ನನ್ನಾಕೆ ಇಲ್ಲದಾಗ ಮತ್ತೆ ಬರುವಿರಂತೆ ಈಗ ಹೊರಡಿ!!!

26 ಮೇ 09
ಜ್ವರ ಬಂದು ಹೋದ ಮೇಲೆ ಕೆಮ್ಮು ಈಗ ಉಳಿದಿದೆ
ತಲೆ ನೋವು ಕಾಡುತಿಹುದು ಮೂಗು ಮೋರಿ ಆಗಿದೆ
 
ಮೈಕೈ ಎಲ್ಲಾ ನೋವು ಯಾರೋ ಹಿಡಿದು ಗುದ್ದಿರುವಂತಿದೆ
ತುಂಬಿದ ಸಿಟಿ ಬಸ್ಸಲ್ಲಿ ನಿಂತೇ ಪಯಣ ಮುಗಿಸಿ ಇಳಿದಂತಿದೆ
 
ಬೆಂಗಳೂರ ಹವಾಮಾನದಲ್ಲಿ ಏರು ಪೇರು ಸಾಮಾನ್ಯಾನೇ
ಎಲ್ಲಾ ದಿನವೂ ಒಂದೇ ತೆರನಿರದು ಭಾವನೆಗಳೂ ಹಾಗೇನೇ
 
ವಿಷಯ ನೂರಾರು ಇದ್ದರೂ ಈಗ ಬರೆಯಲೇನೂ ತೋಚದು
ಮಾತು ಹೊರಬರುವ ಮೊದಲೇ ಕೆಮ್ಮು ಮಾತನೇ ತಡೆವುದು
 
ಶೀತ, ಜ್ವರ, ಕೆಮ್ಮು ಇವೆಲ್ಲಾ ಜೊತೆಜೊತೆಗೆ ಅಲ್ಲ ಬೇರೆ ಬೇರೆ
ಕೆಮ್ಮಗಿನ್ನು ನಾಲ್ಕುದಿನ ಮತ್ತದರ ದಾರಿ ಬೇರೆ ನಂದೇ ಬೇರೆ
 
ಒಂಟಿಯಾಗಿ ಬಾಳಲಾರ ಎಂದು ನನ್ನವಳಿಗೆ ತಿಳಿಸಲೇನೋ
ಆಕೆ ಇಲ್ಲದಾಗಲೇ ಕಾಡುವರು ನನ್ನ ಮೇಲೆ ವೈರವೇನೋ
 
ತವರಿಂದ ಆಕೆ ಮರಳಿ ಬಂದಾಯ್ತು ಇನ್ನಾದರೂ ಬಿಟ್ಟುಬಿಡಿ
ನನ್ನಾಕೆ ಇಲ್ಲದಾಗ ಮತ್ತೆ ಬರುವಿರಂತೆ ಈಗ ನೀವು ಹೊರಡಿ

ಕನಸಾದುದಕೇ…!!!

24 ಏಪ್ರಿಲ್ 09

ಸಖೀ,
ಆ ದೇವರು ಬಂದು,
ನನ್ನೆದುರಲಿ ನಿಂದು,
ವರ ಬೇಡಿಕೋ ಎಂದಾಗ,
ನಿನ್ನನೇ ಬೇಡಿ ಕಟ್ಟಿಕೊಂಡೆ,
ಜೊತೆಗೆ, ಬೇಕಾದಷ್ಟು
ಸಿರಿ ಸಂಪದವನೂ ಪಡೆದುಕೊಂಡೆ;
ನಿನ್ನೊಂದಿಗೆ ಮನ
ಇಚ್ಚಿಸಿದಲ್ಲೆಲ್ಲಾ ವಿಹರಿಸಿ ಬಂದು,
ಬಯಸಿದ್ದನ್ನೆಲ್ಲಾ ಗಡದ್ದಾಗಿ ತಿಂದು,
ಹಗಲೆಲ್ಲಾ ನಿನ್ನೊಂದಿಗೇ
ಮಾತಾಡಿ ಕಳೆದೆ,
ಮತ್ತೆ ರಾತ್ರಿ
ನಿನ್ನ ಬಿಸಿಯಪ್ಪುಗೆಯ
ಸುಖದ ಸೋಪಾನವೇರಿ
ಹಾಯಾಗಿ ನಿದ್ದೆಗಿಳಿದೆ.
ಮುಂಜಾನೆ,
ನನ್ನಾಕೆ ಕೂಗಿ ಎಬ್ಬಿಸಿದಾಗ,
ನಾನಂದುಕೊಂಡೆ
ಇಷ್ಟೆಲ್ಲಾ ಕನಸಲ್ಲೇ
ನಡೆದುದಕೆ ಚೆನ್ನಾಯ್ತೆಂದು,
ಅಲ್ಲಾ, ಸಖೀ,
ನಂಬುತ್ತಿದ್ದಳೇ ನನ್ನಾಕೆ,
ನಿನ್ನನ್ನು ದೇವರೇ
ನನಗೆ ಕಟ್ಟಿ ಕೊಟ್ಟಿದ್ದನೆಂದು?
ಅನ್ನುತ್ತಿರಲಿಲ್ಲವೇ,
ಅವಳನ್ನು ಮರೆತು,
ನಾನಾಗಿಯೇ ನಿನ್ನನ್ನು
ಕಟ್ಟಿಕೊಂಡಿದ್ದೇನೆಂದು?!
*-*-*-*-*-*-*