ಸಖೀ, ನಾನು ಮೌನಿಯಾಗಿರುವೆ!

13 ಆಗಸ್ಟ್ 10

ಸಖೀ,

ನೀನು,

ನಾನಾಡುವ

ಮಾತುಗಳನ್ನು

ಅರಿಯಳಾದೆಯಾದರೆ,

ನಾನು

ಮೌನಿಯಾಗಿರುವೆ;

 

ನಾನು

ಮಾತನಾಡದೇ,

ನನ್ನ ಮನದ

ಭಾವನೆಗಳನ್ನು,

ನೀನು

ಅರಿವೆಯಾದರೂ,

ನಾನು

ಮೌನಿಯಾಗಿರುವೆ!

***********

 


ಸಂಗಾತಿ!

22 ಜೂನ್ 10

 

ಸಖೀ

 

ನನ್ನ ಈ

ಒಂಟಿ ಜೀವನದಲ್ಲಿ

ನನ್ನ ಜೊತೆಯಾಗಿರುವ

 

ನನ್ನನ್ನು ನನ್ನ ಮನಸ್ಸನ್ನು

ನನಗಿಂತ ಚೆನ್ನಾಗಿ ಅರಿತಿರುವ

 

ನಾನು ಬಾಯ್ಬಿಡುವ ಮೊದಲೇ

ನನ್ನ ಮನದಲ್ಲಿದ್ದದ್ದನ್ನೆಲ್ಲಾ

ಹೊರ ಹೊಮ್ಮಿಸುವ

 

ನನ್ನ ಮತ್ತು ಈ ಪ್ರಪಂಚದ

ನಡುವೆ ದೂತನಂತಿರುವ

 

ನನ್ನ ಎಂದೆಂದಿನ

ನಲ್ಮೆಯ ಸಂಗಾತಿ

ನನ್ನ ಈ ಒಂದೂವರೆ

ರೂಪಾಯಿಯ ಲೇಖನಿ!

*-*-*-*-*-*-*

(ಕೀಲಿಮಣೆಯ ಸಹಾಯದಿಂದ ಕವನ ಬರೆಯಲು ಆರಂಭಿಸುವುದಕ್ಕೆ ಮೊದಲು, ಅಂದರೆ ೬ ದಶಂಬರ ೧೯೮೪ರಂದು ಬರೆದ ಕವನ ಇದು)


ವಾಸ್ತವ!

06 ಮೇ 10

 

ಸಖೀ

ಏಕಾಂತದಲ್ಲಿದ್ದಾಗ

ನಮ್ಮ ಮನದಲೇಳುವ

ಭಾವನೆಗಳ ಅಲೆಗಳನು

ಸ್ವತಂತ್ರವಾಗಿರಲು

ಬಿಟ್ಟುಬಿಡೋಣ

ಗರಿಗೆದರಿ ಹಾರಲಿಚ್ಚಿಸುವ

ಬಯಕೆಗಳ ಹಕ್ಕಿಗಳನು

ನಮ್ಮ ಕಲ್ಪನೆಯ ಆಗಸದಲಿ

ಹಾರಬಿಡೋಣ

 

ನಿಜಕ್ಕೂ ಅದರಿಂದೊಂದು

ತೆರನಾದ ಆನಂದವಾಗುತ್ತದೆ

ಯಾವುದೇ ಭಯಾತಂಕಗಳಿಲ್ಲದೇ

ಸ್ವಚ್ಚಂದವಾಗಿ, ಎಲ್ಲೆ ಮೀರಿ

ಸುತ್ತಿ ಬರುವ ಆ ಹಕ್ಕಿಗಳು

ನಮ್ಮ ಮನಕೆ ಮುದ ನೀಡುತ್ತವೆ

 

ನಮ್ಮದೇ ಕಲ್ಪನಾ ಲೋಕ

ನಮಗಿಷ್ಟವಾದ ಜನರೇ

ಅಲ್ಲಿ, ನಮ್ಮ ಸುತ್ತ ಮುತ್ತ

ಅಲ್ಲಿ ಕೇಳಿ ಬರುತ್ತವೆ

ನಮಗಿಷ್ಟವಾದ

ಮಾತುಗಳೇ ಅತ್ತ – ಇತ್ತ

 

ಒಂದೆಡೆ ವಿರಹದ

ನೋವಿದ್ದರೂ ಆಗ

ಅದೆಂತಹ ಆನಂದ

ಆದರೆ ಮಿಲನದಲಿ

ನಮಗೆ ಬರೇ

ಭಯ – ಆತಂಕಗಳಲ್ಲದೇ

ಎಲ್ಲಿದೆ ಆನಂದ?

 

ಮುಖಾಮುಖಿಯಾದಾಗ

ಒಬ್ಬರನ್ನೊಬ್ಬರು ಮನಸಾರೆ

ನೋಡಲಿಚ್ಚಿಸುವ ಕಣ್ಣುಗಳಿಗೆ

ಸದಾ ಇರುತ್ತದೆ ಈ ಸಮಾಜದ

ಹದ್ದು ಕಣ್ಣುಗಳ ಭಯ

ಮನಬಿಚ್ಚಿ ಮಾತನಾಡಲು

ಇಚ್ಚಿಸುವ ನಮ್ಮ

ನಾಲಿಗೆಗಳಿಗೆ, ಕಿವಿಗಳಾಗಿ,

ನಮ್ಮ ಮಾತುಗಳನಾಲಿಸುವ

ಸುತ್ತಲಿನ ಗೋಡೆಗಳ ಭಯ

 

ನಿಜ ನುಡಿಯಲೇ ಸಖೀ

ಇದೇ ವಾಸ್ತವ

ಇದೇ ನಿತ್ಯ ಸತ್ಯ

ಇಂದೂ – ಮುಂದೆಂದೂ!

**************