ಆಸುಮನದಲ್ಲೀಗ ಸುದೀರ್ಘ ಅನಾವೃಷ್ಟಿ!

14 ಸೆಪ್ಟೆಂ 10

ಹಿಂದೆಂದೂ ಕಂಡರಿಯದ
ಸುದೀರ್ಘ ಅನಾವೃಷ್ಟಿ,
ಆಸುಮನದಲ್ಲಿ ಆಗುತ್ತಿಲ್ಲ
ಈಗೇನೂ ಹೊಸಸೃಷ್ಟಿ;

ಏನನ್ನು ಕಂಡರೂ ಈಗ
ಈ ಮನ ಸ್ಪಂದಿಸುತಿಲ್ಲ,
ಏನನ್ನು ಕೇಳಿದರೂ ಈಗ
ಈ ಮನ ಸ್ಪಂದಿಸುತ್ತಿಲ್ಲ;

ಭಾವನೆಗಳ ಬಾವಿಯೇ
ಬತ್ತಿ ಹೋಗಿರುವಂತಿದೆ
ಹೊಸ ಮಾತೇನೂ ಈ
ಮನದಿಂದ ಬಾರದಂತಿದೆ;

ತೋರುತಿದೆ ನಿರಾಸಕ್ತಿ
ಮನಸ್ಸು ಈಗ ಎಲ್ಲದಕೆ,
ಯಾರೋ ಕೈಯೆತ್ತಿ ಶಾಪ
ನೀಡಿದಂತಿದೆ ಈ ಮನಕೆ;

ಕ್ರಿಯೆಯೂ ಇಲ್ಲ, ಇಲ್ಲಿ
ಯಾವ ಪ್ರತಿಕ್ರಿಯೆಯೂ ಇಲ್ಲ,
ಯಾರು ಏನೆಂದರೂ ಇದು
ಹೊರಡಿಸುವುದೇ ಇಲ್ಲ ಸೊಲ್ಲ;

ಅದು ಯಾವುದೋ ಅವ್ಯಕ್ತ
ನಿರೀಕ್ಷೆ ಈ ಮನದೊಳಗೆ,
ಏನನ್ನೋ ಕೇಳಬಯಸುವ
ಆಸೆ ಇದೆ ನನ್ನೀ ಕಿವಿಗಳಿಗೆ;

ಅದು ಯಾವುದರ ನಿರೀಕ್ಷೆ
ಎಂಬುದರ ಅರಿವೇ ಇಲ್ಲ,
ಆದರೆನಗೆ ನಿರೀಕ್ಷೆ ಸದಾ
ಇದೆ ಈ ಮಾತು ಸುಳ್ಳಲ್ಲ;

ಹಾರಿ ಬಂದೀತು ಸಂದೇಶವನು
ಹೊತ್ತ ಪಾರಿವಾಳ ಸದ್ಯದಲೇ,
ಮನವ ತೆರೆದು ಸ್ಪಂದಿಸುವಂತೆ
ಮಾಡೀತು ನಾನು ಅರಿಯದಲೇ;

ಕಾಯುತ್ತೇನೆ ಆ ಶುಭಗಳಿಗೆಗೆ
ಚಾತಕ ಪಕ್ಷಿಯಂತೆ ಹಗಲಿರುಳು,
ಮತ್ತೆ ಕೇಳಿ ನೀವೀ ಆಸುಮನದಲ್ಲಿ
ದಿನವೂ ಹೊಸ ಹೊಸ ಮಾತುಗಳು!
*************


ನನಗೂ ಓದುವಾಸೆ!!!

15 ಏಪ್ರಿಲ್ 09
 
paarivaala4 
ನಾನೂ ಓದಬೇಕೆಂಬಾಸೆ ತುಂಬಿದೆ ನನ್ನೀ ಮನದೊಳಗೆ 
ಊರೂರು ಸುತ್ತಾಡಿ ಬಂದೆನದಕೆ  ಪುಸ್ತಕದಂಗಡಿಯೊಳಗೆ 
 
ಪ್ರೇಮ ಪತ್ರಗಳ ರವಾನಿಸುವ ಕೆಲಸಕ್ಕೆ ಈಗಿಲ್ಲ ಅಷ್ಟು ಬೇಡಿಕೆ 
ಈ ಸಮೋಸಗಳಿಂದಾಗಿ ಈಗ ಇಲ್ಲ ಪತ್ರ ಬರೆಯುವ ವಾಡಿಕೆ 
 
ಓದು ಬರಹ ತಿಳಿಯದ ನಾನಿಳಿಯ ಬಹುದಿತ್ತು ರಾಜಕೀಯಕ್ಕೆ 
ಆದರೆ ರೋಸಿಹೋಗಿದೆ ಮನಸ್ಸು ಅಲ್ಲಿನ ಹೊಲಸು ಕಿತ್ತಾಟಕ್ಕೆ 
 
ಇನ್ನು ಉಳಿದದ್ದೆಂದರೆ ಚಿತ್ರರಂಗದಲಿ ಕೈಯಾಡಿಸುವಾ ಆಸೆ 
ಅದಕ್ಕೆ ಮೊದಲು ಸ್ವಲ್ಪ ಓದು ತಿಳಿದು ತಯಾರಾಗುವ ಆಸೆ 
 
ಮಸಕ್ಕಲಿಯನಾಡಿಸಿ ಕೋಟಿಗಟ್ಟಲೆ ಸಂಪಾದಿಸಿದರಂತೆ 
ನಾನೂ ಎರಡಕ್ಷರ ಕಲಿತರೆ ನನ್ನನ್ನೂ ಕರೆಯಬಹುದಂತೆ 
 
ಓದು ತಿಳಿಯದ ಮಸಕ್ಕಲಿಗೇ ಅಷ್ಟು ಬೇಡಿಕೆ ಇದ್ದಿರುವಾಗ  
ಓದು ಕಲಿತರೆ ಹೆಚ್ಚಿಸಿಕೊಳ್ಳಬಹುದೇನೋ ನನ್ನ ಬೆಲೆ ಆಗ 
 
ಓದು ತಿಳಿಯದ ಮಸಕ್ಕಲಿಗೆ ಅಲ್ಲಿ ಮಾತು ದೊರಕದಂತಾಯ್ತು 
ಓದು ಕಲಿತರೆ ನನ್ನಿಂದ ಆಡಿಸಬಹುದೇನೋ ಎರಡು ಮಾತು 
**************************************** 
ಚಿತ್ರ ಕೃಪೆ: ಶ್ರೀ ಗುರು ಬಾಳಿಗಾ (ಸಂಪದ ಡಾಟ್ ನೆಟ್)