ಇದುವರೆಗೆ ಪುರುಷರಿಗೆ ಸಮಾನರೆಂದು ತಿಳಿದಿದ್ದೆವು ನಾವು!!!

08 ಮಾರ್ಚ್ 10

 

“ಸಖೀ ಯಾಕಿಂದಿಲ್ಲಿ ಈ ರೀತಿ ಮೋಡ ಕವಿದ ವಾತಾವರಣ

ಮಹಿಳಾ ದಿನದಂದೇ ಏಕೆ ನಿನ್ನೀ ಮೊಗದ ಸಂತಸ ಹರಣ

 

ಸೂರ್ಯೋದಯಕೆ ಮೊದಲೇ ನಾನಿನಗೆ ಶುಭ ಹರಸಿಯಾಗಿದೆ

ನಿನ್ನೀ ಮುನಿಸಿಗೆ ಕಾರಣವೇನೆಂದೆನಗೆ ತಿಳಿಯ ಬೇಕಾಗಿದೆ”

 

“ನಿಮಗೊಂದಿಷ್ಟೂ ಗೊತ್ತಾಗೋದಿಲ್ಲ ಈ ಮಹಿಳೆಯರ ಕಷ್ಟ

ಮೀಸಲಾತಿ ತರುತ್ತಿದ್ದಾರೆ ನೋಡಿ ನಮಗಿಲ್ಲದಿದ್ದರೂ ಇಷ್ಟ

 

ಸರ್ಕಾರ ಅಂತಿದೆ ಇದು ಎಲ್ಲಾ ಮಹಿಳೆಯರಿಗೆ ಬಹುಮಾನ

ಬಹುಮಾನ ಅಲ್ಲವದು ಭಾರತೀಯ ಸ್ತ್ರೀಯರಿಗೆ ಅಪಮಾನ

 

ಇದುವರೆಗೆ ಪುರುಷರಿಗೆ ಸಮಾನರೆಂದು ತಿಳಿದಿದ್ದೆವು ನಾವು

ಇನ್ನು ಬರೀ ಮೂವತ್ಮೂರು ಉಳಿದ ಅರುವತ್ತ ಏಳು ನೀವು

 

ಮಹಿಳೆಯರಿನ್ನು ಯಾವ  ವಿಷಯಕ್ಕೆ ಹೋರಾಡುವುದು ಹೇಳಿ

ಹೀಗೆ ಹೋರಾಡುವವರ ಬಾಯ್ಮುಚ್ಚಿಸಿದರಲ್ಲಾ ನೀವೇ ಹೇಳಿ

 

ಈ ದಿನವನ್ನೂ ಕೂಡ ಸಂತಸದಿ ಆಚರಿಸಲು ಬಿಡಲಿಲ್ಲ ಏಕೆ

ಅವರ ರಾಜಕೀಯದಾಟಕ್ಕೆ ಮಹಿಳೆಯರನ್ನು ಬಲಿ ಕೊಡಬೇಕೆ?”

************************************


ಮಾತಾಪಿತರಿಗೆ ಎಲ್ಲಿವೆ ಇನ್ನು ಇದಕ್ಕಿಂತ ಖುಷಿಯ ದಿನಗಳು!!!

11 ಮೇ 09
ಅಂದಿತ್ತು ನನಗೆ ಓದುಗರೇ ನಿಮ್ಮೆಲ್ಲರ ಹರಕೆಯ ನಿರೀಕ್ಷೆ*
ಏಕೆಂದರೆ ಶುರುವಾಗಿತ್ತಂದು ಮಗಳು ಸ್ಮಿತಾಳಿಗೆ ಪರೀಕ್ಷೆ
 
ಮಗಳು ಜಯಿಸಿದ್ದಾಳೆ ನಮ್ಮ ನಿರೀಕ್ಷೆಯ ಸುಳ್ಳಾಗಿಸದೇ
ಇಂದು ಹೇಗೆ ಸುಮ್ಮನಿರಲಿ ಖುಷಿಯ ನಾ ಹಂಚಿಕೊಳ್ಳದೇ
 
ನಿನ್ನೆ ೨೧ನೇ ವರುಷಕ್ಕೆ ಕಾಲಿಡ್ತು ನಮ್ಮ ದಾಂಪತ್ಯ ಜೀವನ
ಒಂದು ದಿನ ಮೊದಲೇ ಸಿಕ್ತು ಮಗಳಿಂದೆಮಗೆ ಬಹುಮಾನ
 
ನನ್ನವಳಿಗೆ ನಾ ಅಂದೆ ಇದೆಂತಹ “ಹ್ಯಾಪ್ಪೀ ಆನಿವರ್ಸರೀ!”
ಅಕೆಯೆಂದಳು ಮುಗುಳ್ನಕ್ಕು “ಕಣ್ಣಂಚಿನ ಆ ಹನಿ ಒರೆಸಿರೀ”
 
ಮಾತಾಪಿತರಿಗೆ  ಎಲ್ಲಿವೆ ಇನ್ನು ಇದಕ್ಕಿಂತ ಖುಷಿಯ ದಿನಗಳು
ನನ್ನೆಲ್ಲ ಓದುಗ ಬಂಧುಗಳಿಗೆ ನಮ್ಮ ಹಾರ್ದಿಕ ಧನ್ಯವಾದಗಳು
 
 

ಆಂಗ್ಲ: ೮೭
ಹಿಂದಿ: ೯೫
ಭೌತಶಾಸ್ತ್ರ: ೯೮
ರಸಾಯನ ಶಾಸ್ತ್ರ: ೯೬
ಗಣಿತಶಾಸ್ತ್ರ: ೯೦
ಜೀವಶಾಸ್ತ್ರ: ೯೩
ಒಟ್ಟು: ೫೫೯
ಶೇಕಡಾ: ೯೩.೧೬