ಮತ್ತೆ ಕಂಡಂತಾಯ್ತು ನಿನ್ನ ಆ ಒನಪು!

26 ಮೇ 10

 

ಖಾಲಿ ಖಾಲಿ ಮನದೊಳಗೆ

ಬರೇ ನಿನ್ನ ನೆನಪು

ಮತ್ತೆ ಕಂಡಂತಾಯ್ತು ಸಖೀ

ನಿನ್ನ ಆ ಒನಪು

 

ನಂಬಿದ್ದೆ ನಾನು ನಿನಗೆ ಅಲ್ಲಿ

ಸಿಗಬಹುದೆಂದು ಸುಖ

ನಿನ್ನಷ್ಟಕ್ಕೆ ನಿನ್ನನ್ನು ಬಿಟ್ಟು

ನಾ ಸಹಿಸಿದೆನಷ್ಟೂ ದುಃಖ

 

ನಮ್ಮ ಪ್ರೀತಿ ನಮ್ಮದೆಂದು

ಇತ್ತು ನಮಗೆ ನಂಬಿಕೆ

ಆದರೇನು ಮಾಡಲೇಳು

ಇತ್ತು ಜನರ ಹೆದರಿಕೆ

 

ನಾನು ನಿನ್ನವನಾಗಲಿಲ್ಲ

ಎಂದು ಹೇಗೆ ಹೇಳಲಿ

ನಾನು ನಾನೇ ಅಲ್ಲ ಈಗ

ಏನಿದೆ ನನ್ನ ಬಾಳಲಿ

 

ನೀನು ಎಲ್ಲೇ ಇದ್ದರೂ

ನನ್ನವಳಲ್ಲ ಎನುವೆಯಾ

ನನ್ನ ಒಳಗೆ ನೀನೇ ನೀನು

ಇಲ್ಲ ಎಂದು ಎನುವೆಯಾ

 

ದೂರ ದೂರ ಇದ್ದರೂ

ಸದಾ ಮೌನ ಸಂಭಾಷಣೆ

ಸಹಿಸುತಿರಲೇಬೇಕು ಸದಾ

ನಮ್ಮೊಳಗಿನ ಈ ಬವಣೆ

 

ಖಾಲಿ ಖಾಲಿ ಮನದೊನೊಳಗೆ

ಬರೇ ನಿನ್ನ ನೆನಪು

ಮತ್ತೆ ಕಂಡಂತಾಯ್ತು ಸಖೀ

ನಿನ್ನ ಆ ಒನಪು!

**********