ಇಂದು ಜಾರಿಗೊಳಿಸಿದಂತಿದೆ ನನಗೆ ಸಜೆ!!!

04 ಜನ 10

 

 

ಸಖೀ,

ಬಾನ ಚಂದಿರನೀ ಬುವಿಯ ಮೇಲೆ ಚೆಲ್ಲುವಂತೆ ಬೆಳದಿಂಗಳು

ಆಕೆ ಬಂದಾಗಲೆಲ್ಲಾ ನಮ್ಮ ಮನ-ಮನೆಯನು ಬೆಳಗಿಸುವಳು

 

ಹುಣ್ಣಿಮೆಗಾಗಿ ನೀವೆಲ್ಲಾ ಕಾಯುವಿರಿ ಒಂದೇ ಒಂದು ತಿಂಗಳು

ಆದರೆ ನಾವು ನಮ್ಮ ಮಗಳಿಗಾಗಿ ಕಾಯಬೇಕಾರು ತಿಂಗಳು

 

ಕಚೇರಿಯಿಂದ ದೊರೆತ ಹತ್ತು ದಿನಗಳ ವರ್ಷಾಂತ್ಯದಾ ರಜೆ

ಕಳೆದಾದ ಮೇಲೆ ಇಂದು ಜಾರಿಗೊಳಿಸಿದಂತಿದೆ ನನಗೆ ಸಜೆ

 

ಹತ್ತು ದಿನಗಳನ್ನು ಕಳೆದೆವು ಹತ್ತು ಕ್ಷಣಗಳಂತೆ ಮಗಳೊಂದಿಗೆ

ನಡುವೆ ಅಗಲಿದರು ನಮ್ಮೆಲ್ಲರ ಮನ ಗೆದ್ದಿದ್ದಿಬ್ಬರು ದೇವರೂರಿಗೆ

 

ಮತ್ತೀಗ ಭಾರವಾದ ಹೃದಯವ ಹೊತ್ತು ಬಂದಿಹೆನು ಕಚೇರಿಗೆ

ಬಾರದಿರಲು ಆಗದು ತಿಂಗಳ ಸಂಬಳ ಬೇಕೇ ಬೇಕಲ್ಲ ಖರ್ಚಿಗೆ

 

ಈ ಯಾಂತ್ರಿಕ ಬಾಳಿನ ಸೂತ್ರ ಇಹುದು ಯಾರದೋ ಕೈಯಲ್ಲಿ

ಆತನು ಆಡಿಸಿದಂತೆ ಏಳು ಬೀಳಿನ ನಡೆ ನಮ್ಮದೀ ಭೂಮಿಯಲ್ಲಿ!!!

******************************************


ಚಂದ್ರ ಅನ್ಯ ಗ್ರಹದ ತೆಕ್ಕೆಗೆ ಸೇರಿಕೊಂಡರೆ…?!

09 ಆಕ್ಟೋ 09

ಬಾಂಬುಗಳಿಂದ ಈ ಭೂಲೋಕದಲ್ಲಾದ

ನಷ್ಟ ಆಗಲೇ ಮಿತಿ ಮೀರಿ ಹೋಗಾಗಿದೆ

ಈಗ ನೋಡಿದರೆ ಬಾಂಬುಗಳ ಸವಾರಿ

ದೂರದ ಚಂದಮಾಮನತ್ತಲೂ ಸಾಗಿದೆ

 

ಆತನನು ಘಾಸಿಗೊಳಿಸಿ ಬಂದು ಇನ್ನಿಲ್ಲಿ

ಆನಂದಿಸಲಾದೀತೇ ಆ ಬೆಳದಿಂಗಳನು

ಇನ್ನು ಉಣಲೊಲ್ಲದ ಮಕ್ಕಳಿಗೆ ಇಲ್ಲಿಂದ

ತೋರಿಸಲಾದೀತೇ ಚಂದಮಾಮನನು

 

ವಾತಾವರಣದಲ್ಲಿನ ಏರುತಿರುವ ಉಷ್ಣಕ್ಕೆ

ಆತನ ಮೈಬೆವತು ಪಸೆ ಕಂಡಿರಬಹುದೇ

ಅದರ ರಹಸ್ಯವನು ಬೇಧಿಸಲು ಆತನನು

ಈ ಪರಿಯಾಗಿ ತಿವಿದು ಹಿಂಸಿಸಬಹುದೇ

 

ಶಾಂತನಾಗೇ ಬೆಳಕಿಂದ ಕಡಲ ಮತ್ತೇರಿಸಿ

ಉಕ್ಕುವ ತೆರೆಗಳನು ಸೃಷ್ಟಿಸಬಲ್ಲ ಚಂದಿರ

ಕೋಪಗೊಂಡನೆಂದರೆ ಇನ್ನು ಭೂಲೋಕದ

ಉದ್ದಗಲಕ್ಕೂ ಸುನಾಮಿ ಅಲೆಗಳದೇ ಅಬ್ಬರ

 

ಚಂದಿರ ಮುನಿಸಿನಿಂದ ಭೂಮಿಯ ಬಿಟ್ಟು

ಅನ್ಯ ಗ್ರಹದ ತೆಕ್ಕೆಗೆ ಸೇರಿಕೊಳ್ಳಬಹುದು

ತಿಂಗಳು ಪೂರ್ತಿ ಅಮವಾಸ್ಯೆ ಆಗಿ ಇಲ್ಲಿ

ರಾತ್ರಿ ಕಳ್ಳರ ಕಾಟ ಹೆಚ್ಚಾಗಲೂಬಹುದು


ಕಿವಿಗಳಿಗೆ ಸಂಗೀತದಂತೆ!!!

25 ಸೆಪ್ಟೆಂ 09

ಸಖೀ,

ನಾ ನಿನ್ನ ಮೊಗವ

ನೆನಸಿಕೊಂಡಾಗ

ಮೈ ಮನದೊಳಗೆ

ಉಕ್ಕುತ್ತದೆ ಪ್ರೀತಿ

 

ನಾ ನಿನ್ನ ಮೊಗವ

ಕಣ್ಣಾರೆ ಕಂಡಾಗ

ಮುದ ನೀಡುವುದು

ನಿನ್ನ ನೋಟದ ರೀತಿ

 

ನನಗೆ ನೀನು

ಕಣ್ಣ ನೋಟದಲೇ

ಓದಿಕೋ ಅಂದೆ

 

ನೀ ನುಡಿಯುವ

ಮೊದಲೇ ಅದೆಲ್ಲವ

ನಾ ಅರಿತುಕೊಂಡೆ

 

ನೀನು ನಕ್ಕರೆ

ಮನದಂಗಳದಲ್ಲಿ

ಬೆಳದಿಂಗಳು

 

ನೀನು ಅತ್ತರೆ

ತುಂಬಿಕೊಳ್ಳುತ್ತವೆ

ನನ್ನೀ ಕಂಗಳು

 

ನೀನು ನುಡಿವ

ನಲ್ನುಡಿ ನನ್ನ

ಕಿವಿಗಳಿಗೆ ಸದಾ

ಸಂಗೀತದಂತೆ

 

ನೀನು ಸಿಡುಕಿನಿಂದ

ನಾಲ್ಕು ನುಡಿದರೆ

ಕಿವಿಗಳಿಗೆ ಕಾದ

ಎಣ್ಣೆ ಸುರಿದಂತೆ!!!