ಕಾಣೆಯಾದಂತೆ ಚಂದಿರ!

09 ಸೆಪ್ಟೆಂ 09
 
 
ರಾತ್ರಿಯ ನೀರವತೆಯಲ್ಲಿ
ನಿನ್ನ ನಿಟ್ಟುಸಿರ ಸದ್ದು
ನಿನಗೆ ಅರಿವಾಗದಂತೇ
ನಾ ಕೇಳಿಸಿಕೊಂಡಿದ್ದೆ ಕದ್ದು
 
ನಿದ್ದೆ ಬರುವುದಿಲ್ಲ ನಿನಗೆ
ನೆಮ್ಮದಿ ಇಲ್ಲಿಲ್ಲ ನನಗೂ
ಪರಸ್ಪರರಿಂದ ಮುಚ್ಚಿಟ್ಟು
ಮಾಡಬೇಕಾಗಿದೆ ಬೆಳಗು
 
ಮಗಳಿಲ್ಲದ ಮನೆಯಿಂದು
ಮೂರ್ತಿರಹಿತ ಮಂದಿರ
ಹುಣ್ಣಿಮೆಯ ರಾತ್ರಿಯಲಿ
ಕಾಣೆಯಾದಂತೆ ಚಂದಿರ
 
ವಸತಿ ನಿಲಯದಲಿ ಮಗಳ
ನಿದ್ದೆ ಕೆಡದಿದ್ದರೆ ಸಾಕು
ತನ್ನ ಗುರಿ ತಲುಪಲು ಆಕೆ
ಶ್ರಮ ಪಡುತಿರಲೇ ಬೇಕು
 
ಇಲ್ಲಿ ನಮ್ಮ ಮನದೊಳಗೆ
ಮಗಳ ನಾವಿರಿಸಿಕೊಳ್ಳಬೇಕು
ಅಲ್ಲಿ ಮಗಳ ಮನದೊಳಗೆ
ನಾವು ಮನೆ ಮಾಡಿರಬೇಕು