ಯಾರೋ ಯಾರಿಗೆ ಗೊತ್ತು!

01 ಸೆಪ್ಟೆಂ 12

ಸಖೀ,
ಉಫ್ ಎಂದು ಕೈಚೆಲ್ಲಿ
ಕಣ್ಮುಚ್ಚಿ ಕೂತಾಗ
ನನ್ನೀ ಹಸ್ತಕ್ಕೇ ಮೃದು
ಸ್ಪರ್ಶವಾದಂತಾಯ್ತು

ತನ್ನ ಎರಡೂ ಹಸ್ತಗಳೊಳಗೆ
ನನ್ನ ಹಸ್ತವನ್ನು ತುಂಬಿಕೊಂಡು
ಶಕ್ತಿ ತುಂಬಿದಂತಾಯ್ತು

ಹಣೆಯ ಮೇಲೊಂದು
ಮುತ್ತನ್ನಿಟ್ಟು ನನ್ನ ತಲೆಯ
ಮೇಲೆ ಕೈಯಾಡಿಸಿ
ಹರಸಿದಂತಾಯ್ತು

ನನ್ನ ಕಿವಿಯಲ್ಲಿ ಮೆಲ್ಲನೆ
“ಮುಗಿದಿಲ್ಲ ಪಯಣ,
ಎದ್ದೇಳು ನಡೆ”
ಎಂದು ಉಸುರಿದಂತಾಯ್ತು

ಕಣ್ತೆರೆದು ನೋಡಿದರೆ
ಅಲ್ಲಾರೂ ಕಾಣಿಸದೇ,
ಮನಸಿನೊಳಗೇ
ಯೋಚಿಸುವಂತಾಯ್ತು

ಅಗಲಿಹ ನನ್ನ
ಜನ್ಮದಾತರೋ,
ಈ ನನ್ನ ಮನದೊಳಗೆ
ಮನೆಮಾಡಿ
ಕೂತವರೋ,
ಅವರು ಯಾರೆಂದು
ಯಾರಿಗೆ ಗೊತ್ತು?


ನುಡಿಯಂತೆ ನಡೆಯಿರಿಸಿಕೊಂಡವರೇ ಜಗದಿ ಆದರಣೀಯರು!

28 ಫೆಬ್ರ 11

ನಡೆಯಲರಿಯದವರ ಕೈಹಿಡಿದುಕೊಂಡು
ನಡೆಯ ಕಲಿಸಿ, ಎಲ್ಲರಿಗೂ ಸದಾ ನೀತಿ ಪಾಠ ಮಾಡುತ್ತಿದ್ದರೂ
ಅವರ ಮುಂದೆಯೇ ಬೋರಲಾಗಿ ಬಿದ್ದು, ಗೌರವಕ್ಕೇ ಅಪಾತ್ರರೆನಿಸಿಕೊಂಡರು

ಮನದ ತುಂಬೆಲ್ಲಾ ತುಂಬಿಕೊಂಡು
ಅಭಿಮಾನದಿಂದ ತಲೆಯ ಮೇಲೆತ್ತಿಕೊಂಡು ಸುತ್ತಾಡಿದರೂ
ಕೊನೆಗೆ ತಮ್ಮೆಲ್ಲಾ ಅನಾಚಾರಗಳಿಂದಾಗಿ ನಮ್ಮ ಕಣ್ಮುಂದೆಯೇ ಬೆತ್ತಲಾದರು

ಸಾರ್ವಜನಿಕವಾಗಿ ಮೇಲೇರಿಕೊಂಡು
ತಾನೆಷ್ಟೇ ಸಾಚಾ ಎಂದು ಜಗದ ಮುಂದೆಲ್ಲಾ ತಾ ಮೆರೆದರೂ
ತನ್ನ ಒಳಉಡುಪುಗಳನ್ನೆಲ್ಲಾ ನಡುಬೀದಿಯಲಿ ಒಗೆದು ನಗೆಪಾಟಲಿಗೀಡಾದರು

ಗೌರವ ಸ್ಥಾನಗಳನ್ನು ಸ್ವೀಕರಿಸಿಕೊಂಡು
ಸಾಗುತ್ತಿರುವಾಗ ನಾವು ಅದೆಷ್ಟೇ ದೊಡ್ಡ ಸೌಧವನು ಕಟ್ಟಿದರೂ
ಸೌಧದ ಕಿಟಕಿ ಬಾಗಿಲುಗಳು ಸದಾ ತೆರೆದುಕೊಂಡಿರುವುದೆಂಬುದನೇ ಮರೆತರು

ತಾನು ನುಡಿದಂತೆ ನಡೆಯಿರಿಸಿಕೊಂಡು
ಬಾಳುವುದು ನಿಜದಿ ಬಹು ಸುಲಭಸಾಧ್ಯವಲ್ಲವೆಂದು ಅರಿತಿದ್ದರೂ
ತನ್ನ ನುಡಿಯಂತೆ ನಡೆಯಿರಿಸಿಕೊಂಡು ಬಾಳಿದವರೇ ನಿಜದೀ ಜಗದಿ ಆದರಣೀಯರು!

*****************************************


ನೀನಿಂತಾಗೆನಗೆ ದೇವ ದರ್ಶನವಾಯ್ತು!

17 ಮೇ 10

 

ನಿನ್ನ ನಗುವಲ್ಲಿ ಚಂದಿರನ ಚೆಲುವ ನಾ ಕಂಡೆ

ಚಂದಿರನ ಚೆಲುವಲ್ಲಿ ನಿನ್ನ ಮೊಗವ ನಾ ಕಂಡೆ

 

ನಿನ್ನ ಒಯ್ಯಾರ ನನ್ನ ಮನದಲಿ ಚಿತ್ತಾರವಾಯ್ತು

ನಾ ಬಿಡಿಸಿದ ಚಿತ್ರದಲಿ ನಿನ್ನನ್ನೇ ಕಂಡಂತಾಯ್ತು

 

ನಡೆಯಲ್ಲಿ ಆ ಹಂಸವನೇ ನೀನು ನಾಚಿಸಿದ ಕಂಡೆ

ಹಂಸದ ಆ ನಡೆಯಿಂದ ನಾನಿನ್ನ ನೆನಪಿಸಿಕೊಂಡೆ

 

ನೀನೆನ್ನ ಕೂಗಲು ಕೋಗಿಲೆಯೇ ಕೂಗಿದಂತಾಯ್ತು

ಕೋಗಿಲೆ ಕುಹೂ ಎನಲು ನೀನೇ ಕರೆದಂತಾಯ್ತು

 

ದೇವರ ಧ್ಯಾನದಲ್ಲಿರಲು ಅಲ್ಲಿ ನಿನ್ನ ಕಂಡಂತಾಯ್ತು

ನೀ ಕಣ್ಮುಂದೆ ನಿಂತಾಗೆನಗೆ ದೇವ ದರ್ಶನವಾಯ್ತು

 

ನನ್ನ ಮನದೊಳಗಿಲ್ಲಿ ನಾನಿಲ್ಲ ಬರೀ ನೀನೇ ನೀನು

ನಿನ್ನ ಕಣ್ಣೊಳಗಣ ಬಿಂಬದಲಿ ಬರೀ ನಾನೇ ನಾನು!

*****