ಕಾಡುವ ಪ್ರಶ್ನೆಗಳು!

16 ಸೆಪ್ಟೆಂ 10

 

ಪರಿಪಕ್ವವಾದ
ತೊಂಬತ್ತರ
ಇಳಿವಯಸ್ಸಿನಲ್ಲಿ,

ಕಾಯುತ್ತಿದ್ದರೂ
ಯಮರಾಜ
ಮನೆ ಬಾಗಿಲಿನಲ್ಲಿ,

ಅದ್ಯಾವುದೋ
ಅವ್ಯಕ್ತ ಸೆಳೆತಕ್ಕೆ
ಒಳಗಾಗಿ,

ದಿಢೀರನೇ
ಆತ್ಮಹತ್ಯೆಗೆ
ಶರಣಾಗಿ,

ಇಹಲೋಕ
ತ್ಯಜಿಸಿದವರ
ನೆನೆದು ನಾ
ನಿಜದಿ ಏನನ್ನಲಿ?

ತೃಪ್ತನಾಗನು
ಮನುಜ
ಪರಿಪಕ್ವನಾದರೂ,

ಹತ್ತಿಕ್ಕಲಾರ ತನ್ನ
ಆಸೆಗಳ, ಎಲ್ಲವೂ
ಮುಗಿದಿದ್ದರೂ,

ತನ್ನದೇನಿಲ್ಲದಿದ್ದರೂ,
ಎಲ್ಲವೂ ತನ್ನದೇ
ಎಂಬ ಭಾವವಿಹುದು,

ಜವಾಬ್ದಾರನಲ್ಲದೇ
ಇದ್ದರೂ, ಎಲ್ಲದಕೂ
ಮನ ಮರುಗುತಿಹುದು,

ತಾನೆಣಿಸಿದಂತೆ
ತನ್ನವರಿಲ್ಲ ಎಂಬ
ಕೊರಗು ಕಾಡಿರಬಹುದೇ?

ತಾನೆಣಿಸಿದಂತೆ
ತಾನೇ ಬಾಳಿಲ್ಲ ಎಂದಾ
ಆತ್ಮ ತೆರಳಿರಬಹುದೇ?

ಕೆಲವು ಪ್ರಶ್ನೆಗಳು,
ಸದಾ ಪ್ರಶ್ನೆಗಳಾಗೇ
ಉಳಿದು ಬಿಡುವವು,

ನಾವು ಮರೆಯಲು
ಯತ್ನಿಸಿದಷ್ಟೂ ಸದಾ
ನಮ್ಮನ್ನು ಕಾಡುವವು!
***********