ನನ್ನೂರು ಆತ್ರಾಡಿ-ಬಾಲ್ಯದ ನೆನಪುಗಳು!!!

13 ನವೆಂ 09

 

 

ಎಲ್ಲಾ ಊರುಗಳ ಹಾಗೆಯೇ ಇತ್ತು  ನಮ್ಮ ಊರು

ನಾನು ಹುಟ್ಟಿ ಆಡಿ ಬೆಳೆದ ಆ ನನ್ನ ಮೆಚ್ಚಿನ ಊರು

 

ತುಳುನಾಡಿನ ನೂರಾರು ಊರುಗಳಲ್ಲಿ ಅದೂ ಒಂದು

ಆತ್ರಾಡಿ ನನ್ನೂರು ಈ ನನ್ನ ಮನದೊಳಗಿದೆ ಇಂದೂ

 

ಅಲ್ಲಿ ಆಗೆಲ್ಲಾ ದೊಡ್ಡ ದೊಡ್ದ ಮನೆಗಳು ಇದ್ದಿರಲೇ ಇಲ್ಲ

ಸಣ್ಣ ಸಣ್ಣ ಮನದವರು ನಿಜಕ್ಕೂ ಅಲ್ಲಾರೂ ಇದ್ದಿರಲಿಲ್ಲ

 

ಬಾಲ್ಯದಿಂದಲೂ ನೆನಪಾದಗಲೆಲ್ಲಾ ನೀಡುವುದು ನೋವು

ಎರಡು-ಮೂರು ವರ್ಷ ಪ್ರಾಯದಾ ನನ್ನ ತಮ್ಮನಾ ಸಾವು

 

ನನಗಾಗ ಇದ್ದಿರಬಹುದು ನಾಲಕ್ಕೋ ಐದರದೋ  ಪ್ರಾಯ

ನಾನು ಅಳುತ್ತಿದ್ದೆ  ಕೊಂಡೊಯ್ಯುವಾಗ ಆ ತಮ್ಮನ ಕಾಯ

 

ದೊಡ್ಡಣ್ಣ ಸೇರಿಸಿದರು ನನ್ನ ಅಂಜಾರು ಪ್ರಾಥಮಿಕ ಶಾಲೆಗೆ

ಯಶೋದ ಮತ್ತು ಕಲಾವತಿ ಟೀಚರುಗಳಿಬ್ಬರೇ ಅಲ್ಲೆಮಗೆ

 

ಕನ್ನಡ ಅಕ್ಷರ ಕಲಿಸಿದರಲ್ಲಿ ಯಶೋದ ಟೀಚರಂದು ನಮಗೆ

ಕಣ್ಣಲ್ಲಿ ನೀರಿತ್ತು ಕಲಾವತಿ ಟೀಚರರ ಆ ಪುಣ್ಯಕೋಟಿ ಕತೆಗೆ

 

ಯಶೋದ ಟೀಚರ ಭೇಟಿಯ ಭಾಗ್ಯ ಇಂದಿಗೂ ಇದೆಯೆನಗೆ

ಕಲಾವತಿ ಟೀಚರು ಆಗಲೇ ತೆರಳಿ ಆಗಿದೆ ದೇವರಾ ಮನೆಗೆ

 

ಸುತ್ತ ಹೊಲ, ತೋಟ, ಬೈಲು, ಹರಿವ ನೀರಿನಾ ತೋಡು

ನಾವೆಲ್ಲ ದಿನಕ್ಕೊಮ್ಮೆಯಾದರೂ  ಭೇಟಿ ನೀಡುತ್ತಿದ್ದ ಕಾಡು

 

ಕಾಡಿನ ಹಾದಿಯಲ್ಲಿ ಕಾಲಡಿಯಲ್ಲಿ ಸಿಗುತ್ತಿದ್ದ ಆ ಹಾವುಗಳು

ಭಯದಿಂದ ಕಣ್ಮುಚ್ಚಿಕೊಂಡೇ ಓಡುತ್ತಿದ್ದೆವು ಆಗ ನಾವುಗಳು

 

ಸವಿರುಚಿಯ ಗೇರು, ಮಾವು, ಹಲಸು ಮತ್ತು ಆ ಬಾಳೆ ಹಣ್ಣು

ಹಗಲೆಲ್ಲಾ ತಿಂದು ಸುತ್ತಾಡಿ ಕುಣಿದು ಕೈಮೈ ತುಂಬೆಲ್ಲಾ ಮಣ್ಣು

 

ಅಣ್ಣ ಮಾಡಿ ಕೊಟ್ಟಿದ್ದ ಬಣ್ಣದ ಗಾಳಿಪಟ ಒಮ್ಮೆ ಕಾಣೆಯಾಗಿ

ಬರಿಗೈಲಿ ಮನೆಗೆ ಮರಳುವಾಗ ಕಣ್ಣುಗಳಿದ್ದವು ತೇವವಾಗಿ

 

ಲಗೋರಿ, ಕಣ್ಣು ಮುಚ್ಚಾಲೆ ಮತ್ತು ಕುಟ್ಟಿ ದೊಣ್ಣೆಯಾಟ

ಬಾರದೇ ಇದ್ದರೂ ಆಡುತ್ತಿದ್ದ ಆ ಕ್ರಿಕೆಟ್ಟು, ಕಬಡ್ಡಿಯಾಟ

 

ಪಂಜರದಲಿ ಸಾಕಿದ್ದೆವು ಗಿಳಿಗಳನು ಬಾಳೆ ಹಣ್ಣುಗಳ ತಿನಿಸಿ

ದಾಸು ನಾಯಿಗೆ ವಾರ ವಾರವೂ ಸ್ನಾನ ತಣ್ಣೀರಲ್ಲಿ ನೆನೆಸಿ

 

ಚಿಕ್ಕಮ್ಮನ ಮಗನೊಮ್ಮೆ ನಮ್ಮಂಗಳಕೆ ಕಾಲಿಟ್ಟು ಗದರಲು

ಹಾರಿ ಹೋದ ಗಿಳಿಗಳು ಮನಸ್ಸು ಮಾಡಲೇ ಇಲ್ಲ ಮರಳಲು

 

ದಾಸು ನಾಯಿಗೆ ವಿಷವುಣ್ಣಸಿದರು ಯಾರೋ ನಿಶಾಚರರು

ಆತ ಕೊರಗಿ ಸತ್ತಾಗ ನಮ್ಮ ಮನೆಯಲ್ಲೆಲ್ಲರೂ ಮರುಗಿದರು

 

ಮದಗದ ತಿಳಿ ನೀರಲ್ಲಿ ಕೋಣಗಳ ಜೊತೆಗೆ ನಮಗೂ ಸ್ನಾನ

ಸಿಪಿಸಿ ಬಸ್ಸು ಬಡಿದಾಗ ಒಂದು ಕೋಣದ ಹಠಾತ್ ಅವಸಾನ

 

ನೆನಪುಗಳಿಗೇನೂ ಕೊರತೆ ಇಲ್ಲ ಅವು ಹರಿವ ನೀರಿನಂತೆ

ಕಟ್ಟೆಯೊಡೆದು ಬರಬೇಕು ಅದಕೆ ನಾನೀಗ ಕಾದು ನಿಂತೆ !!!

***************************************


ಅಳಲಾಗದು ಸಖೀ…!!!

13 ಆಗಸ್ಟ್ 09

ಸಖೀ, ಈ ಹಿರಿತನ ಏಕೆ ಬೇಕಿತ್ತು
ಅಂದಿನ ಆ ಬಾಲ್ಯ ಅದೆಷ್ಟು ಚೆನ್ನಿತ್ತು

ಅಂದು,
ಈ ಮನದಿ ನೋವುಗಳು ಇದ್ದಿಲ್ಲವೆಂದೇನಲ್ಲ;
ಆದರೆ, ಮನ ನೊಂದಾಗ ಎಲ್ಲಾದರಲ್ಲಿ ಕೂತು
ನಾವು ಮನಬಿಚ್ಚಿ ಬೇಕೆನಿಸಿದಷ್ಟು ಅಳುತ್ತಿದ್ದೇವಲ್ಲ
ಅತ್ತರೂ, ಆಗ ನಮ್ಮನಾರೂ ಕೇಳುವವರಿರಲಿಲ್ಲ
ಕೇಳಿದರೂ ಪುಸಲಾಯಿಸಿ ಸಮಾಧಾನ ಪಡಿಸಿ
ನಮ್ಮ  ನೋವ ಅರಿತುಕೊಂಡವರೇ ಅಲ್ಲಿ ಆಗೆಲ್ಲಾ
 
ಇಂದು,
ನೂರೆಂಟು ನೋವುಗಳು ತುಂಬಿವೆ ಮನದೊಳಗೆಲ್ಲಾ
ಈ ನೋವುಗಳ ಬಹಿರಂಗಪಡಿಸಲಾಗುವುದಿಲ್ಲ
ಒಳಗೊಳಗೇ ಕೊರಗುತಿರಬೇಕು ನಾವು ಹಗಲೆಲ್ಲಾ
 
ಅಳು ಬಂದಾಗ ಮನಬಿಚ್ಚಿ ಅಳಲೂ ಆಗುವುದಿಲ್ಲ
ಅತ್ತರೂ, ಕಂಡು ಹುಬ್ಬೇರಿಸುವ ಕಣ್ಣುಗಳೇ ಇಲ್ಲೆಲ್ಲ
ಈ ಮನದ ನೋವ ಅರಿತುಕೊಂಬವರಾರೂ ಇಲ್ಲಿಲ್ಲ
ಕರೆದು ಎರಡು ಸಾಂತ್ವನದ ಮಾತ ಆಡುವವರೇ ಇಲ್ಲ
 
ಅದಕ್ಕೇ ನನಗೆ ಬಾಲಕನಾಗುವ ಬಯಕೆ ಈಗೆಲ್ಲಾ
ಅಳಬಹುದು ಸಖೀ, ಅತ್ತು, ಈ ಮನದ ನೋವ
ನೀಗಿಸಿಕೊಳ್ಳಬಹುದು ಎಲ್ಲೆಂದರಲ್ಲಿ ನಾವು ಹಗಲೆಲ್ಲಾ!