ನನಗೆ ನಾಯಿ ಕಲಿಸಿದ ಪಾಠ!

23 ಮಾರ್ಚ್ 12

ನಾನು ಅಂದು ಸಂಜೆ, ಆತ್ರಾಡಿಯ ನಮ್ಮ ಮನೆಯಂಗಳದಲ್ಲಿ ಸುಮ್ಮನೆ ಕೂತಿದ್ದೆ ಕುರ್ಚಿಯ ಮೇಲೆ.

ನಮ್ಮ ಮನೆಯ ನಾಯಿ ಬಾಲ ಅಲ್ಲಾಡಿಸುತ್ತಾ ಬಂತು ಕೂತಿತು ನನ್ನ ಪಕ್ಕದಲ್ಲೇ.
ನನ್ನತ್ತ ಮುಗ್ಧ  ನೋಟ ಬೀರುತ್ತಾ, ತನ್ನ ಮುಂಗಾಲನ್ನು ಎತ್ತಿ ನೀಡಿತು… ಸ್ನೇಹ ಹಸ್ತ ಚಾಚಿತು, ಹಸ್ತ ಲಾಘವ ನಿರೀಕ್ಷಿಸುವವರಂತೆ.
ನಾನು ಅಂಗೈಯನ್ನಗಲಿಸಿ ಚಾಚಿದೆ. ತನ್ನ ಮುಂಗಾಲನ್ನು ನನ್ನ ಹಸ್ತದ ಮೇಲಿರಿಸಿತು… ಕ್ಷಣಕಳೆದು ಕೆಳಗಿರಿಸಿತು!
ಅದ್ಯಾಕೋ,  ಆ ನಾಯಿಯ ಸ್ನೇಹಭಾಷ್ಯ ನನ್ನ ಮನಕೆ ಮುದ ನೀಡಿತು…
ನನ್ನ ಬಂಧುಗಳ ಎಚ್ಚರಿಕೆಯ ನುಡಿಗಳ ನಡುವೆಯೇ, ನಾನು ನನ್ನ ಹಸ್ತವ ಮತ್ತೆ ಚಾಚಿದೆ.

ದುರುಗುಟ್ಟಿಕೊಂಡು ನೋಡುತ್ತಲೇ ಇತ್ತು ಪ್ರತಿಸ್ಪಂದಿಸದೇ… ಮತ್ತೆ ಮತ್ತೆ ಬಾಯ್ಬಿಟ್ಟು ಕೇಳಿದೆ … 
ರೋಸಿಹೋದ ಆ ನಾಯಿ ಗಬಕ್ಕನೇ ನನ್ನ ಮುಂಗೈಗೆ ಬಾಯಿಹಾಕಿ
ತನ್ನ ಮುಂದಿನ ಹಲ್ಲನ್ನು, ಕೈಯೊಳಗೆ ಒತ್ತಿ, ರಕ್ತದ ಓಕುಳಿ ಹರಿಸಿತು…
ನಾನು ನೋವಿನಿಂದ ಕಿರುಚಲು, ಅದು ಎದ್ದು ಎತ್ತಲೋ ಓಡಿ ಹೋಯಿತು!

ಅಂದು ಆ ನಾಯಿ ನನಗೆ ಕಲಿಸಿದ ಪಾಠ:

ಅತಿಯಾದ ಮುದ್ದು, ಈಗ ನಾಯಿಗಳಿಗೂ ಬೇಡವಾಗಿದೆ, ಕಣ್ರೀ!


ನಸುಕಿನಲ್ಲಿ ಹೊರಟಾಗ…!

27 ಆಗಸ್ಟ್ 10

 

ದಿನವೂ ನಸುಕಿನಲ್ಲಿ,
ಮುಂಜಾವಿನ ನಡಿಗೆಗಾಗಿ
ಮನೆಯಿಂದ ಹೊರಟಾಗ,

ಒಂದು ಕಡೆ,
ಕಸದ ರಾಶಿಯಿಂದ
ಪ್ಲಾಸ್ಟಿಕ್ ಆಯುತಿರುವ,
ನಸುಕಿನ ನಿದ್ದೆಯನು
ಮರೆತು ಬಂದಿರುವ
ಹುಡುಗರ ಬಾಳು;

ಇನ್ನೊಂದು ಕಡೆ,
ತಮ್ಮ ಆಸ್ತಿಗೆ ಕನ್ನ
ಹಾಕುತ್ತಿದ್ದೀರೆಂದು,
ಬೊಗಳಿ, ಓಡಿಸಲು
ಯತ್ನಿಸುತ್ತಿರುವ ಬೀದಿ
ನಾಯಿಗಳ ಗೋಳು;

ದೂರದಿಂದ ನನ್ನ
ಕಣ್ಣುಗಳಿಗೆ, ಅವು
ಸಾಲು ಸಾಲಾಗಿ,
ತಲೆಕೆಳಗಾಗಿಸಿದ,
ತುಂಬಿದ
ಗೋಣಿ ಚೀಲಗಳು

ಹತ್ತಿರವಾದಾಗ
ಅಂಗಳವೇ ಇಲ್ಲದ ತಮ್ಮ
ಮನೆಗಳ ಮುಂದೆ
ರಸ್ತೆಗೇ ನೀರು ಸಿಂಪಡಿಸಿ
ರಂಗೋಲಿ ಬಿಡಿಸಲು
ಸಜ್ಜಾಗುತ್ತಿರುವ,
“ನೈಟೀ”ಧಾರೀ
ನಾರೀಮಣಿಗಳು!
********


ಮಂತ್ರಿಯಾಗುವಾಸೆ ಬೀದಿ ನಾಯಿಗಳಿಗೇಕೆ???

13 ನವೆಂ 09

 

 

ನೆರೆ ಪರಿಹಾರದ ಕೆಲಸಕ್ಕೆ ಖರ್ಚಾಗಲಿವೆ ಸಾವಿರಾರು ಕೋಟಿ ರೂಪಾಯಿಗಳು

ಅದಕ್ಕೇ ಮನದಲ್ಲಿ ಮಂತ್ರಿಯಾಗುವಾಸೆ ತುಂಬಿಕೊಂಡಿವೆ ಬೀದಿ ನಾಯಿಗಳು

 

ಅಲ್ಲಿನ ಸಾವಿರ ಸಾವಿರದಲ್ಲಿ ಒಂದೆರಡು ತಮ್ಮ ಕಿಸೆಗೆ ಸೇರಿಸಿಕೊಂಡರೂ ಸಾಕು

ಮುಂದಿನ ಐದಾರು ತಲೆಮಾರೂ ನಿಶ್ಚಿಂತೆಯಿಂದ ನಡೆಸಬಹುದು ತಮ್ಮ ಬದುಕು

 

ಸಭಾಪತಿಯಂತಹ ಗೌರವಾನ್ವಿತ ಹುದ್ದೆಯೂ ಯಾರಿಗೂ ಬೇಡವಾಗಿದೆ ಇಂದು

ಗೌರವ ಬೇಕಿಲ್ಲ ಎಲ್ಲರೂ ಕೇಳುವುದು ದುಡ್ಡು ಮಾಡಲಾಗೋ ಹುದ್ದೆ ಬೇಕೆಂದು

 

ಜನತೆಗೆ ಸಮೀಪವಾಗಿ ಸ್ಪಂದಿಸಿದಷ್ಟೂ ಕಿಸೆಗೆ ಕಾಸು ಸೇರುತ್ತಾ ಇರುತ್ತದೆ ಸರಾಗ

ಕಾಸು ಮಾಡಿಕೊಂಡರೆ ತಾನೇ ಮಂದಿನ ಚುನಾವಣೆಯಲ್ಲಿ ಗೆಲ್ಲಬಹುದು ನೀವಾಗ

 

ಶೋಭ ಇದ್ದಿದ್ದರೆ ಕಾಸು ಮಾಡಲಾಗುತ್ತಿರಲಿಲ್ಲ ಎನ್ನುವುದೆಲ್ಲರಾಡುವ ಪಿಸುಮಾತು

ಆದರೆ ಯಡ್ಡಿ ಮಕ್ಕಳೂ ಇದರಲ್ಲಿ ಕಡಿಮೆ ಇಲ್ಲ ಎನ್ನುವುದೀಗ ಬೀದಿ ಬೀದಿ ಮಾತು

 

ದೇವರಾಣೆ ಹಾಕಿ ಮತ್ತೆ ಮಗನನ್ನು ಸಂಸದನನ್ನಾಗಿಸಿದ ಯಡ್ಡಿಯ ಆ ಮಹಾ ತಪ್ಪು

ಸಾರ್ವಜನಿಕವಾಗಿ ಕಣ್ಣೀರಿಳಿಸುವಂತೆ ಮಾಡಿತೀಗ ಮೋರೆಗೆ ಬಳಿದಂತೆ ಮಸಿ ಕಪ್ಪು

**********************************************