ಸ್ವಾತಂತ್ರ್ಯ!

17 ಜೂನ್ 10

 

ಸಖೀ

ಆಗಸದಲಿ ತೇಲುತಿರುವ

ಚಂದಿರನ ಕಂಡಾಗ

ನಿನಗೇನನಿಸಿತ್ತೋ

ನಾನರಿಯೆ

ಆದರೆ ನನಗನ್ನಿಸಿದ್ದಿಷ್ಟು

 

ಕೋಟಿ ನಕ್ಷತ್ರಗಳ ನಡುವೆ

ಪ್ರಕಾಶಮಾನನಾಗಿ

ನಗುತಿದ್ದರೂ ತನ್ನ

ಪ್ರಭೆಯನ್ನು ಕಳೆದುಕೊಳ್ಳುವ

ಭಯ ಸದಾ ಇದೆ ಆತನಲ್ಲಿ

 

ಯಾರದೋ ಬೆಳಕಿಗೆ

ಕನ್ನಡಿ ಹಿಡಿಯುವ ಆತನಿಗೆ

ತನ್ನ ಸ್ವಂತದ್ದೇನಿಲ್ಲವೆಂಬ

ಕೀಳರಿಮೆಯೂ ಇದೆ

 

ಭೂಮಿಯ ಸುತ್ತ ಸದಾ

ಗಾಣದ ಎತ್ತಿನಂತೆ

ಸುತ್ತುತ್ತಿರುವ ಆತನಲ್ಲಿ

ಸ್ವಾತಂತ್ರ್ಯ ಹೀನತೆಯ

ಕೊರಗೂ ಇದೆ

 

ಅಂತೆಯೇ

ನಮ್ಮ ಬಾಳೂ ಕೂಡ

ಇನ್ನೊಬ್ಬರು ಕಟ್ಟಿಕೊಟ್ಟ

ಬುತ್ತಿಯನು ಹೊತ್ತು

ನಡೆವ ನಮಗೆಲ್ಲಿದೆ

ಸ್ವಾತಂತ್ರ್ಯ?

 

ಸ್ವತಂತ್ರರಾಗಿರಲು

ನಕ್ಷತ್ರಗಳಿಗೆ ಸ್ವಂತ

ಪ್ರಭೆ ಇರುವಂತೆ

ಮನುಜನಿಗೆ ಸ್ವಂತ

ಪ್ರತಿಭೆ ಇರಬೇಕು!

***********