ತೆರಳಿಬಿಡು ನನ್ನ ನೆನಪಿಂದ ನೀನು!

03 ಜೂನ್ 10

 

ನೀ ನನ್ನ ಬಾಳಿನಲ್ಲಿ

ನೆನಪಾಗೇ ಉಳಿದು ಹೋದೆ

ನೀನಿರದ ಬಾಳು ನಾನು

ನಿನ್ನ ನೆನಪಿನಲ್ಲೇ ಕಳೆದೆ

 

ಆ ದೇವರಂತೆ ಕಂಡೆ

ನನ್ನ ಪಾಲಿಗಾಗ ನೀನು

ನನ್ನ ಪ್ರೀತಿ ಭಕ್ತಿಯಂತೆ

ನಿನ್ನ ಪೂಜಿಸಿದ್ದೆ ನಾನು

 

ನೀ ನನ್ನ ಅರಿಯಲಿಲ್ಲಾ

ನಾ ನಿನ್ನ ಮರೆಯಲಿಲ್ಲಾ

 

||ನೀ ನನ್ನ ಬಾಳಿನಲ್ಲಿ||

 

ಬರಲಾರೆ ನೀನು ಮರಳಿ

ಈ ಸತ್ಯ ನನಗೆ ಗೊತ್ತು

ಸರಿ ಒಮ್ಮೆ ತೆರಳು ನನ್ನ

ನೆನಪಿಂದ ನೀ ಈ ಹೊತ್ತು

 

ನಾ ನಿನ್ನ ಪಡೆಯಲಾರೆ

ನಾ ನಿನ್ನ ಕರೆಯಲಾರೆ

 

||ನೀ ನನ್ನ ಬಾಳಿನಲ್ಲಿ||

**************


ಮೆಳ್ಳೆಗಣ್ಗಳ ಓ ನನ್ನ ಗೆಳತೀ!!!

10 ಡಿಸೆ 09

 

“ಗೆಳತೀ ನಿನ್ನಾ ಮೆಳ್ಳೆಗಣ್ಗಳ ಬಗ್ಗೆ ಅರ್ಧ ಕವನ ಬರೆದಿಟ್ಟಿರುತ್ತೇನೆ

ಪೂರ್ತಿ ಆದಾಗ ನಿನಗದನು ತೋರಿಸಿ ಮತ್ತೆ ಅಲ್ಲಿ ಪ್ರಕಟಿಸುತ್ತೇನೆ”

 

ಅರೇ, ನನ್ನನ್ನೇ ಕೇಳದೆ ನನ್ನ ಬಗ್ಗೆ ಅದು ಹೇಗೆ ಬರೆದೆ ನೀನು

ನೀನು ಬರೆದುದನೆಲ್ಲಾ ಕಣ್ಮುಚ್ಚಿಕೊಂಡು ಒಪ್ಪಬೇಕೇನು ನಾನು”

 

“ನಿನ್ನನ್ನು ಕೇಳದೇ ನಿನ್ನ ಮೆಳ್ಳೆಗಣ್ಗಳ ಬಗ್ಗೆ ಬರೆದಿದ್ದರೂ ಗೆಳತೀ

ನಿನ್ನ ಕೇಳಿಯೇ ಅದನು ಪ್ರಕಟಿಸುತ್ತೇನಂದೆನಲ್ಲ ಮಹರಾಯಿತೀ

 

ನಿನ್ನ ಭೇಟಿ ಆಗಬೇಕೆಂಬ ಇಚ್ಛೆ ಆದಾಗಲೆಲ್ಲಾ ನಾನಿನ್ನ ಬೇಡುತ್ತಿದ್ದೆ

ಪ್ರತಿ ಬಾರಿಯೂ ನೀನಾ ಮೆಳ್ಳಗಣ್ಗಳ ನೆಪಹೇಳಿ ಹೆದರಿಸುತಲಿದ್ದೆ”

 

“ಮೆಳ್ಳಗಣ್ಗಳು ನೆಪ ಅಲ್ಲ ಮತ್ತೆ ಆ ಮಾತು ಬರಿದೆ ಹೆದರಿಸಲೂ ಅಲ್ಲ

ನೀನೆಂದಾದರೂ ಭೇಟಿ ಆದಾಗ ನಿನಗೆ ನಿರಾಸೆಯಾಗಬಾರದಲ್ಲಾ

 

ಕಣ್ಗಳ ವಾಸ್ತವ ನಿನಗೆ ಗೊತ್ತಿರಲೆಂಬುದಷ್ಟೇ ನನ್ನೀ ಮನದ ಇಚ್ಛೆ

ನನ್ನನ್ನು ಭೇಟಿ ಆಗಲೇ ಬೇಕೆಂದು ನೀ ಹಿಡಿಯದಿರು ಹೀಗೆ ರಚ್ಚೆ”

 

“ನಿನ್ನನ್ನು ನಾ ಭೇಟಿ ಆದಾಗ ನನಗಾವ ನಿರೀಕ್ಷೆಯೂ ಇದ್ದಿರುವುದಿಲ್ಲ

ನಿರೀಕ್ಷೆಯೇ ಇಲ್ಲದಿದ್ದಲ್ಲಿ ನಿರಾಸೆಯ ಮಾತೂ ಅಲ್ಲಿ ಉಳಿದಿರುವುದಿಲ್ಲ

 

ನಿನ್ನ ನಿರ್ಮಲ ಸ್ನೇಹದ ಆಕಾಂಕ್ಷಿ ನಾನು ಬೇರೇನೂ ಬಯಸುವವನಲ್ಲ

ಭೇಟಿ ಆಗುವ ಇಚ್ಛೆ ಇದೆ ಸುಳ್ಳೇಕೆ ನಾನದನು ಮುಚ್ಚಿಡ ಬಯಸುವುದಿಲ್ಲ

 

ಭೇಟಿ ಆಗಲೇ ಬೇಕೆಂದೇನೂ ಇಲ್ಲ ಅದ ಒಪ್ಪುವುದು ಬಿಡುವುದು ನಿನ್ನಿಚ್ಛೆ

ದೇವರಲಿ ಭಕ್ತ ಬೇಡುವನು ವರ ನೀಡುವುದು ಬಿಡುವುದು ಅದು ದೈವೇಚ್ಛೆ”

 

“ಭೇಟಿ ಆಗಲೇ ಬೇಕೆಂದಿದ್ದರೆ ನಮ್ಮ ಭೇಟಿ ಆಗಿಯೇ ಆಗುವುದು ಸುಳ್ಳಲ್ಲ”

“ಭೇಟಿಯ ಬೇಡದೇ ಸುಮ್ಮನೆ ಕೂರುವವನು ಈ ನಿನ್ನ ಗೆಳೆಯನೂ ಅಲ್ಲ

 

ಪ್ರೀತಿ ಮತ್ತು ಭಕ್ತಿ ಇವೆರಡೂ ಸಮಾನ ಎಂದು ಭಾವಿಸುವವನು ನಾನು

ಸ್ನೇಹಿತರ ನಡುವೆ ನಿರ್ಮಲ ಪ್ರೀತಿ ಇದೆಯೆಂದು ನಂಬುವವನು ನಾನು”

 

“ಸ್ನೇಹವೆಂದರೇ ಅದು ನಿರ್ಮಲತೆ ಎಂದು ಸದಾ ನಂಬಿದವಳು ನಾನು

ನಿನ್ನಂತೆಯೇ ನಮ್ಮ ಭೇಟಿಗಾಗಿ ನಿಜದಿ ಹಾರೈಸುತ್ತಿರುತ್ತೇನೆ ನಾನೂ”

*********************************************