ಪ್ರಭೆ-ಪ್ರತಿಭೆ!

26 ಜೂನ್ 12

ಸಖೀ,

ನನ್ನ ಕವನಗಳನ್ನು,
ನನ್ನ ಬರಹಗಳನ್ನು,
ನೀನು ಓದಿ, ಮೆಚ್ಚಿ,
ನನ್ನ ಪ್ರತಿಭೆಯನ್ನು
ಎಷ್ಟು ಹೊಗಳಿದರೂ,
ನಿಜ ಏನೆಂಬುದು,
ನನ್ನಂತೆಯೇ
ನಿನಗೂ ಗೊತ್ತು;

ನಿನ್ನ ಸಾಮಿಪ್ಯದ
ಈ ಸೌಭಾಗ್ಯ ಸದಾ
ಇರುವ, ನನ್ನೊಳಗಿನ
ಪ್ರತಿಭೆಯು ಹೊರ
ಹೊಮ್ಮುವುದು, ನಿನ್ನ
ಒಲವಿನ ಪ್ರಭೆಯ
ಪ್ರಭಾವದಿಂದಾಗಿ
ಮಾತ್ರ, ಯಾವತ್ತೂ!
**********


ನರೇಂದ್ರ ಮಾಡುತಿಹ ಮೋಡಿ!

17 ಸೆಪ್ಟೆಂ 11

ಅಂದು ಆ ನರೇಂದ್ರ ಜ್ಞಾನವನು ಹಂಚಿ
ಅನಿಸಿಕೊಂಡಿದ್ದ ಸ್ವಾಮಿ ವಿವೇಕಾನಂದ

ಈ ನರೇಂದ್ರ ನೀಡಲಿ ಈ ನಮ್ಮ ನಾಡಿನ
ಜನತೆಯ ಮನಗಳಿಗೆಲ್ಲಾ ಮಹದಾನಂದ

ಇಂದು ನರೇಂದ್ರ ಮೋದಿ ತನ್ನತನದಿಂದ
ಮಾಡುತಿಹನು ನಾಡಿನ ಜನತೆಗೆ ಮೋಡಿ

ದೇಶವ ಕಾಡುವ ಸಮಸ್ಯೆಗಳು ಈತನಿಂದ
ಹೋಗುವಂತಾಗಲಿ ದೂರ ದೂರಕೆ ಓಡಿ

ಕತ್ತಲ ಗುಹೆಯೊಳಗೆ ಸುಳಿವ ರವಿಕಿರಣ
ನಮ್ಮ ಕಣ್ಣುಗಳನ್ನು ಕೋರೈಸುವಂತೆ

ರಾಜಕೀಯದ ಆಗಸದಲ್ಲಿ ಹೊಸ ತಾರೆಯ
ಪ್ರಭೆಯೀಗ ನಮಗೆ ಕಾಣಬರುತ್ತಿದೆಯಂತೆ

ಗ್ರಹಣ ಕಾಡದಿರಲಿ, ತನ್ನತನವನ್ನೆಂದಿಗೂ
ಕಳೆದುಕೊಳ್ಳದಿರಲಿ ಎಂಬುದೇ ನಮ್ಮಾಶಯ

ನಮ್ಮ ಮುಂದಿನ ಪೀಳಿಗೆಗೆ ಬಳುವಳಿಯಾಗಿ
ನೀಡುವಂತಾಗಲಿ ಒಂದುತ್ತಮ ಸಮಾಜವ!
*****


ಸ್ವಾತಂತ್ರ್ಯ!

17 ಜೂನ್ 10

 

ಸಖೀ

ಆಗಸದಲಿ ತೇಲುತಿರುವ

ಚಂದಿರನ ಕಂಡಾಗ

ನಿನಗೇನನಿಸಿತ್ತೋ

ನಾನರಿಯೆ

ಆದರೆ ನನಗನ್ನಿಸಿದ್ದಿಷ್ಟು

 

ಕೋಟಿ ನಕ್ಷತ್ರಗಳ ನಡುವೆ

ಪ್ರಕಾಶಮಾನನಾಗಿ

ನಗುತಿದ್ದರೂ ತನ್ನ

ಪ್ರಭೆಯನ್ನು ಕಳೆದುಕೊಳ್ಳುವ

ಭಯ ಸದಾ ಇದೆ ಆತನಲ್ಲಿ

 

ಯಾರದೋ ಬೆಳಕಿಗೆ

ಕನ್ನಡಿ ಹಿಡಿಯುವ ಆತನಿಗೆ

ತನ್ನ ಸ್ವಂತದ್ದೇನಿಲ್ಲವೆಂಬ

ಕೀಳರಿಮೆಯೂ ಇದೆ

 

ಭೂಮಿಯ ಸುತ್ತ ಸದಾ

ಗಾಣದ ಎತ್ತಿನಂತೆ

ಸುತ್ತುತ್ತಿರುವ ಆತನಲ್ಲಿ

ಸ್ವಾತಂತ್ರ್ಯ ಹೀನತೆಯ

ಕೊರಗೂ ಇದೆ

 

ಅಂತೆಯೇ

ನಮ್ಮ ಬಾಳೂ ಕೂಡ

ಇನ್ನೊಬ್ಬರು ಕಟ್ಟಿಕೊಟ್ಟ

ಬುತ್ತಿಯನು ಹೊತ್ತು

ನಡೆವ ನಮಗೆಲ್ಲಿದೆ

ಸ್ವಾತಂತ್ರ್ಯ?

 

ಸ್ವತಂತ್ರರಾಗಿರಲು

ನಕ್ಷತ್ರಗಳಿಗೆ ಸ್ವಂತ

ಪ್ರಭೆ ಇರುವಂತೆ

ಮನುಜನಿಗೆ ಸ್ವಂತ

ಪ್ರತಿಭೆ ಇರಬೇಕು!

***********