ದೇವಾ, ನೈವೇದ್ಯ ಸಿಗದಿದ್ದರೆ ಬೇಡ ಕೋಪ!

30 ಆಗಸ್ಟ್ 11

 

ಲಂಚ ಪಡೆಯುವುದೂ ತಪ್ಪು ಹಾಗೂ ಲಂಚ ಕೊಡುವುದೂ ತಪ್ಪು
ಮಹಾತ್ಮ ಹಜಾರೆ ನಮ್ಮೆಲ್ಲರ ಕಣ್ಣು ತೆರೆಸಿದ್ದಾರೆ, ನೀನೂ ಒಪ್ಪು

ಪರರಿಗೆ ಅನ್ಯಾಯವಾಗದಂತೆ ಬಾಳುವುದದು ನಮ್ಮ ಕರ್ತವ್ಯ
ನಮಗೆ ಒಳ್ಳೆಯದಾಗುವಂತೆ ಸಹಕರಿಸುವುದು ನಿನ್ನ ಕರ್ತವ್ಯ

ನಮ್ಮ ಸತ್ಕರ್ಮಗಳೇ ನಮ್ಮನ್ನು ಕಾಪಾಡಬೇಕು ಎಂಬ ನಂಬಿಕೆ
ನಮ್ಮ ಕುಕರ್ಮಗಳಿಂದಲೇ ನಮಗೆ ಶಿಕ್ಷೆ ಎಂಬುವುದೂ ನಂಬಿಕೆ

ನಾವು ಏನೆಂಬುದ ನೀನು ಅರಿತಿರುವೆ ಹಾಗಾಗಿ ನಮಗಿಲ್ಲ ಭಯ
ನಮ್ಮ ಅರ್ಹತೆಗೆ ತಕ್ಕುದಾದುದೇ ದಕ್ಕುವುದು ಅದು ನಿನ್ನ ನ್ಯಾಯ

ಎಲ್ಲವೂ ನಮ್ಮ ಆಚಾರ ವಿಚಾರಗಳಿಂದಲೇ ಆಗಬೇಕು ನಿರ್ಧಾರ
ಹಾಗಾಗಿ ನಿನಗೆ ಲಂಚ ನೀಡಲಾರೆವಿನ್ನು, ಇದು ನಮ್ಮ ನಿರ್ಧಾರ

ಇನ್ನು ನಿನಗೆ  ಪೂಜೆ, ನೈವೇದ್ಯ, ಕಾಣಿಕೆ, ಸಿಗದಿದ್ದರೆ ಬೇಡ ಕೋಪ
ಅಣ್ಣರ ಕಣ್ಣುಗಳಿಗೆಲ್ಲಾದರೂ ಬಿದ್ದರೆ ನಮ್ಮಿಬ್ಬರ ಗತಿ, ಅಯ್ಯೋ ಪಾಪ

ಏಕೆಂದರೆ ಲಂಚ ಪಡೆಯುವುದೂ ತಪ್ಪು, ಲಂಚ ಕೊಡುವುದೂ ತಪ್ಪು
ಮಹಾತ್ಮ ಹಜಾರೆ ನಮ್ಮೆಲ್ಲರ ಕಣ್ಣು ತೆರೆಸಿದ್ದಾರೆ, ನೀನೂ ಒಪ್ಪು!
************************


ತೆರಳಿಬಿಡು ನನ್ನ ನೆನಪಿಂದ ನೀನು!

03 ಜೂನ್ 10

 

ನೀ ನನ್ನ ಬಾಳಿನಲ್ಲಿ

ನೆನಪಾಗೇ ಉಳಿದು ಹೋದೆ

ನೀನಿರದ ಬಾಳು ನಾನು

ನಿನ್ನ ನೆನಪಿನಲ್ಲೇ ಕಳೆದೆ

 

ಆ ದೇವರಂತೆ ಕಂಡೆ

ನನ್ನ ಪಾಲಿಗಾಗ ನೀನು

ನನ್ನ ಪ್ರೀತಿ ಭಕ್ತಿಯಂತೆ

ನಿನ್ನ ಪೂಜಿಸಿದ್ದೆ ನಾನು

 

ನೀ ನನ್ನ ಅರಿಯಲಿಲ್ಲಾ

ನಾ ನಿನ್ನ ಮರೆಯಲಿಲ್ಲಾ

 

||ನೀ ನನ್ನ ಬಾಳಿನಲ್ಲಿ||

 

ಬರಲಾರೆ ನೀನು ಮರಳಿ

ಈ ಸತ್ಯ ನನಗೆ ಗೊತ್ತು

ಸರಿ ಒಮ್ಮೆ ತೆರಳು ನನ್ನ

ನೆನಪಿಂದ ನೀ ಈ ಹೊತ್ತು

 

ನಾ ನಿನ್ನ ಪಡೆಯಲಾರೆ

ನಾ ನಿನ್ನ ಕರೆಯಲಾರೆ

 

||ನೀ ನನ್ನ ಬಾಳಿನಲ್ಲಿ||

**************


ಇದು ನ್ಯಾಯವೇ?

16 ಆಕ್ಟೋ 09
asu013
 
ಹಬ್ಬಗಳು ಬಂದವೆಂದರೆ ಸಾವಿರ ಸಾವಿರ ಬಾಳೆ ಗಿಡಗಳು ಹೀಗೆ ತಮ್ಮ ಜೀವನದ ಕೊನೆಗಾಣುತ್ತವೆ.
 
ಇದು ನ್ಯಾಯವೇ? ಇದು ಯಾವ ದೇವರಿಗೆ ಪ್ರಿಯ?
 
ಪರಿಸರವಾದಿಗಳು, ಪ್ರಕೃತಿ ಪ್ರೇಮಿಗಳು, ಹಸಿರು ಕ್ರಾಂತಿಯ ರೂವಾರಿಗಳು, ಈ ಬಗ್ಗೆ ಯಾಕೆ ಚಕಾರ ಎತ್ತುವುದಿಲ್ಲ?
 
ಪ್ರಾಣಿಗಳ ಬಲಿ ಕೊಡುವುದನ್ನು  ತಪ್ಪು ಎಂದನ್ನಬಹುದಾದರೆ, ಇದನ್ನು ಯಾಕೆ ತಪ್ಪು ಎಂದನ್ನುವುದಿಲ್ಲ ಯಾರೂ?
 
asu012
 
 
ಕಲ್ಲನ್ನು ಕಲ್ಲು ಎಂದು ಭಾವಿಸಿದರೆ, ಅದು ಕಲ್ಲಿಗೆ ಸಲ್ಲುವ ಪೂಜೆ.
 
ಗಿಡ ಮರಗಳನ್ನು ಗಿಡ ಮರಗಳೆಂದು ಭಾವಿಸಿದರೆ, ಅದು ಗಿಡ ಮರಗಳಿಗೆ ಸಲ್ಲುವ ಪೂಜೆ.
 
ದೇವರನ್ನು ದೇವರು ಎಂದು ಭಾವಿಸಿದರೆ, ಅದು ದೇವರಿಗೆ ಸಲ್ಲುವ ಪೂಜೆ.
 
ಮನುಜನನ್ನು ಮನುಜನೆಂದು ಭಾವಿಸಿದರೆ, ಅದು ಮನುಜನಿಗೆ ಸಲ್ಲುವ ಪೂಜೆ.
 
ಆದರೆ ದುರದೃಷ್ಟವಶಾತ್ ಇಲ್ಲಿ ದೇವರು ಕಲ್ಲಾಗಿ ಕಡೆಗಣಿಸಲ್ಪಟ್ಟಿದ್ದಾರೆ. 
 
ಅಲ್ಲದೆ, ಕಲ್ಲುಗಳು ದೇವರುಗಳಾಗಿ ಪೂಜಿಸಿಕೊಳ್ಳುತ್ತಿವೆ.