಾಡಲು ಸಿಗುವ ಯಾವುದೇ ಅವಕಾಶವನ್ನು ಸುಲಭದಲ್ಲಿ, ಕಾರಣವಿಲ್ಲದೇ  ಬಿಡಲೊಲ್ಲದ ಆತ, ಒಪ್ಪಿಕೊಂಡು ಹೋಗಿದ್ದ. ಅಂದು  ಧ್ವಜಾರೋಹಣ ಮಾಡಿ ಮುಗಿಸಿ,  ಭಾಷಣ ಆರಂಭಿಸಿದಾಗ, ಆ ಶಾಲೆಯ ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳು, ಆತನ ಮುಂದೆ ಆಸೀನರಾಗಿ, ಆತನ ಮಾತುಗಳಿಗೆ ಕಿವಿಕೊಡುತ್ತಿದ್ದರು. ಆತನ ವಾಗ್ಝರಿಗೆ ಮೈಮರೆತ ಮಕ್ಕಳಿಗೆ ಸಮಯದ ಪರಿವೆಯೇ ಇರಲಿಲ್ಲ. ರಾಷ್ಟ್ರ ಪ್ರೇಮದ ಮಾತಿನಿಂದ ಶುರುವಾದ ಆತನ ಭಾಷಣ, ಕತೆ ಉಪಕತೆಗಳೊಂದಿಗೆ ಮುಂದುವರೆದು, ಮುಗಿದಾಗ, ಅಲ್ಲಿ ನೆರೆದಿದ್ದ ವಿದ್ಯಾರ್ಥಿಗಳನ್ನು ಹಾಗೂ ಅಧ್ಯಾಪಕ ವೃಂದವನ್ನು ಮಂತ್ರ ಮುಗ್ಧರನ್ನಾಗಿಸಿ, ಇನ್ನಾವುದೋ ಲೋಕಕ್ಕೆ ಕೊಂಡೊಯ್ದುಬಿಟ್ಟಿತ್ತು. ಅಂದು ಶಾಲೆಯಿಂದ ಮನೆಗೆ ತೆರಳಿದ ಮಕ್ಕಳು ತಮ್ಮ ತಾಯಿ ತಂದೆಯವರಿಗೆ ಒಪ್ಪಿಸಿದ ವರದಿಯಿಂದಾಗಿ, ಸಂಜೆಯೊಳಗಾಗಿ ಸುತ್ತಮುತ್ತಲಿನ ನಾಲ್ಕು ಊರುಗಳಲ್ಲಿ ಆತ ಮನೆಮಾತಾಗಿ ಹೋಗಿಬಿಟ್ಟಿದ್ದ.  ಇದಕ್ಕೆಲ್ಲಾ ಕಾರಣ ಸಂದರ್ಭವನ್ನು ಅರಿತು, ನೆರೆದ ಸಭಿಕರ ಮನದಿಂಗಿತವನ್ನು ತಿಳಿದು, ಅವರಿಗೆ ಅರ್ಥವಾಗುವ ಭಾಷೆಯಲ್ಲಿ, ಶೈಲಿಯಲ್ಲಿ ಮಾತನಾಡುವ ಆತನ ಕಲೆ.

ಇಲ್ಲಿ ನಾನು ಭಾಷೆ ಎನ್ನುವಾಗ, ಅದನ್ನು  ಕನ್ನಡ, ಹಿಂದಿ ಅಥವಾ ಆಂಗ್ಲ ಎನ್ನುವ ಅರ್ಥದಲ್ಲಿ ಬಳಸಿಲ್ಲ. ಕನ್ನಡವೇ ಆಗಿರಲಿ ಅಥವಾ ಇನ್ನಾವುದೇ ಅನ್ಯ ಭಾಷೆಯೇ ಆಗಿರಲಿ, ಅದರಲ್ಲಿ ಹಲವು ವಿಧಗಳಿವೆ. ಹಳ್ಳಿಯಲ್ಲಿ ಆಡುವ ಭಾಷೆಗೂ, ಪಟ್ಟಣದಲ್ಲಿ ಆಡುವ ಭಾಷೆಗೂ ನಡುವೆ ವ್ಯತ್ಯಾಸ ಇದೆ. ಮಕ್ಕಳು ಬಳಸುವ ಭಾಷೆಗೂ, ಹಿರಿಯರು ಬಳಸುವ ಭಾಷೆಗೂ ವ್ಯತ್ಯಾಸ ಇದೆ. ಹಾಗಾಗಿ, ನಾವು ಯಾರನ್ನು ಉದ್ದೇಶಿಸಿ ಮಾತನಾಡುತ್ತಿದ್ದೇವೆ, ಯಾವ ಮಟ್ಟದ ಭಾಷೆಯಲ್ಲಿ, ಯಾವ ವಿಷಯದ ಕುರಿತು ಮಾತನಾಡಿದರೆ ನೆರೆದ ಸಭಿಕರಿಗೆ  ಅರ್ಥವಾದೀತು ಎನ್ನುವ ಅರಿವು ಇರಿಸಿಕೊಂಡು, ಮಾತನಾಡಿದರೆ, ಅದು ಶತ ಪ್ರತಿ ಶತ ಪ್ರಯೋಜನಕಾರಿಯಾದೀತು, ಪ್ರತಿ ಮನವನ್ನೂ ಮುಟ್ಟೀತು.

ಸಂದರ್ಭವನ್ನು ಅರಿಯದೇ, ಸಿಕ್ಕ ಅವಕಾಶವನ್ನು ತನ್ನ ಮನಸ್ಥಿತಿ, ತನ್ನ ಸ್ವಂತದ ನಿಲುವು ಅಥವಾ ತನ್ನ ಸ್ವಹಿತಾಸಕ್ತಿಯನ್ನು ಗುರಿಯಾಗಿಟ್ಟುಕೊಂಡು, ಅಸಂಬದ್ಧವಾಗಿ, ಮಾತನಾಡಲು ಆರಂಬಿಸಿದರೆ, ನೆರೆದ ಸಭಿಕರಿಗೆ ಕಿರಿಕಿರಿ ಉಂಟಾಗಬಹುದು. ಸಭಿಕರು ತಮ್ಮ ಸಂಯಮ ಕಳೆದುಕೊಂಡು ಸಿಟ್ಟಾಗಲೂ ಬಹುದು. ಅಲ್ಲಿನ ವಾತಾವರಣ ಕೆಟ್ಟುಹೋಗಬಹುದು. ಸಂವಾದ ಅಥವಾ ಗೋಷ್ಟಿಯಲ್ಲಿ ಹೀಗಾದರೆ, ಅದು ಅತಿರೇಕವನ್ನು ತಲುಪಬಹುದು. ಕೊನೆಗೆ ಯಾವ ರೂಪವನ್ನು ಪಡೆಯಬಹುದು ಎನ್ನುವುದನ್ನೂ ಊಹಿಸಲಾಗದು.

ಮದುವೆ ಮನೆಯಲ್ಲಿ ವಧೂವರರನ್ನು ಹರಸಲು ಬಂದವರು, ಶುಭಶಕುನದ ಮಾತುಗಳನ್ನು ಆಡಿ, ವಧೂವರರನ್ನು ಹರಸುವ ಬದಲು, ಯಾರೋ ಸ್ವರ್ಗಸ್ಥರಾದ ಕುಟುಂಬದ ಹಿರಿಯರೋರ್ವರ ಗೈರುಹಾಜರಿಯನ್ನು ಅಲ್ಲಿದ್ದವರಿಗೆ  ನೆನಪಿಸಿ, ನೆರೆದಿದ್ದ ಕುಟುಂಬದ ಸದಸ್ಯರನ್ನೆಲ್ಲಾ  ಶೋಕ ಸಾಗರದಲ್ಲಿ ಮುಳುಗಿಸಿ ಹೋದರೆ ಹೇಗಾದೀತು?

ಸ್ವರ್ಗಸ್ಥರಾದವರಿಗೆ ನುಡಿನಮನ ಅರ್ಪಿಸಲು ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಲು ಕರೆಸಲ್ಪಟ್ಟವರು, ದೈವಾಧೀನರಾದವರ ಬಗ್ಗೆ ಒಂದೆರಡು ಮಾತನಾಡಿ ಶ್ರದ್ಧಾಂಜಲಿ ಅರ್ಪಿಸಿ ಹೋಗುವ ಬದಲು, ಅಗತ್ಯಕ್ಕಿಂತ ಹೆಚ್ಚಾಗಿ, ಮೃತರ ಕುಟುಂಬದ ಅಲ್ಲಿರುವ ಇತರ ಸದಸ್ಯರ ನಡುವಿನ ಮನಸ್ತಾಪ, ಆ ಕುಟುಂಬದೊಳಗಿನ ಒಡಕು, ಇವನ್ನೆಲ್ಲಾ, ಏನೂ ಅರಿಯದ ಸಭಿಕರ ಮುಂದೆ ಬಹಿರಂಗಗೊಳಿಸಿ, ಶೋಕಗ್ರಸ್ತ ಕುಟುಂಬದ ಸದಸ್ಯರಿಗೆ ಕಸಿವಿಸಿ ಉಂಟುಮಾಡಿಹೋದರೆ ಹೇಗಾದೀತು?

ನಾವು ಮಾತನಾಡುವಾಗ, ನಮ್ಮ ಮಾತಿನುದ್ದಕ್ಕೂ, ನಾವು ಆರಿಸಿಕೊಂಡಿರುವ ವಿಷಯಕ್ಕೆ ಬದ್ಧರಾಗಿ ಉಳಿದುಕೊಳ್ಳಬೇಕಾದ ಆವಶ್ಯಕತೆ ತುಂಬಾ ಇದೆ. ಭಾಷಣಕಾರರಾಗಿ ನಾವು  ಕೇಳುಗರಿಗೆ ಪ್ರಿಯನಾಗುವುದು, ನಮ್ಮ ವಾಕ್ಚಾತುರ್ಯ, ಸಮಯ ಪ್ರಜ್ಞೆ ಹಾಗೂ ಮಾತನಾಡುವ ಶೈಲಿಯಿಂದಾಗಿ. ಕೆಲವರು ಮಾತು ಆರಂಭಿಸಿ ನಿಮಿಷ ಕಳೆಯುವುದರಲ್ಲೇ ಸಭಿಕರನ್ನು ನಿದ್ರಾಲೋಕಕ್ಕೆ ಒಯ್ದಿರುತ್ತಾರೆ. ಇನ್ನು ಕೆಲವರು ತಮ್ಮ ಭಾಷಣದುದ್ದಕ್ಕೂ ಸಭಿಕರನ್ನು ಎಚ್ಚರವಾಗಿ ತಮ್ಮೊಂದಿಗೇ ಇರಿಸಿಕೊಂಡು ಹೋಗುತ್ತಾರೆ. ಬರಹಗಳು ಹೇಗೆ ತಮ್ಮ ಒಟ್ಟಂದದಿಂದಾಗಿ ಓದುಗರನ್ನು ಆರಂಭದಿಂದ ಕೊನೆಯವರೆಗೆ  ಓದಿಸಿಕೊಂಡು ಹೋಗಬೇಕೋ,  ಹಾಗೆಯೇ ಮಾತುಗಳೂ ಕೂಡ ಇರಬೇಕು, ಕೇಳುಗರಿಗೆ ಕಿಂಚಿತ್ತೂ ಕಿರಿಕಿರಿ ಉಂಟುಮಾಡದೇ, ಅವರಲ್ಲಿ ಆಸಕ್ತಿ ಮೂಡಿಸುತ್ತಾ, ಜಾಗ್ರತವಾಗಿರಿಸಿಕೊಂಡು ಸಾಗಬೇಕು. ಕೆಲವೊಮ್ಮೆ ಭಾಷಣಕಾರನ ಮಾತಿನ ಶೈಲಿಯೇ ಸಭಿಕರನ್ನು ಆಕರ್ಷಿಸುತ್ತದೆ. ಕೆಲವೊಮ್ಮೆ ಆ ಶೈಲಿ, ವಿಷಯ ಗಾಂಭೀರ್ಯದ ಕೊರತೆಯನ್ನೂ ಮುಚ್ಚಿಹಾಕುವಲ್ಲಿ ಸಹಕಾರಿಯಾಗಬಹುದು. ಆದರೆ, ಶೈಲಿಯನ್ನೇ ಬಂಡವಾಳ ಮಾಡಿಕೊಂಡು, ತನಗೆ ಸಿಕ್ಕ ಅವಕಾಶಗಳನ್ನೆಲ್ಲಾ ತನ್ನ ಬೇಳೆ ಬೇಯಿಸಿಕೊಳ್ಳುವ ಕಾಯಕಕ್ಕೆ ಯಥಾವತ್ತಾಗಿ ಬಳಸಿಕೊಳ್ಳಲು ಮುಂದಾದರೆ ಆಪತ್ತು ತಪ್ಪಿದ್ದಲ್ಲ.

ತಮ್ಮ ವಾಕ್ಚಾತುರ್ಯದಿಂದ ಸಭಿಕರನ್ನು ಮಂತ್ರಮುಗ್ಧರನ್ನಾಗಿಸುವ ಕಲೆಯನ್ನು ಹೊಂದಿದ್ದ ರಾಜಕೀಯ ನಾಯಕರುಗಳಲ್ಲಿ,  ಮಾಜೀ ಪ್ರಧಾನ ಮಂತ್ರಿಗಳಾದ ಜವಹಾರ ಲಾಲ ನೆಹರೂ, ಶ್ರೀಮತಿ ಇಂದಿರಾಗಾಂಧಿ, ಅಟಲ ಬಿಹಾರಿ ವಾಜಪೇಯಿಯವರೊಂದಿಗೆ, ದಿ. ಪ್ರಮೋದ ಮಹಾಜನ್, ಲಾಲ್ ಕೃಷ್ಣ ಆಡ್ವಾಣಿ ಹಾಗೂ ಜಾರ್ಜ್ ಫೆರ್ನಾಂಡೀಸ್ ಇವರು ಪ್ರಮುಖರು. ನೆಹರೂರನ್ನುಳಿದು ಅನ್ಯರ ಭಾಷಣಗಳಿಗೆ ನಾನೂ ಕಿವಿಯಾಗಿದ್ದೆ. ಅವರ ವಾಕ್ಚಾತುರ್ಯಕ್ಕೆ ಮಾರುಹೋಗದವರಿಲ್ಲ ಎನ್ನುವ ಮಾತನ್ನು ಪಕ್ಷಭೇದ ಮರೆತು ಎಲ್ಲರೂ ಒಪ್ಪಿಕೊಳ್ಳಬಹುದೆಂದು ನನ್ನ ಅನಿಸಿಕೆ. ಈಗ ಅಂತಹ ವಾಕ್ಪಟುಗಳೇ ಇಲ್ಲ ಅನ್ನುವುದು ಬೇಸರದ ವಿಷಯ.

ಮಾತುಗಾರಿಕೆಗೆ ಪೂರಕವಾಗುವ ಇನ್ನೊಂದು ಪ್ರಮುಖ ಅಂಶ ಹಾಸ್ಯಪ್ರಜ್ಞೆ. ಹಾಸ್ಯದ ಮೋಡಿಗೆ ಮರುಳಾಗದವರು ಇಲ್ಲ ಎನ್ನುವಷ್ಟು ವಿರಳ. ಏಕೆಂದರೆ ನಗುವುದನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ.  ಹಾಸ್ಯ ಪ್ರಜ್ಞೆ ಇರುವ ಭಾಷಣಕಾರನಿಗೆ ಸಭಿಕರನ್ನು ತನ್ನೊಂದಿಗೇ ಇರಿಸಿಕೊಳ್ಳಲು ಕಷ್ಟವಾಗುವುದೇ ಇಲ್ಲ. ಆದರೆ ಹಾಸ್ಯವೂ ಕೂಡ ಆರೋಗ್ಯಕರವಾಗಿ ಇರಬೇಕಾದುದು ಅತಿ ಮುಖ್ಯ.

ಮಾತನಾಡುವಾಗ ನಮ್ಮ ಹಾವಭಾವಗಳ ಬಗ್ಗೆಯೂ ಕಾಳಜಿ ವಹಿಸುತ್ತಿರಬೇಕು. ನಮ್ಮ ಮುಖದ ಭಾವ ಮತ್ತು ಕೈಗಳ ಚಲನೆಗಳು ಅನಾವಶ್ಯಕವೆಂದು ಕಂಡು ಬರಬಾರದು. ಇವು ನಮ್ಮ ಮಾತುಗಳಿಗೆ ಪೂರಕವಾಗಿದ್ದಲ್ಲಿ ಮಾತ್ರ ಸ್ವೀಕಾರಾರ್ಹವಾಗುತ್ತವೆ. ಹಾಗಿಲ್ಲವಾದಲ್ಲಿ ಸಭಿಕರಿಗೆ ಕಿರಿಕಿರಿ ಉಂಟಾಗಬಹುದು. ವಿಷಯವನ್ನು ಬಿಟ್ಟು ನಮ್ಮ ಹಾವಭಾವಗಳ ಮೇಲಿನ ಗಮನವೇ ಜಾಸ್ತಿಯಾಗಬಹುದು.

ಮಾತನಾಡುವಾಗ, ಪದೇ ಪದೇ ಅನಾವಶ್ಯಕ ಪದಗಳನ್ನು ಬಳಸುವ ಅಭ್ಯಾಸವೂ ಕೆಲವರಿಗಿದೆ. ಹೆಚ್ಚಿನ ರಾಜಕೀಯ ನಾಯಕರುಗಳು ಹಾಗೂ ವಾರ್ತಾ ವರದಿಗಾರರು ಬಳಸುವ “ತಕ್ಕಂಥ”, “ಒಂದು, ”ಎಲ್ಲೋ ಒಂದು ಕಡೆ” , “ಒಂದು ಕೆಲಸ ಮಾಡಿ” ಅಥವಾ “ಏನಪ್ಪಾ ಅಂತಂದ್ರೆ” ಇಂಥ ಪದಗಳು ಕೇಳುಗರಿಗೆ ತುಂಬಾ ಕಿರಿಕಿರಿ ಉಂಟುಮಾಡುತ್ತವೆ. ಆಂಗ್ಲದಲ್ಲಿ ಮಾತನಾಡುವವರು ಕೂಡ, “ಯೂ ನೋ”, “ಐ ಮೀನ್” ಹಾಗೂ “ಲೈಕ್” ಅನ್ನುವ ಪದಗಳನ್ನು ಅನಾವಶ್ಯಕವಾಗಿ ಬಳಸುವುದನ್ನು ನಾವು ಕೇಳಿರುತ್ತೇವೆ.  ನಮ್ಮಲ್ಲಿನ ಪದ ಭಂಡಾರದಿಂದ, ಸೂಕ್ತ ಸಮಯದಲ್ಲಿ, ಸೂಕ್ತ ಪದಗಳನ್ನು ಆರಿಸಿಕೊಳ್ಳಲು ನಾವು ವಿಫಲರಾದಾಗ, ಖಾಲಿ ಜಾಗವನ್ನು ತುಂಬಲು ಇಂಥ ಪದಗಳನ್ನು ಬಳಸುತ್ತೇವೆ. ಇದನ್ನು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಮಾಡಿಕೊಂಡಾಗ ನಮ್ಮ ಮಾತುಗಳಿಗೆ ಸಿಗುವ ಬೆಲೆ ಜಾಸ್ತಿಯಾಗುತ್ತದೆ.

ನಾವು ಮಾತನಾಡುವಾಗ ನಮ್ಮ ಸ್ವರದಲ್ಲಿನ ಏರಿಳಿತಗಳು ನಮ್ಮ ಮಾತುಗಳಲ್ಲಿನ ಭಾವಕ್ಕೆ ಅನುಗುಣವಾಗಿರಬೇಕು. ಅನಾವಶ್ಯಕವಾಗಿ ಉಚ್ಛ ಸ್ವರದಲ್ಲಿ ಮಾತನಾಡುವುದಾಗಲೀ ಅಥವಾ ತೀರ ಕೆಳಸ್ತರದಲ್ಲಿ ಮಾತನಾಡುವುದಾಗಲೀ, ನಮ್ಮ ಮಾತುಗಾರಿಕೆಗೆ ಪೂರಕವಾಗುವುದಿಲ್ಲ.

ನಾವು ಸ್ವತಃ ಕೇಳುಗರ ಮುಂದೆ ಇಲ್ಲದಾಗಲೂ ನಮ್ಮ ಮಾತುಗಳಿಂದ ಕೇಳುಗರನ್ನು ಕಟ್ಟಿಹಾಕುವ ಶಕ್ತಿ ನಮ್ಮಲ್ಲಿರಬೇಕು. ಆಕಾಶವಾಣಿಯ ಉದ್ಘೋಷಕರಾಗಲೀ, ವಾರ್ತಾ ಓದುಗರಾಗಲೀ ನಮಗೆ ಇಷ್ಟವಾಗುವುದು ಅವರ ಸ್ವರಗಳಲ್ಲಿ ಕಂಡುಬರುವ, ಮಾತುಗಳಿಗೆ ಪೂರಕವಾಗುವ ಏರಿಳಿತಗಳಿಂದಾಗಿ. ದೆಹಲಿ ಅಕಾಶವಾಣಿಯಲ್ಲಿ ಬಹಳ ಹಿಂದೆ ಕನ್ನಡ ವಾರ್ತೆ ಓದುತ್ತಿದ್ದ ರಂಗರಾವ್, ಉಪೇಂದ್ರ ರಾವ್ ಹಾಗೂ ಸುಧಾ ದಾಸ್, ಆಂಗ್ಲ ವಾರ್ತೆ ಓದುತ್ತಿದ್ದ ಬರುಣ್ ಹಾಲ್ದಾರ್, ವಿಜಯ್ ಡೇನಿಯಲ್ಸ್ ಹಾಗೂ ರಿಣಿ ಖನ್ನ, ಹಿಂದೀ ವಾರ್ತೆ ಓದುತ್ತಿದ್ದ ದೇವಕಿ ನಂದನ್ ಪಾಂಡೆ ಹಾಗೂ  ಸಂಸ್ಕೃತ ವಾರ್ತೆ ಓದುತಿದ್ದ ಬಲದೇವಾನಂದ ಸಾಗರ ಇವರೆಲ್ಲಾ ನಮ್ಮ ನೆನಪಿನಲ್ಲಿ ಇಂದಿಗೂ ಉಳಿದಿದ್ದಾರಾದರೆ, ಅದು ಅವರ ಓದುವಿಕೆಯ ಶೈಲಿಯಿಂದಾಗಿ ಅಷ್ಟೇ. ವಿಷಯಕ್ಕೆ ಪೂರಕವಾದ ಸ್ಪಷ್ಟ ಉಚ್ಛಾರ ಮತ್ತು ಸ್ವರಗಳಲ್ಲಿನ ಏರಿಳಿತಗಳೊಂದಿಗೆ, ಅವರೆಲ್ಲಾ, ಇಂದಿಗೂ ನಮ್ಮ ಕಿವಿಯೊಳಗೆ ಮಾರ್ದನಿ ಮೂಡಿಸುತ್ತಿರುತ್ತಾರೆ.  ದೂರದರ್ಶನ ಬಂದ ನಂತರ ಆಕಾಶವಾಣಿಯಲ್ಲಿ ಸುದ್ದಿಗಳು ಬಿತ್ತರವಾಗುತ್ತಿವೆಯಾದರೂ, ಅವುಗಳನ್ನು ಕೇಳುವ ಆಸಕ್ತಿ ನಮ್ಮಲ್ಲಿ ಉಳಿದಿಲ್ಲ.

ನಮ್ಮ  ಮಾತುಗಳು  ಕೇಳುಗರ ನೆನಪಿನಲ್ಲಿ ಸದಾ ಉಳಿಯುವಂತಿರಬೇಕು, ಅಲ್ಲವೇ? ಹಾಗಾದರೆ,  ನನ್ನೀ ಮಾತುಗಳೂ ತಮ್ಮ ನೆನಪಿನಲ್ಲಿ ಸದಾ ಉಳಿಯಬಹುದೇ?

*****************


ಮಾನ್ಯ ಮುಖ್ಯಮಂತ್ರಿಗಳಿಗೊಂದು ಕಿವಿಮಾತು!

14 ಆಕ್ಟೋ 10

 

ಯುದ್ಧ ಮುಗಿದಿದೆ ನಿಮ್ಮ ಶಸ್ತ್ರಗಳನ್ನು ಶಸ್ತ್ರಾಗಾರದಲ್ಲಿಡಿ ಸದ್ಯ
ನೀವು ಅದಾಗಲೇ ಬಂದಾಗಿದೆ ನಿಮ್ಮ ಪೂರ್ಣ ಅವಧಿಯ ಮಧ್ಯ

ಬೇಸತ್ತಿದ್ದಾರೆ ಈ ನಾಡಿನ ಜನರೆಲ್ಲಾ ಇನ್ನು ತಾಳ್ಮೆ ಉಳಿದಿಲ್ಲ
ನಾಡಿಗೆ ಒಳಿತು ಮಾಡದಿದ್ದರೆ ಮುಂದಿನ ಬಾರಿ ಗೆಲ್ಲಿಸುವುದಿಲ್ಲ

ವಿಧಾನಸೌಧದ ಗೋಡೆಯಲಿ ಬರೆದಿರುವುದ ಎಲ್ಲರೂ ಪಾಲಿಸಲಿ
ಮಂತ್ರಿಗಳಿಗೆ ತಾಕೀತು ಮಾಡಿ, ಕೆಲಸ ಮಾಡಿಯೇ ತೋರಿಸಲಿ

ಸರಕಾರದ ಕೆಲಸ ದೇವರ ಕೆಲಸ ಎಂಬುದು ಗೋಡೆಗಷ್ಟೇ ಅಲ್ಲ
ನೀವೂ ಮಾಡಿ ತೋರಿಸಿದರೆ ನಿಮ್ಮನ್ನೂ ಜನತೆ ಕೈಬಿಡುವುದಿಲ್ಲ

ದಿನ ಪ್ರತಿದಿನ ಸುದ್ದಿಗೋಷ್ಟಿ ಮಾಡಿ ಭಾಷಣ ಬಿಗಿಯಬೇಕಾಗಿಲ್ಲ
ಸರಕಾರದ ಕಾರ್ಯಗಳೇ ತಮ್ಮ ಪರವಾಗಿ ಮಾತಾಡಬೇಕಲ್ಲಾ

ಮಾಧ್ಯಮದ ಜೊತೆ ಮಾತಾಡಲು ಯಾರಾದರೊಬ್ಬರನ್ನು ನೇಮಿಸಿ
ಎಲ್ಲಾ ಟೀಕೆ ಟಿಪ್ಪಣಿಗಳಿಗೂ ಪ್ರತಿಕ್ರಿಯಿಸುವುದನ್ನು ದಯವಿಟ್ಟು ನಿಲ್ಲಿಸಿ

ಆಂತರಿಕ ಸಮಸ್ಯೆಗಳನೆಲ್ಲಾ ಪರಿಹರಿಸಿಕೊಳ್ಳಿ ತಮ್ಮ ತಮ್ಮೊಳಗೇ
ದೌರ್ಬಲ್ಯವ ಬಿಟ್ಟುಕೊಟ್ಟರೆ ಎಲ್ಲಾ ಕನ್ನ ಹಾಕುವರು ನಿಮ್ಮ ಮನೆಗೆ

ಬಾಯ್ಮುಚ್ಚಿಕೊಂಡು ಕೆಲಸ ಮಾಡಿದರೆ ಕಮಲ ಮುದುಡದು ಇಲ್ಲಿ
ಇಲ್ಲವಾದರೆ ಭಾಜಪ ಕೂರಬೇಕಾದೀತು ವಿರೋಧಿ ಬೆಂಚುಗಳಲ್ಲಿ
******


ಹಿಂದೀ ಪಕ್ಷಾಚರಣೆಯಿಂದ ಕನ್ನಡಕ್ಕಿಲ್ಲ ಅಪಾಯ!!!

18 ಸೆಪ್ಟೆಂ 09

ಹಿಂದೀ ಪಕ್ಷಾಚರಣೆಯಿಂದ ಕನ್ನಡಕ್ಕೆ ಆಗದು ಏನೂ ಅಪಾಯ

ಕನ್ನಡವನ್ನು ಇಲ್ಲಿ ಬೆಳೆಸುವುದಕ್ಕೆ ಬೇಕಾಗಿದೆ ಹೊಸ ಉಪಾಯ

 

ಅನ್ಯರನು ದ್ವೇಷಿಸಿದರೆ ನಮ್ಮವರಿಗೆ ಆಗದು ಹೆಚ್ಚೇನೂ ಲಾಭ

ಹೆಚ್ಚು ಭಾಷೆಗಳ ಕಲಿತರೆ ಆಗದೇ ಇರಲಾರದು ನಮಗೆ ಲಾಭ

 

ಕೇಂದ್ರ ಸರಕಾರ ಹಿಂದಿಯನ್ನು ಹೇರುತಿದೆ ಎನ್ನುತಿರುವಂತೆ

ರಾಜ್ಯ ಸರ್ಕಾರವೂ ಕನ್ನಡ ಭಾಷೆಯನಿಲ್ಲಿ ಹೇರಿದರೆ ಏನಂತೆ

 

ಹೇರಿಕೆಯಿಂದಲೇ ಭಾಷೆಯನು ಜನರು ಬಳಸುವರೆಂದಾದರೆ

ಕನ್ನಡ ಹೇರಿಕೆಯ ಆದೇಶ ಹೊರಡಿಸಿದರೆ ಏನಿದೆ ತೊಂದರೆ

 

ವಿಧಾನ ಸಭೆಯಲಿ ಇರುವಂತೆ ಸರ್ಕಾರದ ಆ ಮುಖ್ಯಮಂತ್ರಿ

ಕನ್ನಡ ಪ್ರಾಧಿಕಾರದಲೂ ನಮಗೆ ಇದ್ದಾರೆ ಈ ಮುಖ್ಯಮಂತ್ರಿ

 

ಇಬ್ಬರು ಮುಖ್ಯಮಂತ್ರಿಗಳಿದ್ದೂ ಆಗದೇ ಇದ್ದರೆ ಭಾಷೆಯ ಏಳಿಗೆ

ತಿಳಿಯಿರಿ ಭಾಷೆಯ ಹೆಸರಲ್ಲಿ ತುಂಬಿಸಿಕೊಳ್ಳುತ್ತಿದ್ದಾರೆ ಜೋಳಿಗೆ

 

ಮನಮಾಡಬೇಕಿಲ್ಲ ವೇದಿಕೆಗಳನೇರಿ ಭಾಷಷಣ ಬಿಗಿಯುವತ್ತ

ಮನೆಮನೆಯಲ್ಲೂ ಕನ್ನಡದ ದೀಪ ಹಚ್ಚಲು ಇರಲಿ ನಮ್ಮ ಚಿತ್ತ