ಪ್ರೀತಿಯ ಜ್ಯೋತಿ ಬೆಳಗಲಿ!!!

16 ಆಕ್ಟೋ 09

ಪ್ರತಿ ವರ್ಷದಂತೆ ಈ ಬಾರಿಯೂ ಮತ್ತೆ ಬಂದಿದೆ ದೀಪಾವಳಿ

ಈಗ ಎಲ್ಲೆಲ್ಲೂ ದೀಪಗಳಿಗಿಂತ ಪಟಾಕಿ ಶಬ್ದಗಳದೇ ಹಾವಳಿ

 

ಇಲ್ಲಿ ನಮ್ಮ ಕಿವಿಗಳಿಗೆ ಅಪ್ಪಳಿಸುವ ಈ ಪಟಾಕಿಗಳ ಶಬ್ದಗಳು

ಅವುಗಳ ಹಿಂದಡಗಿವೆ ಬಾಲ ಕಾರ್ಮಿಕರ ಮೂಕ ವೇದನೆಗಳು

 

ಕಾರ್ಖಾನೆಯ ವಿಷವರ್ತುಲದಲ್ಲಿ ತಮ್ಮ ಆರೋಗ್ಯದ ಬಲಿ ನೀಡಿ

ನಮ್ಮ ಮನ ಮನರಂಜಿಸಲು  ದಿನವೂ ಸಾಯುತ್ತಿದ್ದಾರೆ ನೋಡಿ

 

ಪ್ರತೀ ವರುಷ ಕಣ್ಣು ಕಳೆದು ಕೊಳ್ಳುವವರ ಸಂಖ್ಯೆ ಹೆಚ್ಚುತ್ತಲಿದೆ

ಆದರೂ ಅದೆಲ್ಲಾ ಇಲ್ಲಿ ಇನ್ನೂ ಯಾರಿಗೂ ಅರಿವಾಗದಂತೇ ಇದೆ

 

ಕಿವಿಗಳಿಗಾಗುವ ಚಿತ್ರಹಿಂಸೆ ಅಲ್ಲದೆ ವಾಯು ಮಾಲಿನ್ಯವೂ ಸೇರಿ

ಮುಂದೆ ಏಳು ದಿನ ಎಲ್ಲರನ್ನೂ ಕಾಡುತ್ತವೆ ಮೂಗುಗಳು ಸೋರಿ

 

ಉಗ್ರವಾದಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು ಕದ್ದು

ಪಟಾಕಿ ಸದ್ದಿನ ನಡುವೆ ಅಡಗಿ ಹೋಗಬಹುದು ಬಾಂಬಿನ ಸದ್ದು

 

ಏನೇ ಆದರೂ ಸದಾ ಎಚ್ಚರಿಕೆಯಲ್ಲಿಯೇ ಇರಬೇಕಾದ ಹಬ್ಬವಿದು

ಸ್ವಲ್ಪ ಮೈಮರೆತರೂ ಅನಾಹುತಕ್ಕೆ ತಳ್ಳಿ ಬಿಡುವ ಆಚರಣೆಯಿದು

 

ಕರುಣೆಯ ಬತ್ತಿಯನ್ನೆಂದೂ ಸಹನೆಯೆಂಬ ತೈಲ ಹೋಗದೆ ಅಗಲಿ

ಪ್ರೀತಿಯ ಜ್ಯೋತಿ ಪ್ರತಿ ಮನದಲ್ಲೂ ಸದಾ ಬೆಳಗುವಂತೆ ಆಗಲಿ

 

ಒಂದು ಮನದಿಂದ ಇನ್ನೊಂದು ಮನದ ಜ್ಯೋತಿಗೆ ಸ್ಪರ್ಶಕೊಟ್ಟು

ಎಲ್ಲರೂ ಅರಿಯುವಂತಾಗಲಿ ಜಗದಿ ಪ್ರೀತಿಯೇ ಶಾಂತಿಯ ಗುಟ್ಟು


ಚಂದ್ರ ಅನ್ಯ ಗ್ರಹದ ತೆಕ್ಕೆಗೆ ಸೇರಿಕೊಂಡರೆ…?!

09 ಆಕ್ಟೋ 09

ಬಾಂಬುಗಳಿಂದ ಈ ಭೂಲೋಕದಲ್ಲಾದ

ನಷ್ಟ ಆಗಲೇ ಮಿತಿ ಮೀರಿ ಹೋಗಾಗಿದೆ

ಈಗ ನೋಡಿದರೆ ಬಾಂಬುಗಳ ಸವಾರಿ

ದೂರದ ಚಂದಮಾಮನತ್ತಲೂ ಸಾಗಿದೆ

 

ಆತನನು ಘಾಸಿಗೊಳಿಸಿ ಬಂದು ಇನ್ನಿಲ್ಲಿ

ಆನಂದಿಸಲಾದೀತೇ ಆ ಬೆಳದಿಂಗಳನು

ಇನ್ನು ಉಣಲೊಲ್ಲದ ಮಕ್ಕಳಿಗೆ ಇಲ್ಲಿಂದ

ತೋರಿಸಲಾದೀತೇ ಚಂದಮಾಮನನು

 

ವಾತಾವರಣದಲ್ಲಿನ ಏರುತಿರುವ ಉಷ್ಣಕ್ಕೆ

ಆತನ ಮೈಬೆವತು ಪಸೆ ಕಂಡಿರಬಹುದೇ

ಅದರ ರಹಸ್ಯವನು ಬೇಧಿಸಲು ಆತನನು

ಈ ಪರಿಯಾಗಿ ತಿವಿದು ಹಿಂಸಿಸಬಹುದೇ

 

ಶಾಂತನಾಗೇ ಬೆಳಕಿಂದ ಕಡಲ ಮತ್ತೇರಿಸಿ

ಉಕ್ಕುವ ತೆರೆಗಳನು ಸೃಷ್ಟಿಸಬಲ್ಲ ಚಂದಿರ

ಕೋಪಗೊಂಡನೆಂದರೆ ಇನ್ನು ಭೂಲೋಕದ

ಉದ್ದಗಲಕ್ಕೂ ಸುನಾಮಿ ಅಲೆಗಳದೇ ಅಬ್ಬರ

 

ಚಂದಿರ ಮುನಿಸಿನಿಂದ ಭೂಮಿಯ ಬಿಟ್ಟು

ಅನ್ಯ ಗ್ರಹದ ತೆಕ್ಕೆಗೆ ಸೇರಿಕೊಳ್ಳಬಹುದು

ತಿಂಗಳು ಪೂರ್ತಿ ಅಮವಾಸ್ಯೆ ಆಗಿ ಇಲ್ಲಿ

ರಾತ್ರಿ ಕಳ್ಳರ ಕಾಟ ಹೆಚ್ಚಾಗಲೂಬಹುದು