ಮುತ್ತುಗಳಂತಿರಲಿ!

07 ಸೆಪ್ಟೆಂ 12

ಸಖೀ,

ನನ್ನ ಮೇಲಿರುವ 
ನಿನ್ನ ನಂಬಿಕೆ,
ನಿನ್ನ ಮೇಲಿರುವ 
ನನ್ನ ನಂಬಿಕೆ,
ಇವು ನೀರ ಮೇಲಿನ 
ಗುಳ್ಳೆಗಳಂತಿರದಿರಲಿ,

ಆಳದಲ್ಲೆಲ್ಲೋ
ಚಿಪ್ಪುಗಳೊಳಗೆ
ತಮ್ಮ ನೆಲೆಯನ್ನು
ಕಂಡುಕೊಳ್ಳುವ
ಮುತ್ತುಗಳಂತಿರಲಿ!
**********

ನಂಬಿಕೆಯೇ ಬಾರದು ಅನ್ಯರ ಮೇಲೆ!

21 ಏಪ್ರಿಲ್ 12

ಸಖೀ,
ನೀನು ಅರಿತಿರುವ ಮಾತುಗಳನ್ನೆಲ್ಲಾ ನಾನು ಅರಿತಿರಲೇ ಬೇಕೆಂದೇನೂ ಇಲ್ಲ
ನೀನಾಡುವ ಮಾತುಗಳಿಗೆ ಕೊಡುವ ಕಾರಣಗಳು ನಿನಗಷ್ಟೇ ಗೊತ್ತು ನನಗಲ್ಲ

ಕಾರಣಗಳನ್ನು ನನಗೆ ತಿಳಿಸಿ ಮಾತನಾಡಿದರೆ ಮಾತಿನ ಅರ್ಥ ನನಗಾದೀತು
ಏಕೆ ಹೀಗೆ ಮಾತನಾಡುತಿರುವೆ ಎಂದರಿಯದೇ ನನಗೆಲ್ಲಾ ಅಪಾರ್ಥವಾದೀತು

ಮಾತಿಗೆ ಮಾತು ಬೆಳೆದು ವಾತಾವರಣ ಬಿಸಿಯೇರುವುದು ಸರ್ವೇ ಸಾಮಾನ್ಯ
ವಾತಾವರಣವ ತಿಳಿಯಾಗಿಸಿ ಮುನ್ನಡೆಯುವುದನು ಬಿಟ್ಟರೆ ಇಲ್ಲ ಮಾರ್ಗ ಅನ್ಯ

ನಿನ್ನೆ ತನಕ ನಿನಗೆ ನನ್ನ ಮೇಲಿದ್ದ ಆದರಾಭಿಮಾನಕ್ಕೆ ಜವಾಬ್ದಾರಳು ನೀನಷ್ಟೇ
ಇಂದು ಅದು ಬದಲಾಗಿದ್ದರೆ ನಿಜವಾಗಿ ನೀನೇ ಜವಾಬ್ದಾರಳು ಅದಕೆ ನಿನ್ನೆಯಷ್ಟೇ

ಮಳೆ ಬಂದಾಗ ಛತ್ರಿಯನು ಬಳಸಿ ಮಳೆಯಿಂದ ಬಚಾವಾಗಿ, ಮುಂದೆ ಸಾಗಬೇಕು
ಬಿಸಿಲಿನ ಝಳಕ್ಕೆ ಬಾಯಾರಿದಾಗ ನೀರು ಕುಡಿದು ಅದನು ಪರಿಹರಿಸಿಕೊಳ್ಳಬೇಕು

ಇಲ್ಲಿ ಎಲ್ಲವೂ ಕ್ಷಣಿಕ, ವಿಷಯ, ವಸ್ತು, ಮಾತು, ಕೋಪ, ಹಾಗೇ ಮನುಷ್ಯರೂ ಕೂಡ
ಆದರೆ ಸದಾ ಸಾಗುತ್ತಾ ಇರುವುದು ನಮ್ಮ ಜೊತೆಗೆ ನಮ್ಮಲ್ಲಿನ ಪ್ರೀತಿಯಷ್ಟೇ ನೋಡ

ಪ್ರೀತಿಸಿದವರೇ ಕೈಕೊಟ್ಟು ದೂರವಾದರೆ ಮತ್ತೀ ಒಂಟಿ ಜೀವನ ಕಾಡುವುದು ಬಿಡದೇ
ನಂಬಿಕೆ ಬಾರದು ಅನ್ಯರ ಮೇಲೆ, ಬಾಳಬೇಕಾಗಬಹುದು ಯಾರೊಂದಿಗೂ ಸೇರದೇ!

***************************


ದೇವಾ, ನೈವೇದ್ಯ ಸಿಗದಿದ್ದರೆ ಬೇಡ ಕೋಪ!

30 ಆಗಸ್ಟ್ 11

 

ಲಂಚ ಪಡೆಯುವುದೂ ತಪ್ಪು ಹಾಗೂ ಲಂಚ ಕೊಡುವುದೂ ತಪ್ಪು
ಮಹಾತ್ಮ ಹಜಾರೆ ನಮ್ಮೆಲ್ಲರ ಕಣ್ಣು ತೆರೆಸಿದ್ದಾರೆ, ನೀನೂ ಒಪ್ಪು

ಪರರಿಗೆ ಅನ್ಯಾಯವಾಗದಂತೆ ಬಾಳುವುದದು ನಮ್ಮ ಕರ್ತವ್ಯ
ನಮಗೆ ಒಳ್ಳೆಯದಾಗುವಂತೆ ಸಹಕರಿಸುವುದು ನಿನ್ನ ಕರ್ತವ್ಯ

ನಮ್ಮ ಸತ್ಕರ್ಮಗಳೇ ನಮ್ಮನ್ನು ಕಾಪಾಡಬೇಕು ಎಂಬ ನಂಬಿಕೆ
ನಮ್ಮ ಕುಕರ್ಮಗಳಿಂದಲೇ ನಮಗೆ ಶಿಕ್ಷೆ ಎಂಬುವುದೂ ನಂಬಿಕೆ

ನಾವು ಏನೆಂಬುದ ನೀನು ಅರಿತಿರುವೆ ಹಾಗಾಗಿ ನಮಗಿಲ್ಲ ಭಯ
ನಮ್ಮ ಅರ್ಹತೆಗೆ ತಕ್ಕುದಾದುದೇ ದಕ್ಕುವುದು ಅದು ನಿನ್ನ ನ್ಯಾಯ

ಎಲ್ಲವೂ ನಮ್ಮ ಆಚಾರ ವಿಚಾರಗಳಿಂದಲೇ ಆಗಬೇಕು ನಿರ್ಧಾರ
ಹಾಗಾಗಿ ನಿನಗೆ ಲಂಚ ನೀಡಲಾರೆವಿನ್ನು, ಇದು ನಮ್ಮ ನಿರ್ಧಾರ

ಇನ್ನು ನಿನಗೆ  ಪೂಜೆ, ನೈವೇದ್ಯ, ಕಾಣಿಕೆ, ಸಿಗದಿದ್ದರೆ ಬೇಡ ಕೋಪ
ಅಣ್ಣರ ಕಣ್ಣುಗಳಿಗೆಲ್ಲಾದರೂ ಬಿದ್ದರೆ ನಮ್ಮಿಬ್ಬರ ಗತಿ, ಅಯ್ಯೋ ಪಾಪ

ಏಕೆಂದರೆ ಲಂಚ ಪಡೆಯುವುದೂ ತಪ್ಪು, ಲಂಚ ಕೊಡುವುದೂ ತಪ್ಪು
ಮಹಾತ್ಮ ಹಜಾರೆ ನಮ್ಮೆಲ್ಲರ ಕಣ್ಣು ತೆರೆಸಿದ್ದಾರೆ, ನೀನೂ ಒಪ್ಪು!
************************


ಜರ್ದಾರಿ-ಒಬಾಮಾ ಸಂವಾದ…!!!

28 ಏಪ್ರಿಲ್ 09
ಜರ್ದಾರಿ: ಒಸಾಮ-ಬಿನ್-ಲಾಡೆನ್ ಜೀವಂತವಾಗಿಲ್ಲ.
ಒಬಾಮಾ: ನಾವು ಇದನ್ನು ನಂಬೋಲ್ಲ.
 
ಜರ್ದಾರಿ: ನಿಜವಾಗಿಯೂ ಆತ ಜೀವಂತವಾಗಿಲ್ಲ.
ಒಬಾಮಾ: ನಿಜವಾಗಿಯೂ ನಾವು ಇದನ್ನು ನಂಬೋಲ್ಲ.
 
ಜರ್ದಾರಿ: ಒಸಾಮ ಸತ್ತು ತಿಂಗಳುಗಳೇ ಆಗಿವೆ.
ಒಬಾಮಾ: ಒಸಾಮ ಸತ್ತ ಸುದ್ದಿ ನಮಗೆ ದೊರೆತೇ ಇಲ್ಲ.
 
ಜರ್ದಾರಿ: ಒಸಮಾ ಸಾವಿನ ಸುದ್ದಿ ನಿಜಕ್ಕೂ ನಂಬಲರ್ಹ.
ಒಬಾಮಾ: ನೀವ್ಯಾರೂ ನಂಬಲರ್ಹರಲ್ಲ, ಆ ಸುದ್ದಿಯೂ ಕೂಡ.
 
ಜರ್ದಾರಿ: ನಮ್ಮನ್ನು ನಂಬಬೇಡಿ, ಆದರೆ ಈ ಸುದ್ದಿಯ ಮೂಲವನ್ನಾದರೂ ನಂಬಿ.
ಒಬಾಮಾ: ಹೇಗೆ ನಂಬಬಹುದು ಆ ಸುದ್ದಿಯ ಮೂಲದ ಬಗ್ಗೆ ನಮಗೆ ಗೊತ್ತೇ ಇಲ್ಲ.
 
ಜರ್ದಾರಿ: ನಮಗೆ ಗೊತ್ತಿದೆ ಆ ನಂಬಲರ್ಹ ಮೂಲ ಯಾವುದೆಂದು. ದಯವಿಟ್ಟು ನಂಬಿ.
ಒಬಾಮಾ: ಹೇಗೆ ನಂಬಬಹುದು ಸ್ವಾಮೀ, ಯಾವುದದು ಅಷ್ಟು ನಂಬಿಕೆಯ ಮೂಲ?
 
ಜರ್ದಾರಿ: ಹೀಗೆಯೇ ಬನ್ನಿ, ಅಲ್ಲಿ ಒಳಕೋಣೆಯಲ್ಲಿ ಇದ್ದಾನೆ, ಈ ಸುದ್ದಿಯ ನಂಬಲರ್ಹ ಮೂಲ.
ಒಬಾಮಾ: ಯಾರವನು ನಿಮ್ಮ ಒಳಕೋಣೆಯಲ್ಲಿ ಕುಳಿತಿರುವವನು, ಅಷ್ಟು ನಂಬಿಕೆಯ ವ್ಯಕ್ತಿ?
 
ಜರ್ದಾರಿ: ನೀವು ಅವನ ಮಾತನ್ನಲ್ಲದೆ ಇನ್ಯಾರ ಮಾತನ್ನೂ ನಂಬೋಲ್ಲ ಅಂತ ಗೊತ್ತು. ಹೋಗಿ ಅಲ್ಲಿದ್ದಾನೆ ನೋಡಿ ಒಸಾಮಾ-ಬಿನ್-ಲಾಡೆನ್. ಅವನೇ ಹೇಳ್ಸಿರೋದು ನನ್ನಿಂದ ಇದನ್ನೆಲ್ಲಾ…
🙂