ಬಾಳು ಕಲಿಸಿದವರೂ ಶಿಕ್ಷಕರೆ!

06 ಸೆಪ್ಟೆಂ 12

ಪಾಠಶಾಲೆಗಳ ಒಳಗೆ ಕಲಿಯುವುದಕ್ಕಿಂತಲೂ
ಪಾಠಶಾಲೆಗಳ ಹೊರಗೆ ಕಲಿಯಲಿಹುದು ಅಷ್ಟು

ಶಿಕ್ಷಣವೆಂದರೆ ಎಂದೂ ಮುಗಿಯದಂಥ ಕಾಯಕ
ಅದು ಸಾಗುತ್ತಿರ ಬೇಕು ಅಲ್ಲಿಂದಿಷ್ಟು ಇಲ್ಲಿಂದಿಷ್ಟು

ಅಕ್ಷರ ಅಂಕಿ ಲೆಕ್ಕಗಳ ಕಲಿಸಿಕೊಟ್ಟವರು ಎಂತೋ
ಅಂತೆಯೇ ಬಾಳುವುದನ್ನು ಕಲಿಸಿದವರೂ ಶಿಕ್ಷಕರೇ

ಕಲಿಕೆಯ ಆಸಕ್ತಿ ಇದ್ದ ಮನಕ್ಕೆ ಹಿರಿಯರು ಕಿರಿಯರು
ಎಂಬ ಭೇದ ಭಾವವಿಲ್ಲ ಕಲಿಸುವವರೆಲ್ಲರೂ ಶಿಕ್ಷಕರೇ

******

ಬದುಕುವ ಕಲೆ!

12 ಆಗಸ್ಟ್ 12

ದುಬಾರಿಯಾದ
ಬದುಕುವ
ಕಲೆಯನ್ನು
ಕಲಿಯುತ್ತಾ
ಕಲಿಯುತ್ತಾ
ಕಿಸೆಯೆಲ್ಲಾ
ಖಾಲಿಯಾಯ್ತು,
ಖಾಲಿ
ಕಿಸೆಯವನ

ಮಡದಿ
ಮಕ್ಕಳ

ಬಾಳು 
ಬೀದಿ
ಪಾಲಾಯ್ತು!

ಕೊನೆಗೂ
ಕಲೆಯಂತೂ
ಕಲಿತಿದ್ದಾಯ್ತು
ಆದರೆ
ಬದುಕಲು
ಬಾಳೇ

ಇಲ್ಲದಂತಾಯ್ತು!
********

ನಮ್ಮ ಹಾರಾಟ, ಹೋರಾಟ, ಇಲ್ಲಿ ಇನ್ನೆಷ್ಟೇ?

08 ಜೂನ್ 12

ಸಖೀ,
ಇಂದು ಇಲ್ಲಿ, ನಮ್ಮನ್ನು ಕಾಡುವವು ಅವರ ನೆನಪುಗಳು
ನಾಳೆ ಇನ್ನೆಲ್ಲೋ, ಇನ್ನಾರಿಗೋ ನಮ್ಮಯ ನೆನಪುಗಳು;

ಬದುಕಿದವರದೂ ಅಷ್ಟೇ, ಇಲ್ಲಿ ಬಾಳಿದವರದೂ ಅಷ್ಟೇ
ಆದರೂ, ನಮ್ಮ ಹಾರಾಟ, ಹೋರಾಟ, ಇಲ್ಲಿ ಇನ್ನೆಷ್ಟೇ?

ಏನೂ ಮಾಡದೇ ಅಳಿದವರೂ ನೆನಪಾಗುತ್ತಾರೆ
ಹೆಸರು ಮಾಡಿ ಮಡಿದವರೂ ನೆನಪಾಗುತ್ತಾರೆ;

ನೆನಪಾಗುವಾಗ ಒಳ್ಳೆಯವರು ಕೆಟ್ಟವರು ಎಂಬ
ಭೇದವೇ ಇಲ್ಲದಂತೆ ಎಲ್ಲರೂ ನೆನಪಾಗುತ್ತಾರೆ;

ನೆನಪುಗಳು ನಮ್ಮನ್ನು ಕಾಡಿಸುತ್ತವೆ, ಪೀಡಿಸುತ್ತವೆ,
ನಮ್ಮ ಮನಗಳಿಗೆ ಒಮ್ಮೊಮ್ಮೆ ಮುದ ನೀಡುತ್ತವೆ;

ಒಳ್ಳೆಯವರ ನೆನಪುಗಳಿಗಿಂತಲೂ ಒಮ್ಮೊಮ್ಮೆ
ಕೆಟ್ಟವರ ನೆನಪುಗಳು ಜಾಸ್ತಿ ನೋವು ತರುತ್ತವೆ;

ನಮ್ಮೊಂದಿಗೆ ಇಲ್ಲಿ ಇದ್ದು, ಮುಂದೆ ನಡೆದು ಹೋದ 
ಎಲ್ಲರೂ ಮೆರವಣಿಗೆಯಲ್ಲಿ ಸಾಗುತ್ತಾ ಇರುತ್ತಾರೆ;

ನನ್ನನ್ನು ಕಂಡು ಅದ್ಯಾಕೋ ಅವರೆಲ್ಲಾ ಒಳಗೊಳಗೆ
ಮುಸಿ ಮುಸಿ ನಗುತ್ತಾ ಇರುವಂತೆ ಭಾಸವಾಗುತ್ತಾರೆ;

ಬದುಕಿದವರೂ ಅಷ್ಟೇ, ಇಲ್ಲಿ ಬಾಳಿದವರೂ ಅಷ್ಟೇ,
ಆದರೂ, ನಿಜ ಹೇಳು
ನಮ್ಮ ಹಾರಾಟ… ಹೋರಾಟ… ಇಲ್ಲಿ ಇನ್ನು ಅದೆಷ್ಟೇ?
****************************


ನನ್ನೀ ಬಾಳು ಖಾಲಿ ಹಾಳೆ…!

20 ಡಿಸೆ 10

ಹಿಂದೀ ಚಿತ್ರಗೀತೆಯೊಂದರ ಭಾವಾನುವಾದದ ಪ್ರಯತ್ನ:

ನನ್ನೀ ಬಾಳು ಖಾಲಿ ಹಾಳೆ
ಖಾಲಿಯಾಗೇ ಉಳಿದಿದೆ
ಬರೆದದ್ದೆಲ್ಲಾ…
ಬರೆದದ್ದೆಲ್ಲಾ…
ಕಣ್ಣೀರಿನ…
ಜೊತೆಗೇ ಹರಿದಿದೆ!

ಒಮ್ಮೆ ಗಾಳಿ ಬೀಸಿದಾಗ…
ಒಮ್ಮೆ ಗಾಳಿ ಬೀಸಿದಾಗ…
ಬಿದ್ದು ಹೋಯಿತು ಹೂ…
ಬಿದ್ದು ಹೋಯಿತು ಹೂ…
ಗಾಳಿಯದ್ದಲ್ಲಾ…
ಹೂದೋಟದ್ದಲ್ಲಾ…
ಯಾರದ್ದಿತ್ತೀ ತಪ್ಪು…
ಯಾರದ್ದಿತ್ತೀ ತಪ್ಪು…
ಗಾಳಿಯಲ್ಲಿ…
ಗಾಳಿಯಲ್ಲಿ…
ಗಂಧ ಬೆರೆತು ಉಳಿಯಲಿಲ್ಲ ಏನೂ

ನನ್ನೀ ಬಾಳು ಖಾಲಿ ಹಾಳೆ
ಖಾಲಿಯಾಗೇ ಉಳಿದಿದೆ
ಬರೆದದ್ದೆಲ್ಲಾ…
ಬರೆದದ್ದೆಲ್ಲಾ…
ಕಣ್ಣೀರಿನ…
ಜೊತೆಗೇ ಹರಿದಿದೆ!

ಹಾರೋ ಹಕ್ಕಿಗೆ ಮನೆಯೆಲ್ಲಿದೆ…
ಹಾರೋ ಹಕ್ಕಿಗೆ ಮನೆಯೆಲ್ಲಿದೆ…
ನನಗೂ ಇಲ್ಲ ಮನೆ…
ನನಗೂ ಇಲ್ಲ ಮನೆ…
ಊರುಕೇರಿ ಒಂದೂ ಇಲ್ಲ…
ಹೋಗಲೆಲ್ಲಿಗೆ ನಾ…
ಹೋಗಲೆಲ್ಲಿಗೆ ನಾ…
ಕನಸಿನಂತೆ…
ಕನಸಿನಂತೆ…
ನನ್ನ ಸಖಿಯ ಬಳಿಯೆ ಉಳಿದೆ ನಾ…

ನನ್ನೀ ಬಾಳು ಖಾಲಿ ಹಾಳೆ
ಖಾಲಿಯಾಗೇ ಉಳಿದಿದೆ
ಬರೆದದ್ದೆಲ್ಲಾ…
ಬರೆದದ್ದೆಲ್ಲಾ…
ಕಣ್ಣೀರಿನ…
ಜೊತೆಗೇ ಹರಿದಿದೆ!
*********

ಮೂಲ ಗೀತೆಯ ಗಾಯಕರು: ಕಿಶೋರ್ ಕುಮಾರ್

ಮೂಲ ಗೀತೆ:

ಮೇರಾ ಜೀವನ ಕೋರ ಕಾಗಜ್ ಕೋರಾ ಹೀ ರೆಹ್ ಗಯಾ
ಮೇರಾ ಜೀವನ ಕೋರ ಕಾಗಜ್ ಕೋರಾ ಹೀ ರೆಹ್ ಗಯಾ
ಜೋ ಲಿಖಾತಾ ಆಂಸೂವೋಂ ಕೇ ಸಂಗ್ ಬೆಹ್ ಗಯಾ
ಮೇರಾ ಜೀವನ ಕೋರ ಕಾಗಜ್ ಕೋರಾ ಹೀ ರೆಹ್ ಗಯಾ

ಎಕ್ ಹವಾ ಕಾ ಝೋಕಾ ಆಯಾ
ಎಕ್ ಹವಾ ಕಾ ಝೋಕಾ ಆಯಾ,
ಟೂಟಾ ಡಾಲೀ ಸೇ ಫೂಲ್
ಟೂಟಾ ಡಾಲೀ ಸೇ ಫೂಲ್ನ ಪವನ್ ಕೀ ನ ಚಮನ್ ಕೀ
ಕಿಸಿ ಕೀ ಹೈ ಯೆಹ್ ಭೂಲ್
ಕಿಸಿ ಕೀ ಹೈ ಯೆಹ್ ಭೂಲ್
ಖೋ ಗಯೀ
ಖೋ ಗಯೀ ಖುಶ್‍ಬೂ ಹವಾ ಮೆ…
ಕುಚ್ ನ ರೆಹ್ ಗಯಾ

ಮೇರಾ ಜೀವನ ಕೋರ ಕಾಗಜ್ ಕೋರಾ ಹೀ ರೆಹ್ ಗಯಾ
ಜೋ ಲಿಖಾತಾ ಆಂಸೂವೋಂ ಕೇ ಸಂಗ್ ಬೆಹ್ ಗಯಾ

ಉಡ್‍ತೇ ಪಂಛೀ ಕಾ ಠಿಕಾನಾ
ಉಡ್‍ತೇ ಪಂಛೀ ಕಾ ಠಿಕಾನಾ
ಮೇರಾ ನ ಕೋಯೀ ಜಹಾಂ
ಮೇರಾ ನ ಕೋಯೀ ಜಹಾಂ
ನ ಡಗರ್ ಹೈ ನ ಖಬರ್ ಹೈ
ಜಾನಾ ಹೈ ಮುಝ್‍ಕೋ ಕಹಾಂ
ಜಾನಾ ಹೈ ಮುಝ್‍ಕೋ ಕಹಾಂ
ಬನ್‍ಕೇ ಸಪ್ನಾ ಬನ್‍ಕೇ ಸಪ್ನಾ
ಹಮ್‍ಸಫರ‍್ ಕಾ ಸಾಥ್ ರೆಹ್ ಗಯಾ

ಮೇರಾ ಜೀವನ ಕೋರ ಕಾಗಜ್ ಕೋರಾ ಹೀ ರೆಹ್ ಗಯಾ
ಜೋ ಲಿಖಾತಾ ಆಂಸೂವೋಂ ಕೇ ಸಂಗ್ ಬೆಹ್ ಗಯಾ
****************************


ಕಾಡುವ ಪ್ರಶ್ನೆಗಳು!

16 ಸೆಪ್ಟೆಂ 10

 

ಪರಿಪಕ್ವವಾದ
ತೊಂಬತ್ತರ
ಇಳಿವಯಸ್ಸಿನಲ್ಲಿ,

ಕಾಯುತ್ತಿದ್ದರೂ
ಯಮರಾಜ
ಮನೆ ಬಾಗಿಲಿನಲ್ಲಿ,

ಅದ್ಯಾವುದೋ
ಅವ್ಯಕ್ತ ಸೆಳೆತಕ್ಕೆ
ಒಳಗಾಗಿ,

ದಿಢೀರನೇ
ಆತ್ಮಹತ್ಯೆಗೆ
ಶರಣಾಗಿ,

ಇಹಲೋಕ
ತ್ಯಜಿಸಿದವರ
ನೆನೆದು ನಾ
ನಿಜದಿ ಏನನ್ನಲಿ?

ತೃಪ್ತನಾಗನು
ಮನುಜ
ಪರಿಪಕ್ವನಾದರೂ,

ಹತ್ತಿಕ್ಕಲಾರ ತನ್ನ
ಆಸೆಗಳ, ಎಲ್ಲವೂ
ಮುಗಿದಿದ್ದರೂ,

ತನ್ನದೇನಿಲ್ಲದಿದ್ದರೂ,
ಎಲ್ಲವೂ ತನ್ನದೇ
ಎಂಬ ಭಾವವಿಹುದು,

ಜವಾಬ್ದಾರನಲ್ಲದೇ
ಇದ್ದರೂ, ಎಲ್ಲದಕೂ
ಮನ ಮರುಗುತಿಹುದು,

ತಾನೆಣಿಸಿದಂತೆ
ತನ್ನವರಿಲ್ಲ ಎಂಬ
ಕೊರಗು ಕಾಡಿರಬಹುದೇ?

ತಾನೆಣಿಸಿದಂತೆ
ತಾನೇ ಬಾಳಿಲ್ಲ ಎಂದಾ
ಆತ್ಮ ತೆರಳಿರಬಹುದೇ?

ಕೆಲವು ಪ್ರಶ್ನೆಗಳು,
ಸದಾ ಪ್ರಶ್ನೆಗಳಾಗೇ
ಉಳಿದು ಬಿಡುವವು,

ನಾವು ಮರೆಯಲು
ಯತ್ನಿಸಿದಷ್ಟೂ ಸದಾ
ನಮ್ಮನ್ನು ಕಾಡುವವು!
***********


ಮಧುಚಂದ್ರ ಮುಗಿದ ಮೇಲೆ…!

30 ಆಗಸ್ಟ್ 10

ಕೆಲವು
ಬಾಂಧವ್ಯಗಳೇ
ಹೀಗೆ,

ಮಧುಚಂದ್ರ
ಮುಗಿದ ಮೇಲೆ
ಬಾಳು ಒಮ್ಮೆಗೇ
ನೀರಸವೆನಿಸುವ
ಹಾಗೆ;

ಮೊದಲ
ಭೇಟಿಯ
ಆ ಮೊದಲ
ಮಾತಿನಿಂದಲೇ
ಮೋಡಿಗೊಳಗಾಗುವರು,

ತನ್ನ ಯಾವುದೋ
ಸದಭಿಪ್ರಾಯದ
ಮಾತುಗಳಿಗೆ
ಸಹಮತ
ವ್ಯಕ್ತಪಡಿಸಿದ್ದಕ್ಕೇ
ಮೆಚ್ಚಿ ಕೊಂಡಾಡುವರು;

ಬರಸೆಳೆದು
ಆಲಿಂಗನ ನೀಡಿ
ಬೆನ್ನು ತಟ್ಟಿ
ನೀವೆನಗೆ
ಹತ್ತಿರದವರೆಂದು
ಮುಖಸ್ತುತಿ ಮಾಡುವರು,

ದಾರಿಯಲಿ
ಹೋಗುವವನ
ಮನೆಗೆ ಕರೆದು
ಯಾವುದೋ ಜನ್ಮದ
ಬಂಧುವೆಂದು
ಸತ್ಕರಿಸಿ
ಸಂತಸಪಡುವರು;

ನಾಲ್ಕಾರು ದಿನ
ವಾರಗಳಾದಾಗ,
ವಸ್ತುನಿಷ್ಟ ಅಭಿಪ್ರಾಯಗಳು
ಬರಲು ಆರಂಭಿಸಿದಾಗ,
ಆ ಮೊದಲ ಮಾತನೇ
ಮರೆಸುವ ಮಾತುಗಳು
ನೂರಾರು ಬಂದಾಗ,
ಬಂಧು ಎಂದವನನೇ
ಅಳೆಯುವುದಕೆ
ಆರಂಭಿಸುವರು,

ತಿಂಗಳು
ಕಳೆಯುವಷ್ಟರಲ್ಲಿ
ಅಸಡ್ದೆ
ತೋರಿಸತೊಡಗಿ
ಸಂಪೂರ್ಣವಾಗಿ
ನಿರ್ಲಕ್ಷಿಸಲು
ಪ್ರಾರಂಭಿಸುವರು;

ತಮ್ಮದೇ
ತಪ್ಪುಗ್ರಹಿಕೆಗೆ
ತಾವೇ
ಬಲಿಯಾಗುವರು,

ಅನ್ಯರ
ಪಾಲಿಗೆ ಬರಿ ಒಂದು
ದುಃಸ್ವಪ್ನವಾಗಿ
ಕಾಡಿ ಹೋಗುವರು;

ಇವರು ತಮ್ಮೆಲ್ಲಾ
ಮಾತುಗಳಿಗೆ
ಹೂಂಗುಟ್ಟುವವರ
ಅರಸುತಿರುವವರು,

ತಮ್ಮ ಸಂಗಡ
ಗುರುತಿಸಿಕೊಳ್ಳಲು
ಮಂದಿ ಬೇಕೆಂದು
ಹಾತೊರೆಯುವವರು;

ಇಂಥವರು
ನಮ್ಮ ಬಾಳಲ್ಲಿ
ಇದ್ದರೆಷ್ಟು?
ಇಲ್ಲದಿದ್ದರೆಷ್ಟು?

ಬಲು ನಿಧಾನದಿ
ಮನದ ಬಾಗಿಲ
ತೆರೆದು ಹೃದಯವನೇ
ಸೇರಿಕೊಂಬವರು
ಈಗ ಇದ್ದಾರೆಷ್ಟು?

ಕೆಲವು
ಬಾಂಧವ್ಯಗಳೇ
ಹೀಗೆ,

ಮಧುಚಂದ್ರ
ಮುಗಿದ ಮೇಲೆ
ಬಾಳು ಒಮ್ಮೆಗೇ
ನೀರಸವೆನಿಸುವ
ಹಾಗೆ!
****


ತಾನಾಡಿದಂತೆ ಬಾಳಿದಾತನೇ ಧನ್ಯ ಕೋಟಿ ಮಂದಿಯಲ್ಲಿ!

03 ಆಗಸ್ಟ್ 10

ತನ್ನತನವನ್ನೇ ಮರೆತು ಹಣಕ್ಕಾಗಿ ಹೆಣವಾಗುತ್ತಿದ್ದಾರೆ ಮಂದಿ

ಹಣವಿಲ್ಲದವನು ಬಾಳೆಲ್ಲಾ ಆಗಿರುತ್ತಾನೆ ಕೀಳರಿಮೆಯ ಬಂಧಿ


ಈ ಸಮಾಜ ಗುರುತಿಸುವುದೂ ಹಣವಿದ್ದವರನ್ನಷ್ಟೇ ಇದೂ ಸತ್ಯ

ಬಸ್ಸಲ್ಲಿ ಬಂದವನಿಗಲ್ಲ, ಕಾರಲ್ಲಿ ಬರುವವನಿಗೇ ಈಗೆಲ್ಲಾ ಪ್ರಾಶಸ್ತ್ಯ


ಸಮಾಜದ ಕೀಳುದೃಷ್ಟಿಯ ಎದುರಿಸಿ, ಕೀಳರಿಮೆಯ ಮೆಟ್ಟಿ ನಿಂತು,

ತನ್ನ ಕಲೆಯನ್ನು ಬೆಳೆಸುವುದು ಬಹು ಕಷ್ಟ, ಅದು ಕೆಲವರಿಗೇ ಗೊತ್ತು


ತಾನು, ತಾನಾಗಿಯೇ ಬಾಳಿ, ತನ್ನತನವನ್ನು ಇಲ್ಲಿ ಉಳಿಸಿ ಹೋಗಬೇಕು

ತಾನಳಿದ ಮೇಲೆ, ತನ್ನ ಕಲೆಯ ಬಗ್ಗೆ ಜನರು ಮಾತಾಡುವಂತಾಗಬೇಕು


ತಾನು ಆಡಿದಂತೆಯೇ ಬಾಳಿ ತೋರಿಸಲು ಬಲು ಕಷ್ಟ ಈ ಸಮಾಜದಲ್ಲಿ

ಹಾಗೊಮ್ಮೆ ಬಾಳಿದನಾದರೆ, ಆತನೇ ಧನ್ಯ ಕೋಟಿ ಕೋಟಿ ಮಂದಿಯಲ್ಲಿ

*********


ತೆರಳಿಬಿಡು ನನ್ನ ನೆನಪಿಂದ ನೀನು!

03 ಜೂನ್ 10

 

ನೀ ನನ್ನ ಬಾಳಿನಲ್ಲಿ

ನೆನಪಾಗೇ ಉಳಿದು ಹೋದೆ

ನೀನಿರದ ಬಾಳು ನಾನು

ನಿನ್ನ ನೆನಪಿನಲ್ಲೇ ಕಳೆದೆ

 

ಆ ದೇವರಂತೆ ಕಂಡೆ

ನನ್ನ ಪಾಲಿಗಾಗ ನೀನು

ನನ್ನ ಪ್ರೀತಿ ಭಕ್ತಿಯಂತೆ

ನಿನ್ನ ಪೂಜಿಸಿದ್ದೆ ನಾನು

 

ನೀ ನನ್ನ ಅರಿಯಲಿಲ್ಲಾ

ನಾ ನಿನ್ನ ಮರೆಯಲಿಲ್ಲಾ

 

||ನೀ ನನ್ನ ಬಾಳಿನಲ್ಲಿ||

 

ಬರಲಾರೆ ನೀನು ಮರಳಿ

ಈ ಸತ್ಯ ನನಗೆ ಗೊತ್ತು

ಸರಿ ಒಮ್ಮೆ ತೆರಳು ನನ್ನ

ನೆನಪಿಂದ ನೀ ಈ ಹೊತ್ತು

 

ನಾ ನಿನ್ನ ಪಡೆಯಲಾರೆ

ನಾ ನಿನ್ನ ಕರೆಯಲಾರೆ

 

||ನೀ ನನ್ನ ಬಾಳಿನಲ್ಲಿ||

**************