ಪ್ರಭೆ-ಪ್ರತಿಭೆ!

26 ಜೂನ್ 12

ಸಖೀ,

ನನ್ನ ಕವನಗಳನ್ನು,
ನನ್ನ ಬರಹಗಳನ್ನು,
ನೀನು ಓದಿ, ಮೆಚ್ಚಿ,
ನನ್ನ ಪ್ರತಿಭೆಯನ್ನು
ಎಷ್ಟು ಹೊಗಳಿದರೂ,
ನಿಜ ಏನೆಂಬುದು,
ನನ್ನಂತೆಯೇ
ನಿನಗೂ ಗೊತ್ತು;

ನಿನ್ನ ಸಾಮಿಪ್ಯದ
ಈ ಸೌಭಾಗ್ಯ ಸದಾ
ಇರುವ, ನನ್ನೊಳಗಿನ
ಪ್ರತಿಭೆಯು ಹೊರ
ಹೊಮ್ಮುವುದು, ನಿನ್ನ
ಒಲವಿನ ಪ್ರಭೆಯ
ಪ್ರಭಾವದಿಂದಾಗಿ
ಮಾತ್ರ, ಯಾವತ್ತೂ!
**********


ಸ್ವಾತಂತ್ರ್ಯ!

17 ಜೂನ್ 10

 

ಸಖೀ

ಆಗಸದಲಿ ತೇಲುತಿರುವ

ಚಂದಿರನ ಕಂಡಾಗ

ನಿನಗೇನನಿಸಿತ್ತೋ

ನಾನರಿಯೆ

ಆದರೆ ನನಗನ್ನಿಸಿದ್ದಿಷ್ಟು

 

ಕೋಟಿ ನಕ್ಷತ್ರಗಳ ನಡುವೆ

ಪ್ರಕಾಶಮಾನನಾಗಿ

ನಗುತಿದ್ದರೂ ತನ್ನ

ಪ್ರಭೆಯನ್ನು ಕಳೆದುಕೊಳ್ಳುವ

ಭಯ ಸದಾ ಇದೆ ಆತನಲ್ಲಿ

 

ಯಾರದೋ ಬೆಳಕಿಗೆ

ಕನ್ನಡಿ ಹಿಡಿಯುವ ಆತನಿಗೆ

ತನ್ನ ಸ್ವಂತದ್ದೇನಿಲ್ಲವೆಂಬ

ಕೀಳರಿಮೆಯೂ ಇದೆ

 

ಭೂಮಿಯ ಸುತ್ತ ಸದಾ

ಗಾಣದ ಎತ್ತಿನಂತೆ

ಸುತ್ತುತ್ತಿರುವ ಆತನಲ್ಲಿ

ಸ್ವಾತಂತ್ರ್ಯ ಹೀನತೆಯ

ಕೊರಗೂ ಇದೆ

 

ಅಂತೆಯೇ

ನಮ್ಮ ಬಾಳೂ ಕೂಡ

ಇನ್ನೊಬ್ಬರು ಕಟ್ಟಿಕೊಟ್ಟ

ಬುತ್ತಿಯನು ಹೊತ್ತು

ನಡೆವ ನಮಗೆಲ್ಲಿದೆ

ಸ್ವಾತಂತ್ರ್ಯ?

 

ಸ್ವತಂತ್ರರಾಗಿರಲು

ನಕ್ಷತ್ರಗಳಿಗೆ ಸ್ವಂತ

ಪ್ರಭೆ ಇರುವಂತೆ

ಮನುಜನಿಗೆ ಸ್ವಂತ

ಪ್ರತಿಭೆ ಇರಬೇಕು!

***********


ಅರ್ಥ ಇಲ್ಲದ ಜೀವನಕೂ ಅರ್ಥ ಇದೆಯೇ..?!!!

03 ಆಗಸ್ಟ್ 09

ಸಂಸಾರದೊಳಗಣ ಚಿತ್ರಹಿಂಸೆಗಳಿಂದ ಬಳಲಿ ಬೆಂಡಾಗಿ
ನೋವ ನುಂಗಿ ಮನದಲಿ ಜಿಗುಪ್ಸೆ ತುಂಬಿಕೊಂಡವನಾಗಿ

ದೇವರಿಗೆ ಮೊರೆ ಇಟ್ಟು ಗೋಗರೆದರೂ ಆತ ಕೇಳದಿದ್ದಾಗ
ಈ ಜೀವನವೇ ಸಾಕೆಂಬ ನಿರ್ಧಾರದತ್ತ ಮನ ವಾಲಿದಾಗ

ಅತ್ತ ಇತ್ತಲಿನ ಮಂದಿ ಕರೆದು ಹೇಳಿದರು ಆತನ ಕಿವಿಯಲ್ಲಿ
ಯಾಕೆ ನಿನಗೀ ವ್ಯಥೆ ನಿನ್ನ ಪ್ರೀತಿಸುವ ನಾವಿರುವೆವು ಇಲ್ಲಿ

ಕರೆದು ನಗಿಸಿ ಪ್ರೀತಿಯ ಮಾತಾಡಲಿದ್ದರೂ ನೂರು ಮಂದಿ
ಜೊತೆಗೆ ಬಾಳುವವರ ಚಿತ್ರಹಿಂಸೆಯಲೇ ಆತ ಸದಾ ಬಂಧಿ

ಮನೆಯ ಹೊರಗೆ ಜನರ ನಕ್ಕು ನಗಿಸಿ ಬಾಳಿದರೂ ಫಲವಿಲ್ಲ
ಮನೆಯ ಒಳಗಿನ ಯಾತನೆಯ ಸಹಿಸಲಾತನಿಗೆ ಸಾಧ್ಯವಿಲ್ಲ

ಪ್ರತಿಭೆಯ ಕೊಂಡಾಡಿ ನಡತೆಗೆ ಸೋತು ಮೆಚ್ಚುವಂತ ಜನರು
ದಿನದಲ್ಲಿ ಇದ್ದರೂ ಸಂಜೆಯ ಮೇಲಾತಗೆ ಜೊತೆ ನೀಡುವರೇನು

ಅರ್ಥ ಇಲ್ಲದ ಜೀವನಕೂ ಅರ್ಥ ತರುವೆನೆಂಬುದು ಮೂರ್ಖತನ
ಎಂದಾತಗೇ ಅರ್ಥ ಮಾಡಿಸಿ ಕಾಡಿಸುತಿದೆ ಆತನನ್ನಿಂದು ಬಡತನ