ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ!

23 ಮಾರ್ಚ್ 12

ಒಂದು ಯುಗಾದಿ ಮತ್ತೊಂದು ಯುಗಾದಿಯ ನಡುವೆ ನಿಜಕ್ಕೂ ಹೊಸತಿದೆ

ಈ ಜೀವನಪಯಣದಲ್ಲಿ ಜೊತೆಯಾದ ಸ್ನೇಹಿತರ ಹೊಸ ಹೊಸ ಸ್ನೇಹವಿದೆ

 

ಅಳಿದು ಹೋದವರ ಕಹಿನೆನಪಿನ ಬೇವು ಮನದಲ್ಲಿ ಮಾಡುತ್ತಿದ್ದರೂ ಘಾಸಿ

ಹೊಸ ಬಂಧು-ಮಿತ್ರರು ತಮ್ಮ ಹೊಸತನದಿ ಮಾಡುತಿಹರು ನೋವ ವಾಸಿ

 

ಬೇವು ಬೆಲ್ಲಕ್ಕೆ ಇಂದಷ್ಟೇ ಅಲ್ಲ ದಿನ ಪ್ರತಿದಿನ ನಮ್ಮೆಲ್ಲರ ಬಾಳಿನಲ್ಲಿದೆ ಪಾಲು

ಪ್ರತಿ ಹೆಜ್ಜೆಯಲ್ಲೂ ಮಿಶ್ರ ಅನುಭವ ನೀಡುತ್ತಲೇ ಇರುತ್ತದೆ ನಮಗೆ ಈ ಬಾಳು

 

ಸಿಹಿ-ಕಹಿ ಹಂಚಿಕೊಂಡು ಬಾಳುವ ಸಮಚಿತ್ತ ಇಂದಿಗಷ್ಟೇ ಸೀಮಿತವಾಗದಿರಲಿ

ಬಾಳಿನ ಏಳು ಬೀಳುಗಳನ್ನು ಸ್ಥೈರ್ಯದಿಂದ ಎದುರಿಸುವ ಸಮಚಿತ್ತ ಸದಾ ಇರಲಿ

 

ನಂದನನಾಮ ಸಂವತ್ಸರ ನಿಮ್ಮ ನಮ್ಮೆಲ್ಲರ ಬಾಳನ್ನು ನಂದನವನವನ್ನಾಗಿಸಲಿ

ಹೊಸ ವರುಷವಿಡೀ ನಿಮ್ಮ ನಮ್ಮೆಲ್ಲರ ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ!

************************


ಬೀಳದಂತೆ – ಬೀಳಿನಂತೆ!

17 ಸೆಪ್ಟೆಂ 10

ಸಖೀ,
ನಿನ್ನ ನಡೆ
ನನ್ನೀ ಮನಕೆ
ಮೋಹಕವೆನಿಸಿತ್ತಂದು
ಲತೆಯಂತೆ,

ನಿನ್ನ ಕುಡಿನೋಟದ
ಮುಗುಳ್ನಗುವೆನ್ನ
ಘಾಸಿಮಾಡಿತಂದು
ಬಾಣದಂತೆ,

ನಿನ್ನ ಸವಿನುಡಿಗಳು
ನನ್ನ ಕಿವಿಗಳಿಗೆ
ಕೇಳಿಬಂದವಂದು
ಕೋಗಿಲೆ ಗಾನದಂತೆ,

ಜಾಗೃತನಾಗಿದ್ದೆ
ನಾನು ನಿನ್ನ
ಪ್ರೀತಿಯಲೆಂದೂ
ಬೀಳದಂತೆ,

ಬಿದ್ದಾಯ್ತು,
ಇನ್ನು ಬಿಡುಗಡೆಯಿಲ್ಲ,
ನಾ ಬಂಧಿ, ನೀನು ಇರುವೆ ಇಂದು
ಮರವನಪ್ಪಿದ ಬಲಿಷ್ಟ ಬೀಳಿನಂತೆ!
**********