ಹಣೆ ಬರಹ!

06 ಸೆಪ್ಟೆಂ 12

ಸಖೀ,
ನಿನ್ನ 
ಹಣೆಯ
ಮೇಲೆ

ಮೂಡುವ
ಗೆರೆಗಳ
ನಡುವೆ

ಬರೆದಿಹುದು
ನೋಡು
ನನ್ನ

ಹಣೆ
ಬರಹ!

*****


ಓದುಗರ ಸ್ನೇಹ!

01 ಸೆಪ್ಟೆಂ 12

ಸಖೀ,
ನಮ್ಮ ಬರಹಗಳನ್ನೆಲ್ಲಾ

ಓದಿ, ನಮ್ಮನ್ನು ಗುರುತಿಸಿ
ಹತ್ತಿರ ಬರುವವರಿಗೆ,
ನಮ್ಮೆಲ್ಲಾ ಬರಹಗಳಿಗೆ
ಅರ್ಥವನ್ನು ನೀಡುತ್ತಾ,
ಆ ಬರಹಗಳಿಗೂ ಮೀರಿ,
ನಿಸ್ವಾರ್ಥರಾಗಿ ನಾವು
ವ್ಯವಹರಿಸುವ ಪರಿಯೂ 
ಇಷ್ಟವಾದರಷ್ಟೇ, ನಮ್ಮ
ಸ್ನೇಹಕ್ಕೂ ಒಂದು ಅರ್ಥ!


ಪ್ರಭೆ-ಪ್ರತಿಭೆ!

26 ಜೂನ್ 12

ಸಖೀ,

ನನ್ನ ಕವನಗಳನ್ನು,
ನನ್ನ ಬರಹಗಳನ್ನು,
ನೀನು ಓದಿ, ಮೆಚ್ಚಿ,
ನನ್ನ ಪ್ರತಿಭೆಯನ್ನು
ಎಷ್ಟು ಹೊಗಳಿದರೂ,
ನಿಜ ಏನೆಂಬುದು,
ನನ್ನಂತೆಯೇ
ನಿನಗೂ ಗೊತ್ತು;

ನಿನ್ನ ಸಾಮಿಪ್ಯದ
ಈ ಸೌಭಾಗ್ಯ ಸದಾ
ಇರುವ, ನನ್ನೊಳಗಿನ
ಪ್ರತಿಭೆಯು ಹೊರ
ಹೊಮ್ಮುವುದು, ನಿನ್ನ
ಒಲವಿನ ಪ್ರಭೆಯ
ಪ್ರಭಾವದಿಂದಾಗಿ
ಮಾತ್ರ, ಯಾವತ್ತೂ!
**********


ಇದ್ದಂತೆಯೇ ಇದ್ದರೆ ಮಾತ್ರ ಚಿರಕಾಲ ಬಾಳುವುದು ಸ್ನೇಹ ಬಂಧ!

23 ಮೇ 12

ಅಯ್ಯೋ ಯಾವಾಗಲೂ ನೀನು ನಾನೆಣಿಸಿದ್ದನ್ನೇ ನುಡಿಯುತಿರುವೆ
ನನ್ನ ಮನದ ಮಾತುಗಳನ್ನೇ ನೀನು ಸದಾ ಇಲ್ಲಿ ಬರೆಯುತ್ತಿರುವೆ

ನೀನು ಬರೆದ ಮಾತೆಲ್ಲಾ ನನ್ನ ಮನವ ಕಲಕಿ ಹೋದ ಕನಸುಗಳು
ನಮ್ಮೀರ್ವರ ನಡುವಿಹವು ವಿಚಿತ್ರವಾಗಿಯೂ ಕೆಲವು ಸಾಮ್ಯತೆಗಳು

ಸಹಮನಸ್ಕರು ನಾವು ಈರ್ವರೂ ಸಹೃದಯಿಗಳು ನಿಜವಾಗಿಯೂ
ಹೇಳಿದ ಮಾತುಗಳು ಹಲವು ಉಳಿದಿರುವವೆಷ್ಟಿನ್ನು ಹೇಳದೆಯೂ

ಇಷ್ಟಾದರೆ ಸಾಕಿತ್ತು ಮಾತನ್ನು ಅಲ್ಲಿಗೇ ಮುಗಿಸಬೇಕಿತ್ತು ನಿಜದಿ
ಬಾಳಬಹುದಿತ್ತು ಸಂಬಂಧಕ್ಕೆ ಗೌರವಕೊಟ್ಟು ಸದಾ ಅನುನಯದಿ

ಒಂದೇ ಭಾವದ ಜೀವಿಗಳಾದ ನಾವೊಂದಾಗಿ ಬಾಳಬೇಕಿತ್ತಲ್ಲವೇ
ನಾವು ಒಂದಾಗಲೆಂದೇ ಇಲ್ಲಿ ಹೀಗೆ ಪರಿಚಿತರಾಗಿರಬೇಕಲ್ಲವೇ?

ಎಂಬ ಆಸೆ ಹೊರಹಾಕಿದ ಕ್ಷಣದಲ್ಲೇ ಕೆಟ್ಟುಹೋಯ್ತು ಆ ಸಂಬಂಧ
ಇದ್ದಂತೆಯೇ ಇದ್ದರೆ ಮಾತ್ರ ಚಿರಕಾಲ ಬಾಳುವುದು ಸ್ನೇಹ ಬಂಧ!
                             ****


ನೀ ನನ್ನನ್ನು ನೆನೆಸಿಕೊಳ್ಳುವಂತೆ ಮಾಡಿ ಹೋಗುತ್ತೇನೆ!!!

01 ಡಿಸೆ 09

 

ಸಖೀ,

ಹುಡುಕಬೇಡ

ನನ್ನ ಕವನಗಳಲಿ

ಕುವೆಂಪು, ಬೇಂದ್ರೆ

ನರಸಿಂಹಸ್ವಾಮಿಯವರನ್ನು,

ಶಿವರುದ್ರಪ್ಪ, ಅಡಿಗ,

ದೊಡ್ಡ ರಂಗೇಗೌಡರನ್ನು;

 

ಹುಡುಕಬೇಡ

ನನ್ನ ಬರಹಗಳಲಿ

ಭೈರಪ್ಪ, ಕಾರಂತ,

ಅನಂತಮೂರ್ತಿಯವರನ್ನು

ಲಂಕೇಶ, ಪ್ರತಾಪ ಸಿಂಹ

ರವಿ ಬೆಳಗರೆಯವರನ್ನು;

 

ನಾನು ಬರೇ

ನಾನಾಗಿರುತ್ತೇನೆ

ನಾನಾಗಿಯೇ

ಬರೆಯುತ್ತೇನೆ,

ನಾನು ನನ್ನದಾದ

ಹೊಸ ಛಾಪನ್ನು

ಇಲ್ಲಿ ಉಳಿಸಿ

ಹೋಗುತ್ತೇನೆ;

 

ನಾನಳಿದ ಮೇಲೆ

ಮುಂದೊಂದು ದಿನ

ಇನ್ನಾರದೋ ಕವನ

ಇನ್ನಾರದೋ ಬರಹ

ಓದಿದ ನೀನು

ಅಲ್ಲಿ ಈ ನಿನ್ನ ನನ್ನನ್ನು

ನೆನೆಸಿಕೊಳ್ಳುವಂತೆ

ಮಾಡಿ ಹೋಗುತ್ತೇನೆ!!!

***************


ಪ್ರತಿಕ್ರಿಯೆಗಳಿಲ್ಲದೆಯೇ…!!!

29 ಜುಲೈ 09
 

ಹತ್ತಿಪ್ಪತ್ತು ಪ್ರತಿಕ್ರಿಯೆಗಳ ಜೊತೆಗೆ

ಮೂರು ನಾಲ್ಕುನೂರು ಪೆಟ್ಟು ತಿಂದ

ಬರಹಗಳಿಗಿಂತ ಪ್ರತಿಕ್ರಿಯೆಗಳಿಲ್ಲದೆಯೇ

ನೂರಾರು ಪೆಟ್ಟುಗಳ ತಿಂದ ಬರಹವೇ

ಬಹು ಪಾಲು ಲೇಸೆಂದ ಈ ಅಲ್ಪಜ್ಞ!!!

 

(“ಪೆಟ್ಟು ತಿಂದ” ಅನ್ನುವ ಪದಗಳನ್ನು “hits ಪಡೆದ” ಅನ್ನುವ ಪದಗಳಿಗೆ ಪರ್ಯಾಯವಾಗಿ ಬಳಸಿದ್ದೇನೆ )

🙂