ಏನಾಗಿರಬಹುದು?

21 ಮಾರ್ಚ್ 12


ನನ್ನನ್ನು ಕರೆ ಕರೆದು
ಮಾತನಾಡಿಸುತ್ತಿದ್ದವರು
ಒಮ್ಮೆಗೇ ಮೌನಿಯಾದಾಗ,

ಅತ್ತಲಿಂದ ದಿನ ಪ್ರತಿದಿನ
ಬರುತ್ತಿದ್ದ ಕರೆಗಳು
ತಿಂಗಳಾದರೂ ಬಾರದಿದ್ದಾಗ,

ಏನ ತಿಳಿಯಲಿ ನಾನು?

ಅವರು ಕಂಡಿರಬಹುದು ನನ್ನಲ್ಲಿ
ಏನೋ ಬದಲಾವಣೆಯನೆಂದೇ?

ಅಲ್ಲಾ… ಅವರೇ
ನಿಜದಿ ಈಗ ಬದಲಾಗಿಹರೆಂದೇ?

ಅಲ್ಲಾ…ಅವರೀಗ ತಮ್ಮ 
ನಿಜ ರೂಪವ ತೋರುತಿಹರೆಂದೇ? 
*********


ಎಲ್ಲವೂ ರೂಢಿಯಾಗುತ್ತಿದೆ…!

14 ಡಿಸೆ 10

ಎಲ್ಲವೂ ರೂಢಿಯಾಗುತ್ತದೆ
ಇಂದಿನ ತನಕ ಏನೂ ಅಲ್ಲದ್ದು ನಾಳೆ ಜೀವಕ್ಕಿಂತ ಹೆಚ್ಚಾಗುತ್ತದೆ
ಇಂದಿನ ತನಕ ಜೀವವೇ ಆಗಿದ್ದದ್ದು ನಾಳೆ ಬರಿಯ ನೆನಪಾಗಿ ಉಳಿದು ಬಿಡುತ್ತದೆ

ಎಲ್ಲವೂ ರೂಢಿಯಾಗುತ್ತಿದೆ
ಜೊತೆಜೊತೆಗೆ ನಡೆದಿದ್ದ ಹಾದಿಯಲ್ಲೀಗ ಒಂಟಿಯಾಗಿ ಸಾಗಬೇಕಿದೆ
ದಿನವೆಲ್ಲಾ ಮಾತನಾಡುತ್ತಿದ್ದ ನಾವೀಗ ಮೌನಕ್ಕೆ ಶರಣಾಗಿ ಸುಮ್ಮನಿರಬೇಕಾಗಿದೆ

ಎಲ್ಲವೂ ರೂಢಿಯಾಗುತ್ತಿದೆ
ಬಿಟ್ಟು ಬದುಕುವುದೇ ಕಷ್ಟ ಎಂದೆಣಿಸಿದ್ದ ನಾವೂ ದೂರವಾಗಿರಬೇಕಾಗಿದೆ
ನೆನಪುಗಳು ನೋವಾಗಿ ಕಾಡುತ್ತಿದ್ದರೂ, ಆ ನೋವಿನೊಂದಿಗೇ ಬಾಳಬೇಕಾಗಿದೆ

ಎಲ್ಲವೂ ರೂಢಿಯಾಗುತ್ತಿದೆ
ಹೃದಯವನ್ನು ಕಲ್ಲಾಗಿಸಿ ಬಾಳುವುದೂ ನಮಗೀಗ ರೂಢಿಯಾಗುತ್ತಿದೆ
ಸಂಬಂಧಗಳ ಮೇಲಿನ ನಂಬಿಕೆಯ ತೊರೆದು ಬಾಳುವುದೂ ನಮಗೀಗ ರೂಢಿಯಾಗುತ್ತಿದೆ

ಎಲ್ಲವೂ ರೂಢಿಯಾಗುತ್ತಿದೆ
ಬದಲಾವಣೆಯೇ ಜಗದ ನಿಯಮ ಎಂಬ ಮಾತೆಮಗೆ ರೂಢಿಯಾಗುತ್ತಿದೆ
ಹೊಸ ಹೊಸತರ ನಡುವೆ ಹಳೆಯದನ್ನು ಕಳೆದುಕೊಳ್ಳುವುದೂ ನಮಗೀಗ ರೂಢಿಯಾಗುತ್ತಿದೆ

ಎಲ್ಲವೂ ರೂಢಿಯಾಗುತ್ತಿದೆ
ಏನೂ ಇಲ್ಲದ ಬಾಳಿನಲಿ ಬಂದ ನೀನೇ ನನ್ನ ಜೀವನವಾಗಿದ್ದಿದೆ
ಜೊತೆ ಇಲ್ಲದಿದ್ದರೂ ಒಬ್ಬರೊಳಗೊಬ್ಬರು ಇರುವೆವೆಂಬ ಭ್ರಮೆಯೊಂದಿಗೀ ಜೀವನ ಸಾಗುತ್ತಿದೆ
**************


ಒಬಾಮಾ ತಂದ ಬದಲಾವಣೆ ನಮ್ಮಲ್ಲಿ ಅಸಾಧ್ಯ!!!

15 ಮೇ 09
ಮತ್ತೆ ಬೇಡಿಕೆಯಲ್ಲಿದ್ದಾರೆ ಮಾಯಾ ಜಯಾ ಮತ್ತು ಮಮತಾ
ಇದೀಗ ನೆನಪಿಗೆ ಬರುತಿಹುದೆನಗೆ ನಮ್ಮ ಜಾರ್ಜರ ಸಮತಾ
 
ಚರಿತ್ರೆ ಪುನರಾವರ್ತನೆಯಾಗುವುದೆಂಬ ಮಾತು ಎಷ್ಟು ಸತ್ಯ
ಈ ನಾರೀಮಣಿಗಳು ತಯಾರಿಸೋ ಕಿಚಡಿಯೇ ಎಲ್ಲರಿಗೂ ಪಥ್ಯ
 
ನೂರು ಕೋಟಿ ಜನರಿಗೆ ನೂರಾರು ಪಕ್ಷಗಳು ನಮ್ಮ ದೇಶದಲ್ಲಿ
ಯಾರೆತ್ತ ವಾಲಿದರೂ ಬಹುಮತ ದೊರೆಯದು ಚುನಾವಣೆಯಲ್ಲಿ
 
ಚುನಾವಣೆಗೆ ಮೊದಲು ಬೀದಿ ನಾಯಿಗಳಂತೆ ಕಾದಾಡುವವರು
ಚುನಾವಣೆಯ ನಂತರ ಒಂದೇ ನಾಯಿಯ ಮರಿಗಳಂತೆ ಇವರು
 
ದೇಶದ ಸಿಪಾಯಿಯಾಗಲು ಇಲ್ಲಿ ನೂರಾರು ಅರ್ಹತೆಗಳ ಪಟ್ಟಿ
ಆದರೆ ಇರಬೇಕಾಗಿಲ್ಲ ಮಹಾದಂಡನಾಯಕನ ಆರೋಗ್ಯ ಗಟ್ಟಿ
 
ಸರಕಾರೀ ಅಧಿಕಾರಿಯಾಗುವುದಕೆ ಪಡಬೇಕಾದ ಶ್ರಮ ಅಷ್ಟಿಷ್ಟಲ್ಲ
ಅಧಿಕಾರಿಳ ಮೇಲೆ ಅವಿದ್ಯಾವಂತ ಗೂಬೆ ಬಂದು ಕೂರುತಾನಲ್ಲಾ
 
ಅಮೇರಿಕಾದಲ್ಲಿ ಒಬಾಮಾ ತಂದ ಬದಲಾವಣೆ ನಮ್ಮಲ್ಲಿ ಅಸಾಧ್ಯ
ಅಲ್ಲಿ ಎರಡೇ ಪಕ್ಷಗಳು ಇಲ್ಲಿ ಹಾಗಾಗುವ ಸೂಚನೇಯೇ ಇಲ್ಲ ಸದ್ಯ
 
ಅಲ್ಲಿ ಒಂದು ಪಕ್ಷದೊಳಗಣ ಅಭ್ಯರ್ಥಿಯನೂ ಜನರೇ ಆರಿಸುತ್ತಾರೆ
ಇಲ್ಲಿ ಹಾಗಲ್ಲ ಇರುವ ಮೂರ್ಖರಲಿ ಶತಮೂರ್ಖನನು ಹೇರುತ್ತಾರೆ
 
ಯಾವ ಸರ್ಕಾರ ಬಂದರೂ ಇಲ್ಲಿ ಬದಲಾವಣೆ ಆಗಲು ಸಾಧ್ಯವಿಲ್ಲ
ನಾಡಿಗೆ ಎರಡೇ ಪಕ್ಷಗಳು ಒಂದೇ ನಾಗರಿಕ ಸಂಹಿತೆ ಆಗಬೇಕಲ್ಲ