ಭರತನ ಸ್ಥಿತಿಯೇ ಭಾರತದ ದುಸ್ಥಿತಿ!

18 ಆಗಸ್ಟ್ 10


ಭಾರತದ
ಸ್ವಾತಂತ್ರ್ಯ,
ಈ ರಾಜಕೀಯ
ನೇತಾರರ
ಕೈಯಲ್ಲಿ ಸೋತು
ಬಳಲುತ್ತಿದೆ,
ಅಂದ್ರೆ
ಸಾಕ್ಷಿ ಕೇಳ್ತೀರಲ್ಲಾ?

ಮೊನ್ನೆ
ಸ್ವಾತಂತ್ರ್ಯೋತ್ಸವದ
ದಿನದಂದು,
ಆ ಮಂತ್ರಿ
ಬಚ್ಚೇಗೌಡರ
ಕೈಯಲ್ಲಿ,
ಸಿಲುಕಿದ
ನಮ್ಮ
ಭರತನ,
ವ್ಯಕ್ತಿ ಸ್ವಾತಂತ್ರ್ಯ
ಇನ್ನೂ
ಬಳಲುತ್ತಿದೆಯಲ್ಲಾ?!

ಮಂತ್ರಿಯ
ಕಾರನ್ನು
ಬಳಸಿ
ಮುಂದೆ ಹೋದುದೇ
ಮಹಾಪರಾಧವಾಯ್ತೇ?

ಮಂತ್ರಿಗಳು
ಜನಸೇವಕರೆಂಬ
ಮಾತು,
ಬರಿಯ
ಮಾತಾಯ್ತೇ?

ನಮಗೆ
ಇದಕ್ಕಿಂತ
ಹೆಚ್ಚಿಗೆ
ಸಾಕ್ಷಿ
ಬೇರೇನು
ಬೇಕು?

ನಮ್ಮ ಭಾರತ
ಮಾತೆಯನ್ನು
ಗೋಳು
ಹೊಯ್ದುಕೊಳ್ಳುತ್ತಿರುವವರು
ಯಾರೆಂಬ
ಪ್ರಶ್ನೆಗೆ
ಉತ್ತರ
ಬೇರೆಲ್ಲಿ
ಹುಡುಕಬೇಕು?

ಆ ಭರತನ
ನಾಡೇ
ಭಾರತವಾಯ್ತು,
ಈ ಭರತನ
ಸ್ಥಿತಿಯೇ
ಭಾರತದ
ದುಸ್ಥಿತಿ ಎಂಬ
ಅರಿವಾಯ್ತು!
******


ಅಮ್ಮಾ, ನೀವೆನಗೆ ಮಾತೆ ಕೌಸಲ್ಯೆಯಂತೆ!

30 ಜುಲೈ 10

 

ಅಮ್ಮಾ, ನಾನು ಶ್ರೀರಾಮನಂಥ ಮಗನಲ್ಲದೇ ಇರಬಹುದು

ಆದರೆ ನೀವು ನನಗೆ ನಿಜವಾಗಿ ಆ ಮಾತೆ ಕೌಸಲ್ಯೆಯಂತೆ

 

ದೂರದಲ್ಲಿರುವಿಬ್ಬರು ನನಗೆ ಲಕ್ಷ್ಮಣ-ಶತ್ರುಘ್ನರಲ್ಲದಿರಬಹುದು

ಕೊನೆಯ ಸಹೋದರ ನನಗೆ ನಿಜವಾಗಿಯೂ ಆ ಭರತನಂತೆ

 

ನನ್ನ ವನವಾಸ ಇನ್ನೂ ಮುಗಿದಿಲ್ಲ ನಾನಿನ್ನೂ ನಿಮ್ಮಿಂದ ದೂರ

ಅದರಿಂದಾಗಿ ಆತನೇ ಹೊತ್ತಿದ್ದಾನೆ ನನ್ನ ಜವಾಬ್ದಾರಿಗಳ ಭಾರ

 

ನಿಮ್ಮ ಸೇವೆಯ ಭಾಗ್ಯವಿಲ್ಲವಲ್ಲ ಅನ್ನುವುದೇ ಈ ಮನದಿ ಪಿಡುಗು

ಆತನ ಮೇಲಿನ ನಂಬಿಕೆಯಿಂದ ಕಡಿಮೆ ಆಗುವುದೆನ್ನ ಕೊರಗು

 

ನೀವು ಅಲ್ಲಿ ನಗು ನಗುತ್ತಾ ಬಾಳುತ್ತಿದ್ದರೆ ನನಗೂ ನೆಮ್ಮದಿ ಇಲ್ಲಿ

ನೀವೇ ಮನ ನೋಯಿಸಿಕೊಳ್ಳುತ್ತಿದ್ದರೆ ಏನಿದೆ ನನ್ನೀ ಬಾಳಲ್ಲಿ?

 

ರಾಮನಿಗಷ್ಟೇ ಅಲ್ಲ ಭರತನಿಗೂ ನೀವಿರಬೇಕು ಕೌಸಲ್ಯೆಯಾಗಿ

ಬಿರುಕು ಮೂಡಿಸದಿರಿ ಸಹೋದರರ ಮನದಲ್ಲಿ ಕೈಕೇಯಿಯಾಗಿ

 

ದೂರದಲಿ ಕೂತವರು ಕರೆ ಮಾಡಿ ನಿಮ್ಮ ಮನ ಮೆಚ್ಚಿಸಬಹುದು

ಅಲ್ಲಿ ಜೊತೆಯಲ್ಲಿರುವವರಿಗೆ ಜವಾಬ್ದಾರಿಯ ಎಚ್ಚರ ಸದಾ ಇಹುದು

 

ಆಡಿ ಮರೆತುಬಿಡೋ ಮಾತುಕತೆಗಳಿಗಿಂತ ಭಾವನೆಗಳೇ ಮುಖ್ಯ

ಭಾವನೆಗಳೇ ಅರ್ಥ ಆಗದಿದ್ದರೆ ಅಪ್ರಯೋಜಕ ಯಾವುದೇ ಸಖ್ಯ

****************