ಅನ್ಯರಿಗಾಗಿ ಹೇಗೆ ಬರೆಯಲಿ?

12 ಆಗಸ್ಟ್ 12

ನಾ ಬರೆದುದನ್ನು ನನ್ನಿಂದ ನಿರೀಕ್ಷಿಸಿರಲಿಲ್ಲ ಅನ್ನುವವರಲ್ಲೊಂದು ವಿನಂತಿ
ನನ್ನಿಂದ ತಾವೇನನ್ನು ನಿರೀಕ್ಷಿಸುತ್ತೀರಿ ಅನ್ನುವುದನ್ನು ಮಾಡಿಕೊಡಿ ಪಟ್ಟಿ;

ನನ್ನನು ಹೀಗೆಯೇ ಇರಬೇಕೆಂದು ಬಯಸಿ ಹಾಕಿಬಿಡಬೇಡಿ ನನ್ನ ಸುತ್ತ ಚೌಕಟ್ಟು
ನನ್ನನ್ನು ನಾನು ಇರುವಂತೆಯೇ ಸ್ವೀಕರಿಸಿ, ನಾ ಬಿಡಲಾರೆ ಎಂದೂ ನನ್ನ ಪಟ್ಟು;

ತಾವು ಬಯಸಿದುದನ್ನು ಬರೆಯಲು ನಾನೇಕೆ ಬೇಕು? ತಾವೇ ಬರೆಯಬಹುದು
ತಮ್ಮ ಮನದಿಂಗಿತವನು ಅರಿತು, ಹೇಳಿ ನಾನೆಂತು ಇಲ್ಲಿ ಬರೆಯಲುಬಹುದು?

ನನ್ನ ಮಾತಿನ ಮೇಲೆ ನನಗೇ ದೃಢತೆ ಇಲ್ಲವಾದರೆ ಬರೆದು ಪ್ರರಯೋಜನವಿಲ್ಲ
ಬರೆಯುವ ಮೊದಲು ಹತ್ತು ಬಾರಿ ಯೋಚಿಸಿ ಬರೆಯುವೆನಿದು ನಿಜಕ್ಕೂ ಸುಳ್ಳಲ್ಲ;

ಆದರೂ ಬರೆದುದೆನ್ನ ಮನಕ್ಕೆ ಇಷ್ಟವಾಗದಿದ್ದಲ್ಲಿ, ನಂತರವೂ ಕಿತ್ತು ಹಾಕಬಹುದು
ನನ್ನ ಮನಕ್ಕೆ ಅರಿವಾಗಬೇಕು, ಬರೀ ಅನ್ಯರಿಗಾಗಿ ನಾನು ಹೇಗೆ ಬರೆಯಬಹುದು?

**************


ಮಾರುಹೋಗದಿರೋಣ ಭಾವಾಭಿವ್ಯಕ್ತಿಗೆ!

27 ಮೇ 12

ಮಾರು ಹೋಗದೇ ಬರಹಗಳಲ್ಲಿ ಕಾಣುವ ಭಾವಾಭಿವ್ಯಕ್ತಿಗೆ
ಓದಿ ಒಮ್ಮೆಗೇ ಆಪ್ತರಾಗದಿರೋಣ ಬರೆಯುವ ವ್ಯಕ್ತಿಗಳಿಗೆ

ಐಶಾರಾಮಿ ಕೋಣೆಗಳಲ್ಲಿ ಕುಳಿತು ಕೊಳೆಗೇರಿಗಳ ಬಗ್ಗೆ
ವೇಶ್ಯೆಯ ಮನೆಯಲ್ಲಿ ಕುಳಿತು ಸತೀ ಸಾವಿತ್ರಿಯರ ಬಗ್ಗೆ

ಬರೆದ ಕವನ ಬರಹಗಳಲ್ಲಿ ತನ್ನನ್ನೂ ತೋರಿಸಿಬಿಡಬಹುದು
ಬೇಡವಿದ್ದಲ್ಲೆಲ್ಲಾ ಸಂವೇದನಾ ಭಾವವ ತೂರಿಸಿಬಿಡಬಹುದು

ಸೃಜನಶೀಲತೆಯನ್ನು ಮನಸಾರೆ ಮೆಚ್ಚಿ ಕೊಂಡಾಡೋಣ
ಬರೆದವರನ್ನು ಎಂದೂ ನಮ್ಮವರನ್ನಾಗಿಸಲೆತ್ನಿಸದಿರೋಣ

ಕೆಲವರಿಗೆ ವೃತ್ತಿ, ಕೆಲವರಿಗೆ ಪ್ರವೃತ್ತಿ, ಬಿಡಲಾಗದ ಹವ್ಯಾಸ
ಯಾವುದೋ ಕಾರಣಕ್ಕಾಗಿ ಮಾಡಿಕೊಂಡಿರುತ್ತಾರೆ ಅಭ್ಯಾಸ

ಅತಿ ನಿರೀಕ್ಷೆಯಿಂದ ಹಿಂಬಾಲಿಸಿದರೆ ಕೊನೆಗೆ ಭ್ರಮನಿರಸನ
ಪರಿಪೂರ್ಣರು ಯಾರಿಹರಿಲ್ಲಿ, ಇದಲ್ಲ ಕತೆ ಬರೀ ಅವನಿವನ!
*******************************