ಮಗೂ, ಅಂದು ನಾ ದಾರಿ ಬಿಡುವೆ!

29 ಜುಲೈ 10
 
 “ನಿನ್ನ ಮೋಹದಿ ನನ್ನ ಬಂಧಿಸಿ

ಈ ಕತ್ತಲಲಿ ಕೂರಿಸದಿರು

ಅಪ್ಪಾ ಬೆಳಕಿಗೆ ಮೈಯೊಡ್ಡುವೆ ದಾರಿಬಿಡು”

 

“ಸುಳ್ಳಲ್ಲ ಮಗು ನಿನ್ನ ಮಾತು

ಅಪ್ಪಂದಿರ ಆಂತರಿಕ ಆತಂಕ

ಇಂದಿನ ಮಗುವಿಗೆ ಹೇಗೆ ಅರಿವಾಗಬೇಕು

 

ಮಗೂ ಸ್ವಾತಂತ್ರ್ಯ ಬೇಕು

ಸ್ವತಂತ್ರರಿಗೂ ಬೇಲಿ ಬೇಕು

ಸ್ವಾತಂತ್ರ್ಯದ ಪರಿಧಿಯಲಿ ನಿನ್ನಪ್ಪನಿರಬೇಕು

 

ಎಲ್ಲವನೂ ಹರಿದೊಗೆದು

ಒದ್ದು ನಡೆದರೆ ಮುಂದೆ

ಸಮಾಜದ ಮುಂದೆ ಬತ್ತಲಾಗಿ ನಿಲಬೇಕು

 

ನಿನ್ನ ಅರಿವಿನ ಮಟ್ಟ

ನೀನರಿತದ್ದೇ ಅಲ್ಲ ಈ ಅಪ್ಪನೂ

ಅರಿಯಬೇಕು ಅರಿತಂದು ನಿನಗೀತ ದಾರಿ ಬಿಡಬೇಕು”

************************


ಜ್ಞಾನ – ವಿಜ್ಞಾನ!

14 ಏಪ್ರಿಲ್ 10

 

ನನ್ನ ಜ್ಞಾನ

ನಿನಗನಿಸಿರಬಹುದು

ಅಜ್ಞಾನವೆಂದು

ನಿನ್ನ ಜ್ಞಾನ

ನನಗನಿಸಿರಬಹುದು

ಅಜ್ಞಾನವೆಂದು

 

ಅರಿತಿರುವೆಯಾ ನೀ

ಈ ಜ್ಞಾನ ಅಜ್ಞಾನಗಳ

ಪರಿಧಿಯ ದಾಟಿ

ನಾವು ಅರಿವು

ಮೂಡಿಸಿಕೊಂಡರೆ

ಅದುವೆ ನಮಗೆ

ವಿಜ್ಞಾನವೆಂದು?!

 

*****