ಶುಷ್ಕ ನಗು!

01 ಸೆಪ್ಟೆಂ 12

ಸಖೀ,
ನಾನು ಹೊರಟು 
ನಿಂತಿಹೆನೆಂಬ 
ದು:ಖವನು ನೀನು
ಅದೆಷ್ಟು ಯತ್ನಿಸಿದರೂ 
ಮುಚ್ಚಿಡಲಾಗದು;

ನಿನ್ನೀ ಶುಷ್ಕ ನಗು 
ನಿನ್ನೆಲ್ಲಾ ಶಕ್ತಿಗೂ 
ಮೀರಿ ನಿನ್ನೊಳಗಿನ
ವೇದನೆಯನ್ನು
ಹೊರ ಹೊಮ್ಮಿಸುತಿದೆ,
ನನ್ನಿಂದ ಸಹಿಸಲಾಗದು!

ಚಿತ್ರ ಕೃಪೆ: ಪ್ರಕಾಶ ಹೆಗಡೆನೀ ನಗುತಿರು!

01 ಸೆಪ್ಟೆಂ 12

ಸಖೀ,
ನಿನ್ನ ನಗು
ನನಗಾಗಿಯೇ
ಆಗಿರಬೇಕು
ಎಂದೇನೂ ಇಲ್ಲ, 
ಆದರೆ, ನೀನು 
ಸದಾ ನಗುತಿರು;

ನಿನ್ನ ನಗು
ಸದಾ ಅನ್ಯರನ್ನು 
ನಗಿಸುತ್ತಿರಬೇಕು
ಎಂದೇನೂ ಇಲ್ಲ, 
ಆದರೆ, 
ನಿನ್ನ ನಗುವಲ್ಲಿ 
ಸದಾ ನೀನಿರು!

 


ಮೂರು ಹನಿಗಳು!

13 ಮೇ 12

 

ಪಯಣ!

ನಿನ್ನೂರಿನತ್ತ 
ಸಾಗುವಾಗ 
ಪಯಣ 
ಅದೆಷ್ಟು ಸುಖಕರ!
ನಿನ್ನೂರಿನಿಂದ 
ಮರಳುವಾಗ 
ಪಯಣ 
ಯಾಕೋ ಕಷ್ಟಕರ!


ಹನಿ ಹನಿ!

ಈ ಇಳೆ
ಮೈತುಂಬಿ
ಹಸಿರಿನ
ಬಸಿರಿಂದ
ಶ್ರೀಮಂತವಾಗಲು
ಬೇಕು
ಮೇಘರಾಜನ
ಹನಿ ಹನಿ!

 


ಯಾರಿರಬಹುದು?

ಕನಸಲ್ಲಿ ಕಳುವಾಗಿ
ರಾತ್ರಿಯಿಡೀ ಕಾಡಿದ್ದೆ ನೀನು,
ಹುಡುಕಾಡಿ ಹುಡುಕಾಡಿ
ಸೋತುಹೋಗಿದ್ದೆ ನಾನು,
ಮತ್ತೆ ಬೆಳಗಾಗುವಾಗ
ಮಗ್ಗುಲಲ್ಲೇ ಕಿರುಕಿರುಚಿ
ನನ್ನನ್ನೇ ಎಬ್ಬಿಸಿಬಿಟ್ಟು
ಮುಸಿಮುಸಿ ನಗುವೆಯೇನು!?

*************** 


ಏನನ್ನು ಹೇಳಲಿ… ಏನನ್ನು ಹೇಳದಿರಲಿ?!

13 ಮೇ 12


“ನೀನು ನನ್ ಮೆಸ್ಸೇಜಿಗಾಗಿ
ಕಾಯ್ತಾ ಇರ್ತೀಯಾ…”

“ಇಲ್ಲಾ ಕಣೇ…”

“ಇಲ್ಲಾ ಅನ್ಬೇಡ ….
ನನಗೆ ಗೊತ್ತು ….
ನೀ ಕಾಯ್ತಿರ್ತೀ ಅಂತ…”

“ಮತ್ಯಾಕೆ ಕೇಳ್ದೆ…ಹ…ಹ..ಹ”

“ಅದಿರ್ಲಿ ಬಿಡು …
ಹೇಳೋ …
ನೀನು ನನ್ನನ್ನು
ತುಂಬಾ ತುಂಬಾ ಪ್ರೀತಿಸ್ತೀಯಾ?”

“ಹ.. ಹ..ಹ..”

“ನಗಬೇಡ ಕಣೋ… ಹೇಳೋ…”

“ಹ..ಹ..ಹ”

“ಅಯ್ಯೋ…
ನನ್ ಮನಸ್ಸಲ್ಲಿ
ಒಂದು ಪ್ರಶ್ನೆ ಎದ್ದಿದೆ,
ಅದಕ್ಕೆ ಉತ್ತರ ಕೊಡು ಅಷ್ಟೇ,
ನಗ್ಬೇಡ ಪ್ಲೀಸ್”

“ಆ ಮನಸ್ಸನ್ನೇ ಕೇಳು…
ಅದಕ್ಕೇ ಉತ್ತರ ಗೊತ್ತಿದೆ ಕಣೇ…”

“ಹೇಳೋದಾದ್ರೆ ಹೇಳು…
ಕಾಯ್ತಾ ಇದ್ದೀನಿ”

“ಐ ಲವ್ ಯೂ ಡಿಯರ್…”

“ಛೀ… ಛೀ…
ಹಾಗೆಲ್ಲಾ ಹೇಳ್ಬೇಡಾ…
’ಫೋನ್ ಸ್ವಿಚ್ ಆಫ್’
ಮಾಡಿ ಬಿಡ್ತೇನೆ…
ಅಷ್ಟೇ !”
*** 


ಹುಚ್ಚು ಹುಡುಗಿ…!

03 ಡಿಸೆ 10

 

ಹುಚ್ಚು ಹುಡುಗಿ
ಏನೇನೋ ಕೇಳುತ್ತಿರುತ್ತಾಳೆ
ಪ್ರಶ್ನೆಗಳ ಸುರಿಮಳೆಗೈಯುತ್ತಿರುತ್ತಾಳೆ
ನನ್ನ ಬಾಯ್ಕಟ್ಟಿಸಿ ತಾನು ನಗುತ್ತಾ ಇರುತ್ತಾಳೆ!

ಹುಚ್ಚು ಹುಡುಗಿ
ವಯಸ್ಸಾಗಿಲ್ಲ ನನ್ನ ಅರ್ಧದಷ್ಟೂ
ತಲೆ ತುಂಬಾ ತುಂಬಿಕೊಂಡಂತಿದೆ ಬೆಟ್ಟದಷ್ಟು
ಹೊಗಳುತ್ತಿರುತ್ತಾಳೆ ನನ್ನನ್ನು ಅಷ್ಟೊಂದು ಇಷ್ಟಪಟ್ಟು!

ಹುಚ್ಚು ಹುಡುಗಿ
ಮನದ ನೋವ ಮರೆ ಮಾಚುತ್ತಾಳೆ
ನಗುವಿನ ಮುಖವಾಡ ಹೊತ್ತು ನಗುತ್ತಿರುತ್ತಾಳೆ
ನನ್ನ ಅರಿವಿಗೆ ತಾರದಿರಲು ಯತ್ನಿಸಿ ಸೋಲುತ್ತಿರುತ್ತಾಳೆ!

ಹುಚ್ಚು ಹುಡುಗಿ
ನನಗೇ ಪಾಠ ಮಾಡುತ್ತಿರುತ್ತಾಳೆ
ನನ್ನ ಜೀವನದ ಅನುಭವ ಏನೂ ಅಲ್ಲ ಅನ್ನುತ್ತಾಳೆ
ತನ್ನ ಮುಂದೆ ನನ್ನನ್ನು ಕಿರಿದಾಗಿಸಿ ತಾನು ಹಿರಿಯಳಾಗುತ್ತಾಳೆ!
*****************


ಹೇಳು ಬೇರೇನು ಬೇಕು!

10 ಜುಲೈ 10

ಸಖೀ, 

 

ನಿನ್ನ ನಗುವಿನಲ್ಲಿ ಅದೇನೋ ಇದೆ ಹೊಸತು

ಆ ಕಣ್ಣುಗಳಲ್ಲಿ ನಿಜಕ್ಕೂ ಅದೇನೋ ಮಾತು

 

ನೀ ನನ್ನಲ್ಲಿ ಏನೇನೋ ನುಡಿಯುತಿರುವಂತೆ

ನಾನು ದೇಹವೆಲ್ಲಾ ಕಿವಿಯಾಗಿ ಆಲಿಸುವಂತೆ

 

ಎಲ್ಲಿ ಕಲಿತೆ ಕಣ್ಣುಗಳಲ್ಲೇ ಮಾತನಾಡೋ ವಿದ್ಯೆ?

ನಗುವಿನಲ್ಲೇ ನನ್ನ ಈ ತರಹ ಬಂಧಿಸಿಡುವ ವಿದ್ಯೆ?

 

ಬಯಸಿದರೂ ನನಗೆ ಈಗ ಮಾತೇ ಬರುವುದಿಲ್ಲ

ಆ ಮೊಗವ ನೋಡುವ ನನ್ನೀ ದೃಷ್ಟಿ ಕದಲುವುದಿಲ್ಲ

 

ಮಾತುಕತೆ ಒಂದೂ ಬೇಡ ನೋಟವೊಂದೇ ಸಾಕು

ನಿನ್ನ ಸನಿಹ ಇದ್ದರೆನಗೆ ಹೇಳು ಬೇರೆ ಏನು ಬೇಕು?

*************************


ನಕ್ಕುಬಿಡು ಇಂದೇ!

11 ಜೂನ್ 10

 

ಸಖೀ

ನೀನು ಮುಖ

ಸಿಂಡರಿಸಿಕೊಂಡಿದ್ದಾಗ

ನನ್ನ ಪಾಲಿಗೆ

ದಿನವೂ ಅಮವಾಸ್ಯೆ

 

ಇಂದು ನಿನ್ನ

ಮುಗುಳ್ನಗೆ ಕಂಡ ನನಗೆ

ಪಾಡ್ಯದ-ಬಿದಿಗೆಯ

ಚಂದ್ರನ ದರುಶನವಾಯ್ತು

 

ನನಗೀಗ ಆ ನಾಳಿನ

ನೀನು ಪೂರ್ತಿ ನಕ್ಕಾಗ ಸಿಗುವ

ಪೂರ್ಣಚಂದ್ರ ದರುಶನದ

ಹುಣ್ಣಿಮೆಯ ನಿರೀಕ್ಷೆ

 

ಏಕೆ ಕಾಯಿಸುವೆ

ಸುಮ್ಮನೆ ಸತಾಯಿಸುವೆ

 

ನಕ್ಕು ಬಿಡಬಾರದೇಕೆ

ಪೂರ್ಣಚಂದ್ರನ ದರುಶನ

ನನಗೆ ಮಾಡಿಸಬಾರದೇಕೆ

 

ನಿನಗೆಲ್ಲಿಯ ಕಟ್ಟುಕಟ್ಟಳೆ

ಆ ಚಂದ್ರನಿಗಿರುವಂತೆ

 

ನಕ್ಕುಬಿಡು ಇಂದೇ

ನಮ್ಮ ಮನದಂಗಳದಿ

ಬೆಳದಿಂಗಳ ಚೆಲ್ಲಿಬಿಡು ಇಂದೇ

 

ಏಕೆ ಕಾಯಿಸುವೆ

ಸುಮ್ಮನೆ ಸತಾಯಿಸುವೆ

************


ಪಂಚಾಂಗ ನನಗನಗತ್ಯ!!!

06 ನವೆಂ 09

ಸಖೀ,

 

ಈಗೀಗ ನನಗೆ

ಕಂಡು ಬರುತ್ತಿಲ್ಲ

ಹೆಚ್ಚಾಗಿ ಪಂಚಾಂಗದ

ಅಗತ್ಯ,

 

ಈಗೀಗ ನನಗೆ

ಕಂಡು ಬರುತ್ತಿಲ್ಲ

ಹೆಚ್ಚಾಗಿ ಪಂಚಾಂಗದ

ಅಗತ್ಯ,

 

ಏಕೆಂದರೆ,

ನಾನರಿವೆ ಶುಕ್ಲ ಪಕ್ಷದ

ಕೊನೆಯ ದಿನವೆಂದು

ನೀನು ಮನಬಿಚ್ಚಿ

ನಗುತಿರುವಾಗ,

ಮತ್ತು ಕೃಷ್ಣ ಪಕ್ಷದ

ಕೊನೆಯ ದಿನವೆಂದು

ನೀನು ಸಿಡುಕುತಿರುವಾಗ

ಅನಗತ್ಯ!!!


ಬೂದಿಯಾಗುವವರು!!!

27 ಮೇ 09

ಸಖೀ,
ಕಂಡಿರಬಹುದು
ನೂರಾರು ಬಗೆಯ
ನಗುವ ಹೂಗಳನು ನೀನು;
ಆದರೆ,
ಆ ನಗೆಯ ಹಿಂದಡಗಿರುವ
ನೋವ ನೀ ಅರಿತಿರುವೆಯೇನು?

ಅವುಗಳೊಳಗೂ ಇವೆ ಬಯಕೆಗಳು,
ಅಸಹಾಯಕತೆಯಿಂದಾಗಿ
ಸುಡುತ್ತಿರುವ ಬೇಗೆಗಳು;

ದೇಗುಲದಿ ಹರಿಯ ಪಾದ
ಸೇರಿ ಮುಕ್ತರೆನಿಸಿಕೊಂಬ
ಬಯಕೆಗಳಿರುವಂತೆಯೇ,
ಮುತ್ತೈದೆಯರ ಮುಡಿಯೇರಿ
ಹೆಮ್ಮೆ ಪಡಬೇಕೆಂಬ
ಬಯಕೆಗಳೂ ಇವೆ.

ಆದರೆ,
ದೇಗುಲವ ಸೇರಿದವುಗಳೆಷ್ಟೋ?
ಶವಗಳ ಜೊತೆ ಸೇರಿ
ಚಿತೆಯೇರಿದವುಗಳೆಷ್ಟೋ?
ರಾಜಕೀಯ ಪುಡಾರಿಗಳ
ಕೊರಳ ಬಳಸಿ,
ಉಸಿರುಗಟ್ಟಿಸಿಕೊಂಡು
ಸತ್ತವುಗಳೆಷ್ಟೋ?
ಮದುವೆ – ಸಮ್ಮಾನ
ಸಮಾರಂಭಗಳಲಿ,
ಜನರ ಕಾಲಡಿಯಲಿ ಬಿದ್ದು
ನರಳಾಡಿದವುಗಳೆಷ್ಟೋ?
ಇನ್ನು, ಇದ್ದಲ್ಲೇ ಇದ್ದು,
ಬಿಸಿಲ ಬೇಗೆಯಲಿ ಉರಿದು
ಬೂದಿಯಾದವುಗಳೆಷ್ಟೋ?

ಅಂತೆಯೇ ನಾವೂ ಕೂಡ,
ನಮ್ಮೆಲ್ಲಾ ಬಯಕೆಗಳ
ಬಚ್ಚಿಟ್ಟುಕೊಂಡು
ನಮ್ಮ ಅಸಹಾಯಕತೆಯಿಂದಾಗಿ
ಒಳಗೊಳಗೆ ನೊಂದು,
ಬಡತನದ ಬೇಗೆಯಲಿ ಬೆಂದು,
ಬೂದಿಯಾಗುವವರೇ
ಮುಂದೊಂದು ದಿನ.

ಆದರೂ, ನೋವ ಮರೆತು
ನಗುತಿರುವ ಆ ಹೂಗಳಂತೆ,
ನಗುತಿರಬಾರದೇ
ನಾವೂ, ದಿನ – ಪ್ರತಿದಿನ?
*-*-*-*-*-*-*-*