ಅಧ್ಯಾತ್ಮ!

16 ಜೂನ್ 12

ಸಖೀ,
ನನ್ನ ಮಾತು ಕೇಳು, ಈ ವೇದ,
ಪುರಾಣ, ಪ್ರವಚನ, ಅಧ್ಯಾತ್ಮ,
ಇವನ್ನು ಕ್ಲಿಷ್ಟಗೊಳಿಸದೇ ಈ ಎರಡು
ವಾಕ್ಯಗಳಲ್ಲಿ ಕಟ್ಟಿದರೆ ಎಲ್ಲರಿಗೂ ಪಥ್ಯ

ನಿಸ್ವಾರ್ಥ ಪ್ರೀತಿ ಇರುವಲ್ಲೆಲ್ಲಾ 
ನೆಲೆಯೂರಿ ನಿಂತಿರುವುದು ದೈವತ್ವ,
ದೈವತ್ವ ಜಾಗೃತವಾಗಿರುವಲ್ಲೆಲ್ಲಾ
ಅಧರ್ಮವಿರದೆ ಧರ್ಮದ್ದೇ ಅಧಿಪತ್ಯ!
*****************


ಪ್ರೀತಿ!

26 ಮೇ 12

ಪ್ರೀತಿ ಎಂದರೆ
ಬರೀ ಕನಸೆಂಬವರು
ಇಲ್ಲಿ ಕೆಲವರು

ಬರೀ ಕನಸಿನಲ್ಲಿಯೇ
ಪ್ರೀತಿಯ ಕಂಡವರು
ಇನ್ನು ಕೆಲವರು

ಕನಸಿನ ಪ್ರೀತಿಯನ್ನು
ನನಸಲ್ಲಿ ಕಂಡವರು
ಇಲ್ಲಿ ಕೆಲವರು

ನನಸಿನ ಪ್ರೀತಿಯನ್ನು
ಕನಸಾಗದಂತೆ
ಕಾಯ್ದುಕೊಂಡವರು
ಇನ್ನು ಕೆಲವರು!
***********


ಅಬ್ಬಾ… ಅವಳ ಮಾತು!

13 ಮೇ 12

“ಅಂದು ಏಕಾಂತದಲ್ಲಿ,
ನನ್ನ ಹಸ್ತದ ಮೇಲೆ 
ನಿನ್ನ ಹಸ್ತವನ್ನು ಇಟ್ಟು,
ನೀನು ನಿನ್ನ ಮುಗ್ಧ 
ಮನಸ್ಸಿನ ಪರಿಚಯವನ್ನು
ನನಗೆ ಮಾಡಿಸಿದಾಗ,
ನಾನು ಕಿಂಚಿತ್ತೂ 
ವಿರೋಧ ವ್ಯಕ್ತಪಡಿಸದೇ, 

“ನನ್ನ ಸ್ಪರ್ಶ
ನಿನ್ನ ಪಾಲಿಗೆ 
ಓರ್ವ ಮಾತೆಯ
ಸ್ಪರ್ಶದಂತಿರಲಿ” 

ಎಂದು ಒಳಗೊಳಗೇ 
ಹಾರೈಸಿದ್ದು,
ನಿನ್ನ ಮೇಲೆ ನನಗೆ
ಪ್ರೀತಿ ಇರಲಿಲ್ಲವೆಂದಲ್ಲ,

ಆದರೆ, ನಮ್ಮ ಪ್ರೀತಿ 
ಕೆಡದೇ ಈಗಿರುವ ಹಾಗೆಯೇ
ಸದಾ ಇರಲಿ ಎಂದು ಅಷ್ಟೇ!”
********************


ಏನನ್ನು ಹೇಳಲಿ… ಏನನ್ನು ಹೇಳದಿರಲಿ?!

13 ಮೇ 12


“ನೀನು ನನ್ ಮೆಸ್ಸೇಜಿಗಾಗಿ
ಕಾಯ್ತಾ ಇರ್ತೀಯಾ…”

“ಇಲ್ಲಾ ಕಣೇ…”

“ಇಲ್ಲಾ ಅನ್ಬೇಡ ….
ನನಗೆ ಗೊತ್ತು ….
ನೀ ಕಾಯ್ತಿರ್ತೀ ಅಂತ…”

“ಮತ್ಯಾಕೆ ಕೇಳ್ದೆ…ಹ…ಹ..ಹ”

“ಅದಿರ್ಲಿ ಬಿಡು …
ಹೇಳೋ …
ನೀನು ನನ್ನನ್ನು
ತುಂಬಾ ತುಂಬಾ ಪ್ರೀತಿಸ್ತೀಯಾ?”

“ಹ.. ಹ..ಹ..”

“ನಗಬೇಡ ಕಣೋ… ಹೇಳೋ…”

“ಹ..ಹ..ಹ”

“ಅಯ್ಯೋ…
ನನ್ ಮನಸ್ಸಲ್ಲಿ
ಒಂದು ಪ್ರಶ್ನೆ ಎದ್ದಿದೆ,
ಅದಕ್ಕೆ ಉತ್ತರ ಕೊಡು ಅಷ್ಟೇ,
ನಗ್ಬೇಡ ಪ್ಲೀಸ್”

“ಆ ಮನಸ್ಸನ್ನೇ ಕೇಳು…
ಅದಕ್ಕೇ ಉತ್ತರ ಗೊತ್ತಿದೆ ಕಣೇ…”

“ಹೇಳೋದಾದ್ರೆ ಹೇಳು…
ಕಾಯ್ತಾ ಇದ್ದೀನಿ”

“ಐ ಲವ್ ಯೂ ಡಿಯರ್…”

“ಛೀ… ಛೀ…
ಹಾಗೆಲ್ಲಾ ಹೇಳ್ಬೇಡಾ…
’ಫೋನ್ ಸ್ವಿಚ್ ಆಫ್’
ಮಾಡಿ ಬಿಡ್ತೇನೆ…
ಅಷ್ಟೇ !”
*** 


ಪ್ರೀತಿಯನು ಅರಿಯಲು…!

13 ಮೇ 12

ಸಂಬಂಧಗಳ ನಡುವೆ
ಅನುಕಂಪಗಿಟ್ಟಿಸಿಕೊಂಡು
ಬಾಳುವುದು ಅಸಹನೀಯ,

ಸದಾಕಾಲ ಪರರ
ಅನುಕಂಪವ ನಿರೀಕ್ಷಿಸುತ್ತಲೇ
ಇರುವವರ ಬದುಕು ಶೊಚನೀಯ;

ಪ್ರೀತಿ ಕೊಡುವುದರ ಹೆಸರು.
ಪಡೆಯುವುದರ ಹೆಸರಲ್ಲ,

ಪ್ರೀತಿ ಬಯಸುವುದು ಕಡಿಮೆ,
ಆದರೆ ಸದಾ ನೀಡುವುದು ಎಲ್ಲಾ;

ಪ್ರೀತಿಯನ್ನು ಅರ್ಥ ಮಾಡಿಕೊಳ್ಳಲು
ಪ್ರೀತಿ ತುಂಬಿದ ಹೃದಯವೇ ಬೇಕು,

ಪ್ರೀತಿ ಮನಸ್ಸಿನ ವಿಷಯವಲ್ಲ,
ಅದು ಹೃದಯಕ್ಕೆ ಸಂಬಂಧಿಸಿದ
ವಿಷಯ ಎನ್ನುವುದನ್ನರಿತರೆ ಸಾಕು!
_______________


ಪ್ರೀತಿ ಎಂದರೆ…!

13 ಮೇ 12

ಪ್ರೀತಿ ಎಂದರೆ
ಮನೆಯಂಗಳದ ಖಾಸಗಿ
ಬಾವಿಯೊಳಗಿನ ನೀರಲ್ಲ.

ಪ್ರೀತಿ ನದಿಯಲ್ಲಿನ
ಹರಿಯುವ  
ನೀರಿನಂತೆ. 

ಅದು ಜೀವನದಿಯ ನೀರು. 

ಓರ್ವನ ಜೀವನದಿಯ
ದಡಗಳ ಮೇಲೆ ನಿಂತಿರುವ
ಹಾಗೂ ದಡಗಳ ಮೇಲೆ
ಹಾದು ಹೋಗುವ,
ಪ್ರತಿಯೊಬ್ಬರ ಪಾಲಿಗೂ
ಆ ನದಿಯ ಪ್ರೀತಿಯ
ನೀರು ದಕ್ಕುತ್ತದೆ. 

ಓರ್ವನ ಜೀವನದಲ್ಲಿ
ಅನ್ಯರು ನಿಭಾಯಿಸುತ್ತಿರುವ
ಪಾತ್ರಗಳಿಗೆ ಅನುಗುಣವಾಗಿ,
ತಮ್ಮ ಭಾವಗಳಿಗೆ ತಕ್ಕುದಾಗಿ,
ಅವರವರ ಹೃದಯಗಳೆಂಬ
ತೆರೆದ ಪಾತ್ರಗಳ
ಗಾತ್ರಗಳಿಗನುಗುಣವಾಗಿ,

ಪ್ರೀತಿಯು ದಕ್ಕುತ್ತದೆ
ಹಾಗೂ

ದಕ್ಕುತ್ತಲೇ ಇರುತ್ತದೆ. 
ತಮ್ಮ ಪಾಲಿಗೆ ದಕ್ಕಿದ್ದು ತಮಗೆ.
ಹಾಗಂತ ಅನ್ಯರೂ
ದಕ್ಕಿಸಿಕೊಳ್ಳಬಾರದೆಂದೇನೂ ಇಲ್ಲ.

ಓರ್ವ ವ್ಯಕ್ತಿಯ ಜೀವನದಿಯ
ದಡದಲ್ಲಿ ನಿಂತಿರುವ
ಪ್ರತಿಯೊಬ್ಬರ ಪಾತ್ರವೂ
ಇನ್ನೊಬ್ಬರ ಪಾತ್ರಕ್ಕಿಂತ ಭಿನ್ನ,
ಅನ್ನುವ ಮಾತಂತೂ ಸತ್ಯ!
______________ 


ನಂಬಿಕೆಯೇ ಬಾರದು ಅನ್ಯರ ಮೇಲೆ!

21 ಏಪ್ರಿಲ್ 12

ಸಖೀ,
ನೀನು ಅರಿತಿರುವ ಮಾತುಗಳನ್ನೆಲ್ಲಾ ನಾನು ಅರಿತಿರಲೇ ಬೇಕೆಂದೇನೂ ಇಲ್ಲ
ನೀನಾಡುವ ಮಾತುಗಳಿಗೆ ಕೊಡುವ ಕಾರಣಗಳು ನಿನಗಷ್ಟೇ ಗೊತ್ತು ನನಗಲ್ಲ

ಕಾರಣಗಳನ್ನು ನನಗೆ ತಿಳಿಸಿ ಮಾತನಾಡಿದರೆ ಮಾತಿನ ಅರ್ಥ ನನಗಾದೀತು
ಏಕೆ ಹೀಗೆ ಮಾತನಾಡುತಿರುವೆ ಎಂದರಿಯದೇ ನನಗೆಲ್ಲಾ ಅಪಾರ್ಥವಾದೀತು

ಮಾತಿಗೆ ಮಾತು ಬೆಳೆದು ವಾತಾವರಣ ಬಿಸಿಯೇರುವುದು ಸರ್ವೇ ಸಾಮಾನ್ಯ
ವಾತಾವರಣವ ತಿಳಿಯಾಗಿಸಿ ಮುನ್ನಡೆಯುವುದನು ಬಿಟ್ಟರೆ ಇಲ್ಲ ಮಾರ್ಗ ಅನ್ಯ

ನಿನ್ನೆ ತನಕ ನಿನಗೆ ನನ್ನ ಮೇಲಿದ್ದ ಆದರಾಭಿಮಾನಕ್ಕೆ ಜವಾಬ್ದಾರಳು ನೀನಷ್ಟೇ
ಇಂದು ಅದು ಬದಲಾಗಿದ್ದರೆ ನಿಜವಾಗಿ ನೀನೇ ಜವಾಬ್ದಾರಳು ಅದಕೆ ನಿನ್ನೆಯಷ್ಟೇ

ಮಳೆ ಬಂದಾಗ ಛತ್ರಿಯನು ಬಳಸಿ ಮಳೆಯಿಂದ ಬಚಾವಾಗಿ, ಮುಂದೆ ಸಾಗಬೇಕು
ಬಿಸಿಲಿನ ಝಳಕ್ಕೆ ಬಾಯಾರಿದಾಗ ನೀರು ಕುಡಿದು ಅದನು ಪರಿಹರಿಸಿಕೊಳ್ಳಬೇಕು

ಇಲ್ಲಿ ಎಲ್ಲವೂ ಕ್ಷಣಿಕ, ವಿಷಯ, ವಸ್ತು, ಮಾತು, ಕೋಪ, ಹಾಗೇ ಮನುಷ್ಯರೂ ಕೂಡ
ಆದರೆ ಸದಾ ಸಾಗುತ್ತಾ ಇರುವುದು ನಮ್ಮ ಜೊತೆಗೆ ನಮ್ಮಲ್ಲಿನ ಪ್ರೀತಿಯಷ್ಟೇ ನೋಡ

ಪ್ರೀತಿಸಿದವರೇ ಕೈಕೊಟ್ಟು ದೂರವಾದರೆ ಮತ್ತೀ ಒಂಟಿ ಜೀವನ ಕಾಡುವುದು ಬಿಡದೇ
ನಂಬಿಕೆ ಬಾರದು ಅನ್ಯರ ಮೇಲೆ, ಬಾಳಬೇಕಾಗಬಹುದು ಯಾರೊಂದಿಗೂ ಸೇರದೇ!

***************************


ಸದ್ದಿಲ್ಲದೇ…!

15 ಸೆಪ್ಟೆಂ 11

ಸದ್ದಿಲ್ಲದೇ
ಮನದೊಳಗೆ
ಲಗ್ಗೆಯಿಟ್ಟವರೊಂದಿಗೆ
ಸದ್ದಿಲ್ಲದೇ
ಬೆಳೆದುಬಿಡುವುದು
ಗಾಢ ಸ್ನೇಹ,

ಸದ್ದಿಲ್ಲದೇ
ಮನದಿಂದ
ಹೃದಯದೊಳಗೆ
ಇಳಿದವರೊಂದಿಗೆ
ಸದ್ದಿಲ್ಲದೇ
ಅಂಕುರಿಸಿಬಿಡುವುದು
ಗಾಢವಾದ ಪ್ರೀತಿ,

ಒಳ್ಳೆಯದೆಲ್ಲವೂ
ಹೀಗೆಯೇ
ಸದ್ದಿಲ್ಲದೇ
ನಡೆಯುತ್ತಿರುತ್ತವೆ;

ಆದರೆ,
ಕ್ರೋಧ,
ದ್ವೇಷ,
ಮತ್ಸರ,
ಈ ಮನದಲ್ಲಿ
ಮನೆಮಾಡಿದಾಗ,
ಅವು ಎಲ್ಲಿಲ್ಲದ
ಸದ್ದು ಮಾಡುತ್ತವೆ,
ಹಗಲಿರುಳೂ
ರಂಪ ಮಾಡುತ್ತವೆ,
ಊರಿನುದ್ದಗಲಕ್ಕೂ
ಡಂಗುರ ಸಾರುತ್ತವೆ!
***


ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ!

01 ಸೆಪ್ಟೆಂ 11

ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ
ಕಾಲುಗಳೇ ಜೊತೆ ನೀಡದಿರಲು ಪಯಣಿಗನೇನ ಮಾಡುವ?
ಲೆಕ್ಕಕ್ಕಷ್ಟೇ ಸಹೃದಯರು ಸಹಪಯಣಿಗರೂ ಇಹರಿಲ್ಲಿ
ಮುಂದೆ ಬಂದು ಕೈಯ ಯಾರೂ ನೀಡದಿರೆ ಏನ ಮಾಡುವ?

||ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ||

ಮುಳುಗುವವಗೆ ಹುಲ್ಲು ಕಡ್ಡೀ ಆಸರೆಯೇ ಬಲು ದೊಡ್ಡದು
ಮನದ ಭಯವ ಮರೆಸುವುದಕೆ ಸಣ್ಣ ಸನ್ನೆಯೇ ದೊಡ್ಡದು
ಅಷ್ಟರಲ್ಲೇ ಮುಗಿಲಿನಿಂದ ಸಿಡಿಲು ಬಡಿದು ಬಿದ್ದರೆ
ಮುಳುಗುವವನು ಮುಳುಗದೇ ತಾ ಬೇರೆ ಏನ ಮಾಡುವ||

||ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ||

ಪ್ರೀತಿಸುವುದನೇ ತಪ್ಪೆನ್ನುವುದಾದ್ರೆ ತಪ್ಪು ನನ್ನಿಂದಾಗಿದೆ
ಕ್ಷಮೆಯೇ ನೀಡಲು ಆಗದಂತ ಅಪರಾಧ ಇದಾಗಿದೆ
ನಿರ್ದಯಿ ಈ ಜನತೆಯೂ, ನನ್ನ ಸಖಿಯೂ ನಿರ್ದಯೀ
ನನ್ನವರೆಂದು ಹೇಗೆ ಅನ್ನಲಿ, ಹೇಗೆ ಧೈರ್ಯ ತಾಳಲಿ||

||ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ||

ಇದು ಇನ್ನೊಂದು ಭಾವಾನುವಾದದ ಯತ್ನ

ಮೂಲ ಗೀತೆ:
ಚಿತ್ರ : ಶರಾಬಿ
ಗಾಯಕರು: ಕಿಶೋರ್ ಕುಮಾರ್
ಸಂಗೀತ: ಬಪ್ಪಿ ಲಹರಿ

ಮಂಝಿಲೇಂ ಹೈಂ ಅಪ್ನೀ ಜಗಹ್ ರಾಸ್ತೇ ಅಪ್ನೀ ಜಗಹ್
ಜಬ್ ಕದಮ್ ಹೀ ಸಾಥ್ ನ ದೇ ತೋ ಮುಸಾಫಿರ್ ಕ್ಯಾ ಕರೇ
ಯೂಂ ತೋ ಹೈ ಹಮ್ ದರ್ದ್ ಭೀ ಔರ್ ಹಮ್ ಸಫರ್ ಭೀ ಹೈ ಮೆರಾ
ಬಡ್ ಕೇ ಕೋಯೀ ಹಾಥ್ ನಾ ದೇ ದಿಲ್ ಭಲಾ ಫಿರ್ ಕ್ಯಾ ಕರೇ

||ಮಂಝಿಲೇಂ ಹೈಂ ಅಪ್ನೀ ಜಗಹ್ ರಾಸ್ತೇ ಅಪ್ನೀ ಜಗಹ್||

ಡೂಭ್‍ನೇ ವಾಲೇ ಕೋ ತಿನ್ ಕೇ ಕಾ ಸಹಾರಾ ಹೀ ಬಹುತ್
ದಿಲ್ ಬಹಲ್ ಜಾಯೇ ಫಖತ್ ಇತ್ನಾ ಇಶಾರಾ ಹೀ ಬಹುತ್
ಇತ್ನೇ ಪರ್ ಭೀ ಆಸ್ಮಾನ್ ವಾಲಾ ಗಿರಾ ದೇ ಬಿಜಲಿಯಾಂ
ಕೋಯಿ ಬತ್ ಲಾದೇ ಝರಾ ಯೆಹ್ ಡೂಬ್‍ತಾ ಫಿರ್ ಕ್ಯಾ ಕರೇ

||ಮಂಝಿಲೇಂ ಹೈಂ ಅಪ್ನೀ ಜಗಹ್ ರಾಸ್ತೇ ಅಪ್ನೀ ಜಗಹ್||

ಪ್ಯಾರ್ ಕರ‍್ನಾ ಝುರ್ಮ್ ಹೈ ತೋ ಝುರ್ಮ್ ಹಮ್‍ ಸೇ ಹೋಗಯಾ
ಕಾಬಿಲ್-ಎ-ಮಾಫೀ ಹುವಾ ಕರ‍್ತೇ ನಹೀಂ ಐಸೇ ಗುನಾಹ್
ಸಂಗ್ ದಿಲ್ ಹೈ ಯೆಹ್ ಜಹಾಂ ಔರ್ ಸಂಗ್ ದಿಲ್ ಮೇರಾ ಸನಮ್
ಕ್ಯಾ ಕರೇ ಜೋಶ್-ಎ-ಜುನೂನ್ ಔರ್ ಹೌಸ್‍ಲಾ ಫಿರ್ ಕ್ಯಾ ಕರೇ

||ಮಂಝಿಲೇಂ ಹೈಂ ಅಪ್ನೀ ಜಗಹ್ ರಾಸ್ತೇ ಅಪ್ನೀ ಜಗಹ್||


ಇನಿಯಾ… ಇನಿಯಾ…!

24 ಆಗಸ್ಟ್ 11

ಬಯಸುವುದಿಲ್ಲ ನಾನು ಮುತ್ತು ರತ್ನಗಳನೆಂದೂ
ನಮ್ಮ ಮಿಲನದ ಆಸೆಯಷ್ಟೇ ನನ್ನ ಮನದಲಿಹುದಿಂದು
ನಾ ನಿನ್ನವಳು…ಇನಿಯಾ
ನೀನು ನನ್ನವನು…
ಇನಿಯಾ… ಇನಿಯಾ…!

ಪ್ರೀತಿಯಲಿ ನೀನು ನನ್ನನ್ನೊಮ್ಮೆ ಸ್ಪರ್ಶಿಸಲು
ನಿರಾಯಾಸದಿ ನಾನು ಪ್ರಾಣ ಬಿಡುವೆ
ನೀನು ನನ್ನ ಬಾಹುಗಳಲ್ಲಿ ಬಂದರೆ
ನಿನ್ನಲ್ಲೇ ನಾನು ಹುದುಗಿ ಹೋಗುವೆ
ನಿನ್ನ ಹೆಸರಲ್ಲೇ ಕಳೆದು ಹೋಗುವೆ
ಇನಿಯಾ… ಇನಿಯಾ…!

ನನ್ನ ಹಗಲುಗಳು ಖುಷಿಯಲ್ಲಿ ಕುಣಿದಿವೆ
ನನ್ನ ರಾತ್ರಿಗಳೂ ಹಾಡುತ್ತಲಿವೆ
ಕ್ಷಣ ಕ್ಷಣವೂ ಮೋಡಿ ಮಾಡುತ್ತಿವೆ ಸಾಗುತಿಹ ಈ ದಿನಗಳು
ನಿನ್ನನ್ನು ಪಡೆದು ನಾ ಕಳೆದುಕೊಳ್ಳಲೇ
ನಿನಗಾಗಿ ನಾನು ಪ್ರಾಣ ನೀಡಲೇ
ನಿನಗಾಗಿ ನಾನೇನೇನು ಮಾಡಲಿ
ನಾನಿನ್ನ ಪೂಜೆಯನು ಮಾಡಲೇ
ನಿನ್ನ ಹೆಸರಿನೊಂದಿಗೇ ಬೆಸೆದಿದೆ ನನ್ನೆಲ್ಲಾ ಸಂಬಂಧವೂ
ಇನಿಯಾ… ಇನಿಯಾ…!

ಮುದ ನೀಡುವ ಈ ಮತ್ತು ಏರುತ್ತಾ ಸಾಗಿದೆ
ಒಲವಿಂದ ಯಾರೋ ತಲೆಯ ಸೆರಗ ಸರಿಸಿದಂತಿದೆ
ಈ ಮನವೀಗ ಪೂರ್ತಿ ಸೋತಿದೆ, ನನ್ನ ಜಗವೀಗ ನೋಡು ಬೆಳಗಿದೆ
ಈ ನವ ನವೀನ ಮದುಮಗಳು,ನಿನ್ನ ಜೋಗಿನಿಯಾದಂತಾಗಿದೆ
ಯಾರೋ ಪ್ರೇಮದ ಪೂಜಾರಿ ದೇವಾಲಯವ ಅಣಿಗಳಿಸುವಂತಿದೆ
ಇನಿಯಾ… ಇನಿಯಾ…!

ಬಯಸುವುದಿಲ್ಲ ನಾನು ಮುತ್ತು ರತ್ನಗಳನೆಂದೂ
ನಮ್ಮ ಮಿಲನದ ಆಸೆ ನನ್ನ ಮನದಲಿಹುದಿಂದು
ಅರಿಯೆ ನಾನು
ಅರಿತಿಹೆ ನೀನು
ನಾನು ನಿನ್ನವಳು…
ನೀನು ನನ್ನವನು…
ಅರಿಯೆ ನಾನು
ಅರಿತಿರಿವೆ ನೀನು
ನಾ ನಿನ್ನವಳು…ನೀನು ನನ್ನವನು…
ಇನಿಯಾ… ಇನಿಯಾ…!
**************

ಇನ್ನೊಂದು ಭಾವಾನುವಾದದ ಯತ್ನ
ಮೂಲ ಹಿಂದೀ ಗೀತೆ:
ಗಾಯಕರು: ಕೈಲಾಶ್ ಖೇರ್
ಹೀರೇ ಮೋತೀ ಮೈ ನಾ ಚಾಹೂಂ
ಮೈ ತೋ ಚಾಹೂಂ ಸಂಗಮ್ ತೇರಾ
ಮೈ ತೋ ತೇರೀ ಸೈಯ್ಯಾಂ
ತೂ ಹಿ ಮೇರಾ
ಸೈಯ್ಯಾಂ… ಸೈಯ್ಯಾಂ…

ತೂ ಜೋ ಚೂಲೇ ಪ್ಯಾರ್ ಸೇ
ಆರಾಮ್ ಸೆ ಮರ್ ಜಾವೂಂ
ಆಜಾ ಚಂದಾ ಬಾಹೋಂ ಮೆ
ತುಜ್ ಮೆ ಹೀ ಗುಮ್ ಹೋ ಜಾವೂಂ ಮೈ
ತೇರೇ ನಾಮ್ ಮೆ ಖೋ ಜಾವೂಂ
ಸೈಯ್ಯಾಂ… ಸೈಯ್ಯಾಂ…

ಮೇರೇ ದಿನ್ ಖುಷೀ ಸೇ ಝೂಮೇ, ಗಾಯೇ ರಾತೇಂ
ಪಲ್ ಪಲ್ ಮುಝೆ ದುಬಾಯೇ ಜಾತೇ ಜಾತೇ
ತುಝೆ ಜೀತ್ ಜೀತ್ ಹಾರೂಂ
ಯೆಹ್ ಪ್ರಾಣ್ ಪ್ರಾಣ್ ವಾರೂಂ
ಹೈ ಐಸೆ ಮೈ ನಿಹಾರೂಂ
ತೇರೀ ಆರತೀ ಉತಾರೂಂ
ತೇರೇ ನಾಮ್ ಸೇ ಜುಡೇ ಹಈಮ್ ಸಾರೇ ನಾತೇ
ಸೈಯ್ಯಾಂ… ಸೈಯ್ಯಾಂ…

ಯೆಹ್ ನರ್ಮ್ ನರ್ಮ್ ನಶಾ ಹೈ ಬಡ್ ತಾ ಜಾಯೇ
ಕೋಯೀ ಪ್ಯಾರ್ ಸೇ  ಘೂಂಘಟ್ ದೇತಾ ಉಟಾಯೇ
ಅಬ್ ಭಾವ್‍ರಾ ಹುವಾ ಮನ್
ಜಗ್ ಹೋ ಗಯಾ ಹೈ ರೋಶನ್
ಯೆಹ್ ನಯೀ ನಯೀ ಸುಹಾಗನ್
ಹೊ ಗಯೀ ಹೈ ತೇರೀ ಜೋಗನ್
ಕೋಯೀ ಪ್ರೇಮ್ ಕೀ ಪುಜಾರನ್ ಮಂದಿರ್ ಸಜಾಯೇ
ಸೈಯ್ಯಾಂ… ಸೈಯ್ಯಾಂ…
ಸೈಯ್ಯಾಂ… ಸೈಯ್ಯಾಂ…

ಹೀರೇ ಮೋತೀ ಮೈ ನಾ ಚಾಹೂಂ
ಮೈ ತೋ ಚಾಹೂಂ ಸಂಗಮ್ ತೇರಾ
ಮೈ ನಾ ಜಾನೂ
ತೂ ಹೀ ಜಾನೇ
ಮೈ ತೋ ತೇರೀ
ಮೈ ತೋ ತೇರೀ
ತೂ ಹಿ ಮೇರಾ
ಮೈ ನಾ ಜಾನೂ
ತೂ ಹೀ ಜಾನೇ
ಮೈ ತೋ ತೇರೀ
ತೂ ಹಿ ಮೇರಾ
ಮೈ ತೋ ತೇರೀ
ತೂ ಹಿ ಮೇರಾ
***********